
ಮಡಿಕೇರಿ: ಕೊಡವರ ಕುರಿತು ಸುಳ್ಳು ಚರಿತ್ರೆ ಸೃಷ್ಟಿಯ ವಿರುದ್ಧ ಜನಜಾಗೃತಿ ಮೂಡಿಸಲು ಮುಂಬರುವ ಜನವರಿಯಿಂದ ಜಿಲ್ಲೆಯಾದ್ಯಂತ ಅಭಿಯಾನ ನಡೆಸಲಾಗುವುದು ಎಂದು ಕೊಡವ ನ್ಯಾಷನಲ್ ಕೌನ್ಸಿಲ್ (ಸಿಎನ್‌ಸಿ) ಅಧ್ಯಕ್ಷ ಎನ್.ಯು.ನಾಚಪ್ಪ ಅವರು ಪ್ರಕಟಿಸಿದರು.
ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ ಪಾಲಿಬೆಟ್ಟದಲ್ಲಿ ಭಾನುವಾರ ನಡೆದ 21ನೇ ಮಾನವ ಸರಪಳಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೊಡವರ ನೈಜ ಚರಿತ್ರೆಯನ್ನು ಬುಡಮೇಲು ಮಾಡುವ ಪ್ರಯತ್ನಗಳು ನಡೆಯುತ್ತಿದೆ. ಕೊಡಗು ಹಾಗೂ ಈ ದೇಶಕ್ಕೆ ಕೊಡವರ ಕಾಣಿಕೆ ಏನೇನೂ ಇಲ್ಲ ಎಂದು ಪ್ರತಿಬಿಂಬಿಸುವ ಮೂಲಕ ಕೊಡವರನ್ನು ಖಳನಾಯಕರಂತೆ ತೋರಿಸುವ ಕ್ರೂರ ಹುನ್ನಾರ ಮುಂದುವರೆದಿದೆ ಎಂದು ಅವರು ಆರೋಪಿಸಿದರು.
ಜಿ.ರಿಚರ್ ಬರೆದ ‘ಕೂರ್ಗ್ ಗೆಜಿಟಿಯರ್’, ಡಿ.ಎನ್.ಕೃಷ್ಣಯ್ಯ ಬರೆದ ‘ಕೊಡಗಿನ ಇತಿಹಾಸ’, ಕೃಷ್ಣಮೂರ್ತಿ ಬರೆದ ‘ಪ್ರಾಚ್ಯ ಇತಿಹಾಸ ದಾಖಲೆ’, ಸೇರಿದಂತೆ ಅನೇಕ ಮಹನೀಯರು ದಾಖಲಿಸಿದ ಕೊಡವರ ನೈಜ ಇತಿಹಾಸಕ್ಕೆ ವಿರುದ್ಧವಾಗಿ ಕೆಲವೊಬ್ಬರು ಸುಳ್ಳುಗಳನ್ನು ಬರೆಯುತ್ತಿದ್ದಾರೆ ಎಂದು ಅವರು ದೂರಿದರು.
ಮುಂದೆ ನಡೆಯಲಿರುವ 16ನೇ ರಾಷ್ಟ್ರೀಯ ಜನಗಣತಿಯಲ್ಲಿ ಆದಿಮ ಸಂಜಾತ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವರು ಪ್ರತ್ಯೇಕವಾಗಿ ‘ಕೊಡವ’ ಎಂದು ದಾಖಲೀಕರಣ ಮಾಡಬೇಕು ಎಂದು ಮನವಿ ಮಾಡಿದರು.
