ADVERTISEMENT

ಜಾತಿ, ಭಾಷೆ, ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸಿ: ಎನ್.ಯು.ನಾಚಪ್ಪ

​ಪ್ರಜಾವಾಣಿ ವಾರ್ತೆ
Published 19 ಸೆಪ್ಟೆಂಬರ್ 2025, 4:24 IST
Last Updated 19 ಸೆಪ್ಟೆಂಬರ್ 2025, 4:24 IST
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಮೂರ್ನಾಡಿನಲ್ಲಿ ಗುರುವಾರ ಮಾನವ ಸರಪಳಿ ರಚಿಸಿತು
ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕೊಡವ ನ್ಯಾಷನಲ್ ಕೌನ್ಸಿಲ್ ಮೂರ್ನಾಡಿನಲ್ಲಿ ಗುರುವಾರ ಮಾನವ ಸರಪಳಿ ರಚಿಸಿತು   

ಮಡಿಕೇರಿ: ಜಾತಿ ಜನಗಣತಿಯ ವೇಳೆ ಕೊಡವರು ಜಾತಿ-ಭಾಷೆ-ಧರ್ಮದ ಕಾಲಂನಲ್ಲಿ ‘ಕೊಡವ’ ಎಂದೇ ಬರೆಸಬೇಕು ಮತ್ತು ಸರ್ಕಾರ ಸಂಸತ್ ಹಾಗೂ ವಿಧಾನಸಭೆಯಲ್ಲಿ ಕೊಡವರಿಗೆ ವಿಶೇಷ ರಾಜಕೀಯ ಪ್ರಾತಿನಿಧ್ಯ ನೀಡಬೇಕು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದರು.

ಇಲ್ಲಿಗೆ ಸಮೀಪದ ಮೂರ್ನಾಡಿನಲ್ಲಿ ಅವರು 13ನೇ ಮಾನವ ಸರಪಳಿ ರಚಿಸಿ ಮಾತನಾಡಿದರು.

ಈ ಮೂಲಕ ಆ್ಯನಿಮಿಸ್ಟಿಕ್ ಏಕ-ಜನಾಂಗೀಯ ಆದಿಮಸಂಜಾತ ಕೊಡವರ ಸಮಗ್ರ ಸಬಲೀಕರಣಕ್ಕೆ ಕೊಡವರು ಕಟಿಬದ್ಧರಾಗಿರಬೇಕು ಎಂದು ಕರೆ ನೀಡಿದರು.

ADVERTISEMENT

ಅಕ್ರಮ ವಲಸಿಗರು ಕೊಡಗು ಜಿಲ್ಲೆಯಲ್ಲಿ ಕಾರ್ಮಿಕರ ರೂಪದಲ್ಲಿ ಆಶ್ರಯ ಪಡೆದಿದ್ದಾರೆ ಎಂಬ ಆರೋಪಗಳಿವೆ. ಜಾತಿ ಜನಗಣತಿಯ ಸಂದರ್ಭ ಇವರು ಸುಳ್ಳು ಮಾಹಿತಿ ನೀಡಿ ಇಲ್ಲಿನವರೆ ಎಂದು ಮಾಹಿತಿ ನೀಡಿದರೆ ಯಾರು ಹೊಣೆ ಎಂದು ಅವರು ಪ್ರಶ್ನಿಸಿದರು.

ಈಚೆಗೆ ಹೊರರಾಜ್ಯದಿಂದ ಬಂದು ಪೊಲೀಸರ ವಸತಿ ಗೃಹಕ್ಕೆ ನುಗ್ಗಿ ಕಳ್ಳತನ ನಡೆಸಿದ್ದು ಹಾಗೂ ಇತ್ತೀಚೆಗೆ ಹೊರರಾಜ್ಯದವರು ಹೆಚ್ಚಾಗಿ ಜಿಲ್ಲೆಯಲ್ಲಿ ಅಪ‍ರಾಧ ಕೃತ್ಯಗಳಲ್ಲಿ ಸಿಕ್ಕಿ ಬೀಳುತ್ತಿರುವುದು ಇವುಗಳನ್ನೆಲ್ಲ ಗಂಭೀರವಾಗಿ ಪರಿಗಣಿಸಿ ಪೊಲೀಸರು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಟರ್ಕಿ ದೇಶದ ಕಾರ್ಮಿಕರಿಗೆ ಪ್ಯಾರಿಸ್‌ನಲ್ಲಿ ಗೆಸ್ಟ್ ವರ್ಕರ್ ಪರ್ಮಿಟ್ ನೀಡಿದಂತೆ ಕೊಡಗಿನಲ್ಲೂ ಕಾರ್ಮಿಕ ಸಮಸ್ಯೆಯನ್ನು ನೀಗಿಸಲು ವಲಸಿಗ ಕಾರ್ಮಿಕರಿಗೆ ‘ಗೆಸ್ಟ್ ವರ್ಕರ್ ಪರ್ಮಿಟ್’ ನೀಡಬೇಕು ಎಂದು ಪುನರುಚ್ಚರಿಸಿದರು.

