ADVERTISEMENT

ಕೊಡವ ಹಾಕಿಯಲ್ಲಿ ಗೋಲಿಗೊಂದು ಗಿಡ!

ಮುಂದಿನ ವರ್ಷ ಏ‍ಪ್ರಿಲ್ 5ರಿಂದ ಮೇ 2ರವರೆಗೆ ಚೇನಂಡ ಕುಟುಂಬದ ಸಾರಥ್ಯದಲ್ಲಿ ಕೊಡವ ಕೌಟುಂಬಿಕ ಹಾಕಿ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2025, 4:16 IST
Last Updated 26 ಆಗಸ್ಟ್ 2025, 4:16 IST
.
.   

ಮಡಿಕೇರಿ: ಮುಂಬರುವ ಕೊಡವ ಕೌಟುಂಬಿಕ ಹಾಕಿ ಉತ್ಸವವು ಚೇನಂಡ ಕುಟುಂಬದ ಸಾರಥ್ಯದಲ್ಲಿ ನಡೆಯಲಿದ್ದು, ಗೋಲಿಗೊಂದು ಗಿಡ ನೆಡುವ ವಿನೂತನ ಪರಿಕಲ್ಪನೆಯನ್ನು ಹಾಕಿ ಉತ್ಸವ ಹೊಂದಿದೆ.

‘ಮುಂದಿನ ವರ್ಷ ಏಪ್ರಿಲ್ 5ರಿಂದ ಮೇ 2ರವರೆಗೆ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಹಾಕಿ ಉತ್ಸವದಲ್ಲಿ ದಾಖಲಾಗುವ ಪ್ರತಿ ಗೋಲಿಗೂ ಒಂದೊಂದು ಸಸಿಗಳನ್ನು ನೆಡಲಾಗುವುದು’ ಎಂದು ಉತ್ಸವ ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ಇಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಇದು ಕೇವಲ ಕ್ರೀಡಾ ಉತ್ಸವ ಮಾತ್ರವಲ್ಲ, ಪ್ರಕೃತಿ ಸಂರಕ್ಷಣಾ ಕಾರ್ಯವೂ ಇದರಲ್ಲಿ ನಡೆಯಲಿದೆ. ಕೊಡಗಿನ ಜನರು ಪ್ರಕೃತಿಯೊಂದಿಗೆ ಬೆರೆತು ಬದುಕುತ್ತಿದ್ದಾರೆ. ಕೊಡವರು ಪ್ರಕೃತಿಯ ಆರಾಧಕರು. ಹಾಗಾಗಿ, ಇಲ್ಲಿನ ಪ್ರಕೃತಿ ಉಳಿಸುವ ಸಲುವಾಗಿ ಸಸಿಗಳನ್ನು ನೆಡುವ ಕಾರ್ಯ ಮಾಡಲಾಗುತ್ತಿದೆ ಎಂದರು.

ADVERTISEMENT

ಈ ಕಾರ್ಯಕ್ರಮದ ಪ್ರಥಮ ಹಂತದಲ್ಲಿ ಶಾಸಕ ಹಾಗೂ ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಅವರು ಕೋಕೇರಿ ಗ್ರಾಮದಲ್ಲಿ ನೀಲಿಯಾಟ್ ಮಂದ್‌ನಲ್ಲಿ ಚಾಲನೆ ನೀಡಲಿದ್ದಾರೆ. ದ್ವಿತೀಯ ಹಂತದಲ್ಲಿ ವಿಧಾನ ಪ‍ರಿಷತ್ತಿನ ಸದಸ್ಯ ಮಂಡೇಪಂಡ ಪಿ.ಸುಜಾ ಕುಶಾಲಪ್ಪ ಅವರು ಕರಡ ಗ್ರಾಮದ ಮಲೆತಿರಿಕೆ ದೇವಸ್ಥಾನದಲ್ಲಿ ಚಾಲನೆ ನೀಡಲಿದ್ದಾರೆ. ತೃತೀಯ ಹಂತದಲ್ಲಿ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಚಾಲನೆ ನೀಡಲಿದ್ದಾರೆ. ನಂತರ, ಟಿ.ಶೆಟ್ಟಿಗೇರಿಯ ಕೊರಕೋಟ್ ಅಯ್ಯಪ್ಪ ದೇವರಕಾಡಿನಲ್ಲಿ ಕಾರ್ಯಕ್ರಮ ನಡೆಯಲಿದ್ದು, ಲಕ್ಷ್ಮಣತೀರ್ಥ ನದಿ ತೀರದಲ್ಲಿ ಸಸಿ ನೆಡಲಾಗುವುದು ಎಂದು ಹೇಳಿದರು.