ಕೊಡವಲ್ಯಾಂಡ್ ಭೂ ರಾಜಕೀಯ ಸ್ವಯಂ ಆಡಳಿತ, ಕೊಡವರಿಗೆ ವಿಶ್ವರಾಷ್ಟ್ರ ಸಂಸ್ಥೆಯ ಇಂಡಿಜಿನಸ್ ಪಿಪಲ್ಸ್ ರೈಟ್ಸ್, ಎಸ್.ಟಿ.ಪಟ್ಟಿಯಲ್ಲಿ ವರ್ಗೀಕರಣ, ಸಿಕ್ಕಿಂನ ‘ಸಂಘ’ ಮತಕ್ಷೇತ್ರದಂತೆ ಸಂಸತ್ ಮತ್ತು ವಿಧಾನಸಭೆಯಲ್ಲಿ ವಿಶೇಷ ಪ್ರಾತಿನಿಧ್ಯ ನೀಡಬೇಕು ಎಂದು ಒತ್ತಾಯಿಸಿದರು.
ಡಿ. 15ರಂದು ಬೆಳಿಗ್ಗೆ 10.30ಕ್ಕೆ ತಿತಿಮತಿಯಲ್ಲಿ 22ನೇ ಕೊಡವ ಜನಜಾಗೃತಿ ಮಾನವ ಸರಪಳಿ ಕಾರ್ಯಕ್ರಮ ನಡೆಯಲಿದೆ.ಇಲ್ಲಿಯವರೆಗೆ ಬಿರುನಾಣಿ, ಟಿ.ಶೆಟ್ಟಿಗೇರಿ, ಕಡಂಗ, ಕಕ್ಕಬ್ಬೆ, ಬಾಳೆಲೆ, ಪೊನ್ನಂಪೇಟೆ, ಮಾದಾಪುರ, ಸುಂಟಿಕೊಪ್ಪ, ಸಿದ್ದಾಪುರ, ನಾಪೋಕ್ಲು, ಗೋಣಿಕೊಪ್ಪ, ವಿರಾಜಪೇಟೆ, ಮೂರ್ನಾಡು, ಚೇರಂಬಾಣೆ, ಚೆಟ್ಟಳ್ಳಿ, ಅಮ್ಮತ್ತಿ, ಶ್ರೀಮಂಗಲ, ಬುಟ್ಟಂಗಾಲ, ಹುದಿಕೇರಿ, ಕುಟ್ಟದಲ್ಲಿ ಜನಜಾಗೃತಿ ಕಾರ್ಯಕ್ರಮ ಯಶಸ್ವಿಯಾಗಿ ನಡೆದಿದೆ ಎಂದರು.
ಪಟ್ಟಮಾಡ ಲಲಿತಾ ಗಣಪತಿ, ಪಟ್ಟಮಾಡ ಸೌಮ್ಯ ಪೃಥ್ವಿ, ಪಚ್ಚಾರಂಡ ಶಾಂತಿ ಪೊನ್ನಪ್ಪ, ನಂದಿನೆರವAಡ ರೇಖಾ, ಕುಟ್ಟಂಡ ಲೀಸ್ಸ ಸೋಮಣ್ಣ, ನೆಲ್ಲಮಕ್ಕಡ ವಿವೇಕ್, ಮೂಕೊಂಡ ದಿಲೀಪ್, ಕುಟ್ಟಂಡ ಸೋಮಣ್ಣ, ಮಾಳೇಟಿರ ಸಾಬು, ಕುಟ್ಟಂಡ ರವಿ, ಪುಲಿಯಂಡ ಸತ್ಯ, ಪಟ್ಟಮಾಡ ಪೃಥ್ವಿ, ಪಟ್ಟಮಾಡ ಸೋಮಯ್ಯ, ಅಂಜನ್ ಚಿಣ್ಣಪ್ಪ, ಕುಪ್ಪಂಡ ಮನು ಭಾಗವಹಿಸಿದ್ದರು.
ಡಿ. 15ರಂದು ತಿತಿಮತಿಯಲ್ಲಿ ಮಾನವ ಸರಪಳಿ ಜನವರಿಂದ ಜಿಲ್ಲೆಯಾದ್ಯಂತ ವಿಶೇಷ ಜಾಗೃತಿ ಅಭಿಯಾನ ಕೊಡವರ ಹಕ್ಕುಗಳನ್ನು ರಕ್ಷಿಸಲು ನಿರಂತರ ಹೋರಾಟ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.