ಸಿಕ್ಕಿಂನ ‘ಸಂಘ’ ಮತಕ್ಷೇತ್ರದ ಮಾದರಿಯಲ್ಲಿ ವಿಶೇಷ ಪ್ರಾತಿನಿಧ್ಯವನ್ನು ಲೋಕಸಭೆ ಮತ್ತು ವಿಧಾನಸಭೆಯಲ್ಲಿ ಕೊಡವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಮುಕ್ಕೋಡ್ಲುವಿನ ಕಾಳಚಂಡ ನಾಣಿಯಪ್ಪ ಅವರ ತೋಟವನ್ನು ನಾಶ ಮಾಡಿ ಅವಮಾನಿಸಿರುವುದು ಅಮಾನವೀಯ ಕೃತ್ಯ ಮತ್ತು ಕ್ರೂರ ವ್ಯಂಗ್ಯವಾಗಿದೆ ಎಂದು ಕಿಡಿಕಾರಿದರು.

ಭೂಪರಿವರ್ತನೆಯಿಂದ ಕೊಡಗಿನಲ್ಲಿ ಪ್ರಾಕೃತಿಕ ವಿಕೋಪಗಳು ಸಂಭವಿಸುವ ಸಾಧ್ಯತೆಗಳಿವೆ ಎಂದು ಎಚ್ಚರಿಕೆ ನೀಡಿದರು.

ಇಲ್ಲಿಯವರೆಗೆ ಬಿರುನಾಣಿ, ಕಡಂಗ, ಟಿ.ಶೆಟ್ಟಿಗೇರಿ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ನಾಪೋಕ್ಲು, ಮಾದಾಪುರ, ಸುಂಟಿಕೊಪ್ಪ ಮತ್ತು ಸಿದ್ದಾಪುರ, ವಿರಾಜಪೇಟೆ, ಗೋಣಿಕೊಪ್ಪದಲ್ಲಿ ಮಾನವ ಸರಪಳಿ ಕಾರ್ಯಕ್ರಮವನ್ನು ಶಾಂತಿಯುತವಾಗಿ ನಡೆಸಿ ಜನಜಾಗೃತಿ ಮೂಡಿಸಲಾಗಿದೆ. ಸೆ.30 ರಂದು ಬೆಳಿಗ್ಗೆ 10.30ಕ್ಕೆ ಬೇಂಗ್ ನಾಡಿನ ಚೇರಂಬಾಣೆಯಲ್ಲಿ ಜನಜಾಗೃತಿ ಕಾರ್ಯಕ್ರಮ ನಡೆಯಲಿದೆ.

ಬಿದ್ದಂಡ ಉಷಾ ದೇವಮ್ಮ, ಪಾಲಂದೀರ ರೀಟಾ, ಬಿದ್ದಂಡ ನೀತು, ನುಚ್ಚಿಮಣಿಯಂಡ ಸ್ವಾತಿ, ತಿರ್ಕಚೇರಿರ ಅನಿತಾ, ಚಂಞAಡ ಕನ್ನಿಕ ಸೂರಜ್, ಕೊಚ್ಚೆರ ನಿಧಿ, ಚೊಟ್ಟೇರ ಪವಿತ್ರ, ಸರ್ವಶ್ರೀ ನಂದೇಟಿರ ರವಿ, ಬಡುವಂಡ ವಿಜಯ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ಪುದಿಯೋಕ್ಕಡ ಕಾಶಿ, ಪೆಮ್ಮುಡಿಯಂಡ ವೇಣು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.