ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಕ್ಷಯ ರೋಗಿಗಳ ಪತ್ತೆಗಾಗಿ ಕಳೆದ ವರ್ಷ ಡಿ. 17ರಿಂದ ಆರಂಭವಾಗಿದ್ದ 100 ದಿನಗಳ ಸರ್ವೆ ಕಾರ್ಯ ಮಾರ್ಚ್ 17ಕ್ಕೆ ಮುಗಿದಿದೆ. ಒಟ್ಟು 2,25,059 ಮಂದಿಯನ್ನು ಪರೀಕ್ಷಿಸಲಾಗಿದ್ದು, 121 ಮಂದಿಯಲ್ಲಿ ಕ್ಷಯ ಪತ್ತೆಯಾಗಿದೆ. 21 ಗ್ರಾಮ ಪಂಚಾಯಿತಿಗಳನ್ನು ಕ್ಷಯ ಮುಕ್ತ ಗ್ರಾಮ ಪಂಚಾಯಿತಿಗಳನ್ನಾಗಿ ಆರೋಗ್ಯ ಇಲಾಖೆ ಘೋಷಿಸಿದೆ.
ಮದ್ಯಪಾನಿಗಳು, ಧೂಮಪಾನಿಗಳು, ಎಚ್‌ಐವಿ ಪೀಡಿತರು, ಹಿಂದೆ ಕ್ಷಯ ರೋಗ ಬಂದಿದ್ದವರು, ಅಪೌಷ್ಠಿಕತೆಯಿಂದ ಬಳಲುತ್ತಿರುವವರು, ಮಧುಮೇಹಿಗಳು, 60 ವರ್ಷ ದಾಟಿದವರು ಸೇರಿದಂತೆ ಕ್ಷಯ ರೋಗಕ್ಕೆ ಹೆಚ್ಚು ಅಪಾಯ ಹೊಂದಿರುವ ಜನರನ್ನು ಪರೀಕ್ಷಿಸಲಾಗಿದೆ.
ಒಟ್ಟು ನೂರು ದಿನಗಳ ಕಾಲ ನಡೆದ ಈ ಸಮೀಕ್ಷೆಯಲ್ಲಿ ಇಲಾಖೆಯ ಆರೋಗ್ಯ ಕಾರ್ಯಕರ್ತರು, ಆಶಾ ಕಾರ್ಯಕರ್ತೆಯರು ಸೇರಿದಂತೆ ಎಲ್ಲರ ನೆರವನ್ನೂ ಪಡೆಯಲಾಗಿತ್ತು. ಈ ವೇಳೆ ಈಗಾಗಲೇ ಇರುವ ರೋಗಿಗಳ ಜೊತೆಗೆ ಹೊಸ ರೋಗಿಗಳೂ ಪತ್ತೆಯಾದರು.
ಸರ್ಕಾರ ನಿಗದಿಪಡಿಸಿದ್ದ 6 ಮಾನದಂಡಗಳ ಪ್ರಕಾರ ಜಿಲ್ಲೆಯ ಬಲ್ಲಮಾವಟಿ, ಗಾಳಿಬೀಡು, ಹಾಕತ್ತೂರು, ಮಕ್ಕಂದೂರು, ನಾಪೋಕ್ಲು, ಸಂಪಾಜೆ, ಎಮ್ಮೆಮಾಡು, ಅಯ್ಯಂಗೇರಿ, ದೇವರಪುರ, ಪೊನ್ನಪ್ಪಸಂತೆ, ಕದನೂರು, ಪಾಲಿಬೆಟ್ಟ ಗ್ರಾಮ ಪಂಚಾಯಿತಿಗಳು ಕ್ಷಯ ಮುಕ್ತ ಪಂಚಾಯಿತಿಗಳು ಎಂಬ ಶ್ರೇಯಕ್ಕೆ ಪಾತ್ರವಾಗಿವೆ.