ಅಲ್ಲದೇ, ಸುಮಾರು 2,500 ಸಸಿಗಳನ್ನು ಮುಂದಿನ 15 ದಿನಗಳಲ್ಲಿ ನೆಡಲಿದ್ದೇವೆ. ಈ ಸಸಿಗಳು ಬೆಳೆದು ಹೆಮ್ಮರಗಳಾಗಬೇಕು ಎನ್ನುವುದು ನಮ್ಮ ಆಶಯ ಎಂದರು.

ಚೇನಂಡ ಕುಟುಂಬಕ್ಕೆ ತನ್ನದೇ ಆದ ಧ್ವಜ ಮತ್ತು ಲಾಂಛನ ಬೇಕೆಂದು ಕುಟುಂಬದ ಪೌರಾಣಿಕ ಇತಿಹಾಸವನ್ನು ಸಾರುವ ಲಾಂಛನವನ್ನು ರಚಿಸಿ, ಅದನ್ನು ನೋಂದಾಯಿಸಿಕೊಳ್ಳುತ್ತಿದ್ದೇವೆ. ಇದು ಕೇರಳದ ಪಯ್ಯಾವೂರಿನ ಈಶ್ವರ ದೇವಾಲಯಕ್ಕೆ ಕಾಲ್ನಡಿಗೆಯಲ್ಲಿ ನೈವೇದ್ಯ ಅಕ್ಕಿಯನ್ನು ಹೊತ್ತುಕೊಂಡು ಹೋಗಿದ್ದ ನಮ್ಮ ಕುಟುಂಬದ ಆದಿಪುರುಷನ ಹಿನ್ನೆಲೆಯ ಕಥೆಯಾಗಿದೆ ಎಂದು ಹೇಳಿದರು.

ಕಾರ್ಯದರ್ಶಿ ಮಧುಮಾದಯ್ಯ ಮಾತನಾಡಿ, ‘1997ರಂದು ಪಾಂಡಂಡ ಕುಟ್ಟಪ್ಪನವರ ಕನಸಿನ ಕೂಸಾದ ಈ ಕೊಡವ ಕೌಟುಂಬಿಕ ಹಾಕಿ ಉತ್ಸವವು ಆರಂಭವಾಗಿ, ಗಿನ್ನಿಸ್ ದಾಖಲೆಯ ಪುಟ ಸೇರಿದೆ’ ಎಂದರು.

ಸಮಿತಿಯ ಜಂಟಿ ಕಾರ್ಯದರ್ಶಿ ತಮ್ಮಿ ತಮ್ಮಯ್ಯ, ವಕ್ತಾರ ಸುರೇಶ್ ನಾಣಯ್ಯ, ಸದಸ್ಯ ಸಚಿನ್ ಅಯ್ಯಪ್ಪ ಭಾಗವಹಿಸಿದ್ದರು.

ನಾಪೋಕ್ಲುವಿನಲ್ಲಿ ಹಾಕಿ

ಪಂದ್ಯಾವಳಿ ಮುಂದಿನ ವರ್ಷ ಏಪ್ರಿಲ್ 5ರಿಂದ ಮೇ 2ರವರೆಗೆ ನಡೆಯಲಿರುವ ಕೊಡವ ಕೌಟುಂಬಿಕ ಹಾಕಿ ಚೇನಂಡ ಹಾಕಿ ಉತ್ಸವು ನಾಪೋಕ್ಲುವಿನಲ್ಲಿ ಆಯೋಜನೆಗೊಂಡಿದೆ ಎಂದು ಸಮಿತಿ ಅಧ್ಯಕ್ಷ ಚೇನಂಡ ಕಂಬಣಿ ಕರುಂಬಯ್ಯ ತಿಳಿಸಿದರು. ನಾಪೋಕ್ಲುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆಯಲಿದ್ದು 4 ಹಾಕಿ ಮೈದಾನಗಳನ್ನು ಸಿದ್ಧಪಡಿಸಲಾಗುವುದು. ಈ ಉತ್ಸವಕ್ಕೆ ₹ 2.5 ಕೋಟಿಗೂ ಹೆಚ್ಚು ಖರ್ಚಾಗುವ ಸಾಧ್ಯತೆ ಇದೆ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.