ಮಡಿಕೇರಿ: ಕೊಡಗಿನ ಪ್ರಕೃತಿ ಹಾಗೂ ಇಲ್ಲಿನ ಶ್ರೀಮಂತ ಸಂಸ್ಕೃತಿಯನ್ನು ಸುರಕ್ಷಿತವಾಗಿ ಕಾಪಾಡಿಕೊಳ್ಳುವುದಕ್ಕೆ ಪ್ರವಾಸೋದ್ಯಮಿಗಳೂ ಸೇರಿದಂತೆ ಎಲ್ಲರೂ ಗಮನ ಕೊಡಬೇಕು ಎಂದು ಜಿಲ್ಲಾಧಿಕಾರಿ ವೆಂಕಟ್ ರಾಜಾ ಕಿವಿಮಾತು ಹೇಳಿದರು.
ಇಲ್ಲಿನ ಹೊರವಲಯದಲ್ಲಿ ಶನಿವಾರ ‘ಕೂರ್ಗ್ ಹೋಟೆಲ್ಸ್, ರೆಸಾರ್ಟ್ ಅಸೋಸಿಯೇಷನ್‌ನ ನೂತನ ವೆಬ್‌ಸೈಟ್, ಲಾಂಛನ’ ಅನಾವರಣಗೊಳಿಸಿ ಅವರು ಮಾತನಾಡಿದರು.
ಕೊಡಗಿನಲ್ಲಿರುವ ಎಲ್ಲ ಪ್ರವಾಸೋದ್ಯಮಿಗಳೂ ಒಗ್ಗಟ್ಟಿನಿಂದ ಪರಿಸರ ಸ್ನೇಹಿಯಾದ ವಿನೂತನ ಯೋಜನೆ ಜಾರಿಗೆ ಮುಂದಾದರೆ ಖಂಡಿತವಾಗಿಯೂ ಜಿಲ್ಲೆಯಲ್ಲಿ ಪ್ರವಾಸೋದ್ಯಮಕ್ಕೆ ಉಜ್ವಲ ಭವಿಷ್ಯವಿದೆ ಎಂದು ಪ್ರತಿಪಾದಿಸಿದರು.
ಕುಶಾಲನಗರ - ಮಡಿಕೇರಿ ನಡುವಿನ ಹೆದ್ದಾರಿಯಲ್ಲಿ ಖಾಸಗಿ ಜಾಗ ದೊರಕಿದರೆ ಪ್ರವಾಸಿಗರಿಗಾಗಿಯೇ ಶೌಚಾಲಯ ಮಿನಿ ರೆಸ್ಟೋರೆಂಟ್ ಕಲ್ಪಿಸಬಹುದು. ಮೈಸೂರು - ಕುಶಾಲನಗರ ನಡುವಿನ ಚತುಷ್ಪಥ ಹೆದ್ದಾರಿ ಕಾಮಗಾರಿ ಮುಕ್ತಾಯವಾದ ನಂತರ ಕುಶಾಲನಗರದಲ್ಲಿ ವಾಹನ ದಟ್ಟಣೆ ಇಳಿಮುಖವಾಗುವ ನಿರೀಕ್ಷೆ ಇದೆ ಎಂದರು.
ಮಡಿಕೇರಿಯಲ್ಲಿ ಸೂಕ್ತ ಸ್ಥಳದಲ್ಲಿ ವಾಹನ ನಿಲುಗಡೆ ವ್ಯವಸ್ಥೆ ಕಲ್ಪಿಸಿ, ಅಲ್ಲಿಂದ ಪ್ರವಾಸಿಗರನ್ನು ಪ್ರವಾಸಿ ಸಂಚಾರಿ ವಾಹನಗಳ ಮೂಲಕ ಪ್ರವಾಸೀ ತಾಣಗಳಿಗೆ ಕರೆದೊಯ್ಯುವ ಸೌಲಭ್ಯದತ್ತ ಚಿಂತನೆ ಹರಿಸಬೇಕಿದೆ ಎಂದು ಸಲಹೆ ನೀಡಿದರು.
ಕಾವೇರಿ ಕಲಾಕ್ಷೇತ್ರವನ್ನು ನೆಲಸಮಗೊಳಿಸಿ ಅಲ್ಲಿ ಬಹುಮಹಡಿ ವಾಹನ ನಿಲುಗಡೆಗೆ ಯೋಜನೆ ರೂಪಿಸಲಾಗಿದೆ. ಗಾಂಧಿ ಮೈದಾನದಲ್ಲಿ ಸುಸಜ್ಜಿತ ರಂಗಮಂದಿರ ನಿರ್ಮಿಸಿ ಅಲ್ಲಿಯೂ ವಾಹನ ನಿಲುಗಡೆಗೆ ಸೂಕ್ತ ವ್ಯವಸ್ಥೆ ಯೋಜನೆ ರೂಪಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳವಣಿಗೆ ಸಂಬಂದಿತ ಯಾವುದೇ ರೀತಿಯ ಸಲಹೆಗಳಿದ್ದರೂ ಜಿಲ್ಲಾಡಳಿತಕ್ಕೆ ನೀಡಿ ಎಂದು ಮನವಿ ಮಾಡಿದ ಅವರು, ಜಿಲ್ಲೆಯಲ್ಲಿನ ಪ್ರವಾಸೋದ್ಯಮಿಗಳು ಪರಿಸರ ಸಂರಕ್ಷಣೆಯೊಂದಿಗೆ ಹೊಣೆಯರಿತ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಬೇಕು ಎಂದು ಹೇಳಿದರು.
