
ಮಡಿಕೇರಿ: ಕೊಡಗಿನ ಅಲ್ಲಲ್ಲಿ ಮಂಗಳವಾರ ಹಗುರ ಮಳೆಯಾಗಿದೆ. ಮುಂಗಾರಿನಂತೆ ತೀರಾ ಬಿರುಸಿನ ಮಳೆಯಾಗದಿದ್ದರೂ ಸದ್ಯ ಸುರಿದಿರುವ ಹಗುರದಿಂದ ಸಾಧಾರಣ ಮಳೆಗೆ ಬೆಳೆಗಾರರು ಆತಂಕಗೊಂಡಿದ್ದಾರೆ.
ದಕ್ಷಿಣ ಕೊಡಗಿನ ಕೆಲವೆಡೆ ಹಗುರ ಮಳೆಯಾದರೆ ಉತ್ತರ ಕೊಡಗಿನ ಹಲವೆಡೆ ಗುಡುಗ, ಮಿಂಚಿನ ವಾತಾವರಣ ಇತ್ತು. ಹಲವೆಡೆ ಹಗುರ ಮಳೆಯಾಗಿದೆ.
ಈಗ ಎಲ್ಲೆಡೆ ಕಾಫಿ ಕೊಯ್ಲು ನಡೆಯುತ್ತಿದೆ. ಹಲವೆಡೆ ಇನ್ನೂ ಕಾಫಿ ಆರಂಭವಾಗಿಲ್ಲ. ಆರಂಭವಾಗಿರುವ ಕಡೆ ಕಾಫಿ ಇನ್ನೂ ಒಣಗಿಲ್ಲ. ಈಗ ಮಳೆ ಬಂದರೆ ಕಾಫಿ ಬೆಳೆಗಾರರಿಗೆ ವರ್ಷದ ಫಸಲು ಅಪಾರ ನಷ್ಟವಾಗಲಿದೆ.
ಎಲ್ಲೆಡೆ ಕಾಫಿ ತೋಟಗಳಲ್ಲಿ ಈಗ ಕಾಫಿ ಕೊಯ್ಲು ಅಥವಾ ಕಾಫಿ ಒಣಗಿಸುವ ದೃಶ್ಯಗಳೆ ಕಂಡು ಬರುತ್ತಿವೆ. ಮಳೆ ಬರಲಿದೆ ಎಂಬ ಸಣ್ಣ ಸೂಚನೆಯೂ ಇಲ್ಲದಂತೆ ಬಂದ ಮಳೆಯಿಂದ ಒಣಗಲು ಹಾಕಿದ್ದ ಕಾಫಿಯನ್ನು ಬಹಳಷ್ಟು ಕಡೆ ಸಂರಕ್ಷಿಸಿಕೊಳ್ಳಲೂ ಆಗಿಲ್ಲ. ಒಣಗಲು ಹಾಕಿದ್ದ ಕಾಫಿ ಕೊಚ್ಚಿಕೊಂಡು ಹೋಗದೇ ಇದ್ದರೂ ಅದರ ಗುಣಮಟ್ಟ ಕಡಿಮೆಯಾಗಲು ಈ ಮಳೆ ಸಾಕಾಗಿತ್ತು.
ಸುಬ್ರಹ್ಮಣ್ಯ ಭಾಗಕ್ಕೆ ಹೊಂದಿಕೊಂಡ ಜಿಲ್ಲೆಯ ಭಾಗಗಳಲ್ಲಿ ಗುಡುಗು, ಸಿಡಿಲಿನ ವಾತಾವರಣ ಇತ್ತು. ವಿರಾಜಪೇಟೆ ಹಾಗೂ ಮಡಿಕೇರಿಗಳಲ್ಲೂ ಗುಡುಗು, ಮಿಂಚಿನ ವಾತಾವರಣ ಇತ್ತು. ಮಡಿಕೇರಿಯಲ್ಲಿ ಕೆಲಕಾಲ ತುಂತುರು ಹನಿಗಳು ಬಿದ್ದವು.
ಈಗ ಬಿರುಸಾಗಿ ಮಳೆ ಸುರಿದರೆ ಅಪಾರ ನಷ್ಟ ಖಚಿತ. ಕಾಫಿ ಹಣ್ಣು ಇರುವಾಗಲೆ ಕಾಫಿ ಹೂ ಸಹ ಅರಳುವ ಸಾಧ್ಯತೆ ಇದೆ. ಹಾಗಾಗಿ, ಈ ತುಂತುರು, ಹಗುರ ಮಳೆ ಇಲ್ಲಿಗೆ ನಿಲ್ಲಲ್ಲಿ. ಇದು ಸಾಧಾರಣ, ಭಾರಿ ಮಳೆಯಾಗದಿರಲಿ ಎಂಬುದು ಬೆಳೆಗಾರರ ಒತ್ತಾಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.