ADVERTISEMENT

ಕೊಡಗು: ತಗ್ಗದ ತಾಪಮಾನ; ನರ್ಸರಿಗಳಲ್ಲಿ ತಗ್ಗಿದ ಬೇಡಿಕೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2023, 23:30 IST
Last Updated 11 ಜೂನ್ 2023, 23:30 IST
ನಾಪೋಕ್ಲು ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಕೃಷಿಕರನ್ನು ಆಕರ್ಷಿಸುತ್ತಿರುವ ನರ್ಸರಿ
ನಾಪೋಕ್ಲು ಪಟ್ಟಣದ ಮುಖ್ಯರಸ್ತೆಯ ಬದಿಯಲ್ಲಿ ಕೃಷಿಕರನ್ನು ಆಕರ್ಷಿಸುತ್ತಿರುವ ನರ್ಸರಿ   

ಸಿ.ಎಸ್.ಸುರೇಶ್

ನಾಪೋಕ್ಲು: ಮುಂಗಾರು ಆರಂಭಗೊಳ್ಳುತ್ತಿದ್ದಂತೆ ಹೋಬಳಿ ವ್ಯಾಪ್ತಿಯಲ್ಲಿ ನರ್ಸರಿಗಳೂ ತಲೆ ಎತ್ತುತ್ತಿವೆ. ಕಾಫಿ, ಕಾಳುಮೆಣಸು, ಅಡಿಕೆ, ಕಿತ್ತಳೆ, ಬೆಣ್ಣೆ ಹಣ್ಣು ಸೇರಿದಂತೆ ವಿವಿಧ ಗಿಡಗಳನ್ನು ರೈತರು ಬಿರುಸಿನಿಂದ ಖರೀದಿಸುವ ಕಾರಣ ನರ್ಸರಿಗಳಿಗೆ ಬೇಡಿಕೆ ಇರುತ್ತದೆ. ಆದರೆ ಈ ಬಾರಿ ಹೆಚ್ಚಿದ ತಾಪಮಾನ ಹಾಗೂ ಇನ್ನೂ ಆರಂಭಗೊಳ್ಳದ ಮುಂಗಾರು ಮಳೆಯಿಂದಾಗಿ ರೈತರು ನರ್ಸರಿಗಳತ್ತ ಮುಖ ಮಾಡುತ್ತಿಲ್ಲ.

ನರ್ಸರಿಗಳ ಮೂಲಕ ಗಿಡ ಮಾರಾಟದಿಂದ ಲಾಭ ಹೊಂದಲು ಬಯಸಿದವರಿಗೆ ನಿರಾಸೆ ಕಾಡುತ್ತಿದೆ. ಮುಂಗಾರು ಆರಂಭಗೊಳ್ಳುವ ನಿರೀಕ್ಷೆಯೊಂದಿಗೆ ನರ್ಸರಿಗಳು ತಲೆ ಎತ್ತಿದ್ದು ವಾಣಿಜ್ಯ ಬೆಳೆಗಳ ಗಿಡಗಳ ಜೊತೆಜೊತೆಗೆ ಹಣ್ಣಿನ, ಹೂವಿನ ಗಿಡಗಳ ವ್ಯಾಪಾರಕ್ಕೂ ಅಣಿಯಾಗಿದೆ. ಆದರೆ ಗ್ರಾಹಕರು  ನಿರೀಕ್ಷೆಯ ಮಟ್ಟದಲ್ಲಿ ಬರುತ್ತಿಲ್ಲ. ಮಳೆ ಆರಂಬಗೊಳ್ಳದೆ ಇರುವುದರಿಂದ ರೈತರು ಕೃಷಿ ಚಟುವಟಿಕೆಯಲ್ಲಿ ತೊಡಗಿಸಿಕೊಂಡಿಲ್ಲ. ಗಿಡಗಳನ್ನು ನೆಡುವ ಕಾರ್ಯಕ್ಕೂ ಸಿದ್ಧರಾಗಿಲ್ಲ. ಅಂತೆಯೇ ನರ್ಸರಿಗಳಿಗೆ ಬೇಡಿಕೆ ಕುಸಿದಿದೆ.

ADVERTISEMENT

ಹೋಬಳಿ ವ್ಯಾಪ್ತಿಯಲ್ಲಿ ಮುಂಗಾರು ಆರಂಭದಲ್ಲಿ ಕೃಷಿ ಚಟುವಟಿಕೆಗಳಿಗೆ ಆದ್ಯತೆ. ನರ್ಸರಿಗಳಲ್ಲಿ ವ್ಯಾಪಾರವೂ ಅಧಿಕ. ಅಂತೆಯೇ ಕೃಷಿಕರ ಆಸಕ್ತಿಯನ್ನು ಗಮನದಲ್ಲಿಸಿಕೊಂಡು ಅಲ್ಲಲ್ಲಿ ನರ್ಸರಿಗಳು ತಲೆ ಎತ್ತುತ್ತಿವೆ. ಗ್ರಾಮೀಣ ಪ್ರದೇಶಗಳಲ್ಲಿ ಮುಖ್ಯರಸ್ತೆಗಳ ಬದಿಯಲ್ಲಿ ಹಲವು ನರ್ಸರಿಗಳು ಕಂಡುಬರುತ್ತಿವೆ. ಅಡಿಕೆ, ತೆಂಗು, ಕಾಫಿ ಮುಂತಾದ ವಾಣಿಜ್ಯ ಬೆಳೆಗಳ ಗಿಡಗಳು ಮಾತ್ರವಲ್ಲದೇ ವೈವಿಧ್ಯಮಯ ಹೂವಿನ ಹಾಗೂ ಹಣ್ಣಿನ ಗಿಡಗಳ ಮಾರಾಟಕ್ಕೂ ಸಿದ್ದತೆ ನಡೆಸಿವೆ.