ಕೂರ್ಗ್ ಹೋಟೇಲ್ಸ್ ರೆಸಾರ್ಟ್ ಅಸೋಸಿಯೇಷನ್ ಅಧ್ಯಕ್ಷ ಕುಂಡ್ಯೋಳಂಡ ದಿನೇಶ್ ಕಾರ್ಯಪ್ಪ ಮಾತನಾಡಿ, ‘ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಕಚೇರಿಯಲ್ಲಿ ನಮ್ಮ ಅಸೋಸಿಯೇಷನ್‌ಗೆ ಕಚೇರಿ ಪ್ರಾರಂಭಿಸಲು ಜಿಲ್ಲಾಧಿಕಾರಿಗಳು ಅವಕಾಶ ನೀಡಿದ್ದಾರೆ’ ಎಂದರು.
ಸ್ಥಳೀಯವಾಗಿ ಮೂಲಸೌಕರ್ಯ ಅಭಿವೖದ್ದಿಗೆ ತಮ್ಮ ಸಿಎಸ್‌ಆರ್ ನಿಧಿಯ ಮೂಲಕ ರೆಸಾರ್ಟ್‌ಗಳು ಮುಂದಾಗುವುದು ಸೂಕ್ತ ಎಂದು ಸಲಹೆ ನೀಡಿದರು.
‘ಧಾರ್ಮಿಕ ಯಾತ್ರಾ ಪ್ರವಾಸ, ‘ಕಾಫಿ ಬ್ಲಾಸಂ’ ಪ್ರವಾಸೋದ್ಯಮ, ಹಾಕಿ ಟೂರಿಸಂ, ರ‍್ಯಾಲಿ ಟೂರಿಸಂ, ದಸರಾ ಟೂರಿಸಂ ಹೀಗೆ ಸಾಕಷ್ಟು ಅವಕಾಶಗಳು ಕೊಡಗಿನಲ್ಲಿ ಪ್ರವಾಸೋದ್ಯಮಕ್ಕಿದೆ’ ಎಂದು ಪ್ರತಿಪಾದಿಸಿದರು.
ಕೊಡಗು ಪ್ರವಾಸಿ ಉತ್ಸವವನ್ನು ಮಡಿಕೇರಿಯಲ್ಲಿ ಸದ್ಯದಲ್ಲೇ ಆಯೋಜಿಸಲಾಗುವುದು. ಪ್ರತೀ ತಿಂಗಳೂ ಒಂದಲ್ಲ ಒಂದು ಪ್ರವಾಸೋದ್ಯಮ ಚಟುವಟಿಕೆಗಳನ್ನು ವಿವಿಧ ಸಂಘಸಂಸ್ಥೆಗಳ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದರು.
ಪ್ರವಾಸೋದ್ಯಮಿ ಮತ್ತು ಸಂಘದ ಗೌರವ ಸಲಹೆಗಾರ ಜಿ.ಚಿದ್ವಿಲಾಸ್ ಮಾತನಾಡಿ, ‘ಕುಶಾಲನಗರಕ್ಕೆ ರೈಲು ಮಾರ್ಗ ಸಂಪರ್ಕ ಯೋಜನೆ ದಶಕಗಳಿಂದ ವಿಳಂಬವಾಗಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದೊಂದಿಗೆ ವ್ಯವಹರಿಸಬೇಕು. ಕೊಡಗಿನಲ್ಲಿ ಹಲವು ತಾಣಗಳಿದ್ದು ಇವುಗಳಿಗೆ ಕಾಯಕಲ್ಪ ನೀಡಿದರೆ, ಈಗಿರುವ ಪ್ರವಾಸಿ ತಾಣಗಳಲ್ಲಿ ಪ್ರವಾಸಿ ದಟ್ಟಣೆ ಕಡಮೆಯಾಗಲು ಸಾಧ್ಯವಿದೆ ಎಂದೂ ಸಲಹೆ ನೀಡಿದರು.
ಪ್ರವಾಸೋದ್ಯಮಿ ಕೊಲ್ಲೀರ ಧರ್ಮಜ, ಪ್ರವಾಸೋದ್ಯಮಿ ಮೋಹನ್ ದಾಸ್, ಜಯಚಿಣ್ಣಪ್ಪ, ಜಗದೀಶ್, ನಗರಸಭೆಯ ಪೌರಾಯುಕ್ತ ರಮೇಶ್, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಬಸಪ್ಪ, ಅಸೋಸಿಯೇಷನ್ ಖಜಾಂಜಿ ಸಾಗರ್ ಭಾಗವಹಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.