‘ನಿಕ್ಷಯ್ ಮಿತ್ರ’ಕ್ಕೆ ಇನ್ನಷ್ಟು ಜನ ಕೈ ಜೋಡಿಸಬೇಕಿದೆ
ಭಾರತವನ್ನು ಕ್ಷಯ ಮುಕ್ತವನ್ನಾಗಿಸುವ ಅಭಿಯಾನದಡಿಯಲ್ಲಿ ಪ್ರತಿಯೊಬ್ಬ ಕ್ಷಯರೋಗಿಯನ್ನು ಅವರ ಚಿಕಿತ್ಸೆಯ ಸಂದರ್ಭದಲ್ಲಿ ದತ್ತು ಪಡೆದುಕೊಂಡು ಅವರಿಗೆ ಬೇಕಾದ ಪೌಷ್ಟಿಕ ಅಹಾರ, ಚಿಕಿತ್ಸೆ ಮತ್ತು ಬೆಂಬಲ, ಕೌಶಲ್ಯಾಧರಿತ ತರಬೇತಿ ಹಾಗೂ ಹೆಚ್ಚುವರಿ ಪೌಷ್ಟಿಕ ಪೂರಕ ಅಹಾರ ನೀಡಲು ಸಹಕಾರ ಸಂಘಗಳು, ಸ್ವಯಂಸೇವಾ ಸಂಸ್ಥೆಗಳು, ಇತರ ಸಂಘ ಸಂಸ್ಥೆಗಳು, ಚುನಾಯಿತ ಪ್ರತಿನಿಧಿಗಳು, ರಾಜಕೀಯ ಪಕ್ಷಗಳು, ಉದ್ಯಮಿಗಳು ಹಾಗೂ ಇತರೆ ದಾನಿಗಳು ‘ನಿಕ್ಷಯ್ ಮಿತ್ರ’ರಾಗಿ ನೋಂದಾಯಿಸಿಕೊಳ್ಳಲು ಸರ್ಕಾರ ಅವಕಾಶ ನೀಡಿದೆ.
ಇವರು ಕ್ಷಯ ರೋಗಿಗಳಿಗೆ ಬೇಕಾದ ಪೌಷ್ಠಿಕ ಆಹಾರವನ್ನು ವಿತರಿಸಿ, ಅವರು ಗುಣಮುಖರಾಗಲು ಸಹಕರಿಸಬೇಕಿದೆ.
ಬಹುತೇಕ ಕ್ಷಯ ರೋಗಿಗಳು ಬಡವರು. ಅವರಿಗೆ ಸರ್ಕಾರ ಉಚಿತವಾಗಿ ಔಷಧ ನೀಡುತ್ತದೆ. ಕೇವಲ ಔಷಧ ಮಾತ್ರದಿಂದಲೇ ಗುಣಮುಖರಾಗಲು ಸಾಧ್ಯವಿಲ್ಲ. ಅದಕ್ಕೆ ತಕ್ಕಂತೆ ಪೌಷ್ಠಿಕ ಆಹಾರವನ್ನೂ ಸೇವಿಸಬೇಕಿದೆ. ಬಡವರಿಂದ ಪೌಷ್ಠಿಕ ಆಹಾರ ತೆಗೆದುಕೊಳ್ಳುವುದು ಕಷ್ಟ ಸಾಧ್ಯ. ಹಾಗಾಗಿ, ದಾನಿಗಳು ಇವರ ನೆರವಿಗೆ ಬರಲಿ ಎಂಬ ಉದ್ದೇಶದಿಂದ ‘ನಿಕ್ಷಯ್ ಮಿತ್ರ’ ಯೋಜನೆಯನ್ನು ಸರ್ಕಾರ ಜಾರಿಗೆ ತಂದಿದೆ.
ಜಿಲ್ಲೆಯಲ್ಲಿ ಒಟ್ಟು 121 ಕ್ಷಯ ರೋಗಿಗಳು ಪತ್ತೆಯಾಗಿದ್ದರೂ, 88 ಮಂದಿಗೆ ‘ನಿಕ್ಷಯ್ ಮಿತ್ರ’ರ ಸಹಕಾರ ಸಿಕ್ಕಿದೆ. ಇನ್ನುಳಿದ ರೋಗಿಗಳಿಗೆ ‘ನಿಕ್ಷಯ್ ಮಿತ್ರ’ರ ಸಹಕಾರ ಸಿಗಬೇಕಿದೆ.
ಆಸಕ್ತರು ‘ನಿಕ್ಷಯ್ ಮಿತ್ರ’ ನೋಂದಣಿಗಾಗಿ https://communitysupport.nikshay.in ಜಾಲತಾಣಕ್ಕೆ ಭೇಟಿ ನೀಡಿ ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂ: 08272- 221292 ಸಂಪರ್ಕಿಸಬಹುದು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.