ಜಿಲ್ಲೆಯ ವಾತಾವರಣವು ಹೂವಿನ ಗಿಡಗಳಿಗೆ ಸೂಕ್ತವಾಗಿದ್ದು ಪ್ರತಿವರ್ಷ ಮುಂಗಾರಿನಲ್ಲಿ ಮಹಿಳೆಯರು ಹೆಚ್ಚಾಗಿ ಹೂವಿನ ಗಿಡಗಳನ್ನು ಕೊಳ್ಳಲು ಆಸಕ್ತಿ ವಹಿಸುತ್ತಿದ್ದರು. ರಾಂಬುಟನ್, ಲಿಚಿ, ಸಪೋಟ ಹಣ್ಣಿನ ಗಿಡಗಳು, ವೈವಿಧ್ಯಮಯ ಹಲಸಿನ ಗಿಡಗಳು ಬೇಡಿಕೆ ಇರುತಿತ್ತು. ದೇಶ-ವಿದೇಶಗಳ ಹಣ್ಣಿನ ಗಿಡಗಳನ್ನು ಕೊಳ್ಳಲೂ ಕೃಷಿಕರು ಆಸಕ್ತಿ ವಹಿಸುತ್ತಿದ್ದರು. ಕಾಳುಮೆಣಸಿನ ಬಳ್ಳಿಗಳು. ಅಡಿಕೆ ಗಿಡಗಳಿಗೆ ರೈತರು ಹೆಚ್ಚಿನ ಬೇಡಿಕೆ ಸಲ್ಲಿಸುತ್ತಿದ್ದರು. ಮಳೆಯ ನಿರೀಕ್ಷೆಯಲ್ಲಿರುವ ರೈತರಿಂದ ಇನ್ನೂ ಸ್ಪಂದನೆ ಸಿಗದಿರುವುದು ವ್ಯಾಪಾರಿಗಳಿಗೆ ನಿರಾಸೆ ತಂದಿದೆ.

ಅಧಿಕ ಬೇಡಿಕೆ ಇರುವ ಚಂದ್ರಗಿರಿ, ರೋಬಸ್ಟಾ, ಕಟವಾಯಿ ಸೇರಿದಂತೆ ಕಾಫಿಯ ವಿವಿಧ ತಳಿಗಳು, ತೀರ್ಥಹಳ್ಳಿ ತಳಿಯ ಅಡಿಕೆಗಿಡ, ಬೇಗನೆ ಫಸಲು ಕೊಡುವ, ಹೆಚ್ಚು ಎತ್ತರ ಬೆಳೆಯದ ತೆಂಗಿನ ಗಿಡಗಳನ್ನು ಅಧಿಕವಾಗಿ ಮಾರಾಟ ಮಾಡಲು ನರ್ಸರಿ ಮಾಡಿರುವ ಹರೀಶ್ ಸಜ್ಜಾಗಿದ್ದಾರರೆ, ₹10ರಿಂದ ₹-15ಕ್ಕೆ ಗಿಡಗಳನ್ನು ನಾಪೋಕ್ಲುವಿನಲ್ಲಿ ಮಾರಾಟ ಮಾಡುತ್ತಿದ್ದಾರೆ. ಸದ್ಯ ಬಿಸಿಲಿನಿಂದಾಗಿ ನರ್ಸರಿಯಲ್ಲಿ ಗಿಡಗಳನ್ನು ರಕ್ಷಿಸಿಕೊಳ್ಳುವುದೇ ಸಮಸ್ಯೆಯಾಗಿದೆ ಎನ್ನುತ್ತಾರೆ ಅವರು.

ಹಿಂದೆ ವಿಶೇಷವಾದ ಗಿಡಗಳು ಬೇಕೆಂದರೆ ಹೊರಜಿಲ್ಲೆಗಳಿಗೆ, ನೆರೆಯ ಕೇರಳ ರಾಜ್ಯಕ್ಕೆ ತೆರಳಬೇಕಿತ್ತು. ಸ್ಥಳೀಯವಾಗಿ ಉತ್ತಮ ಗಿಡಗಳು ಲಭಿಸುತ್ತಿವೆ. ಕೇರಳದಿಂದ ಹೆಚ್ಚಿನ ಗಿಡಗಳು ನರ್ಸರಿಗಳಿಗೆ ರವಾನೆಯಾಗುತ್ತಿವೆ. ಮಳೆ ಆರಂಭವಾಗದೇ ಗಿಡಗಳನ್ನು ನೆಡುವಂತಿಲ್ಲ ಎಂದು ರೈತರು ಅಭಿಪ್ರಾಯ ಪಡುತ್ತಾರೆ.

ನರ್ಸರಿಯಲ್ಲಿರುವ ವೈವಿಧ್ಯಮಯ ಗಿಡಗಳು
ನಾಪೋಕ್ಲು ಪಟ್ಟಣದ ಹೊರವಲಯದ ನರ್ಸರಿಯಲ್ಲಿ ಮಾರಾಟಕ್ಕಿರಿಸಿರುವ ಕಾಳುಮೆಣಸಿನ ಬಳ್ಳಿಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.