
ಮಡಿಕೇರಿ: ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ವತಿಯಿಂದ ವಿನೂತನವಾಗಿ ಆರಂಭವಾಗಿರುವ ‘ಕೊಡವ ಪುಸ್ತಕ ಪತ್ತಾಯ (ಪುಸ್ತಕ ಭಂಡಾರ)’ ಯೋಜನೆಗೆ ವಿರಾಜಪೇಟೆ ಶಾಸಕ ಎ.ಎಸ್.ಪೊನ್ನಣ್ಣ ಅವರು ವಿರಾಜಪೇಟೆಯ ತಮ್ಮ ನಿವಾಸದಲ್ಲಿ ಶನಿವಾರ ಚಾಲನೆ ನೀಡಿದರು. ಈ ಮೂಲಕ ಅಕಾಡೆಮಿಯ ಮೊಟ್ಟ ಮೊದಲನೆಯ ‘ಕೊಡವ ಪುಸ್ತಕ ಪತ್ತಾಯ (ಪುಸ್ತಕ ಭಂಡಾರ)’ ಗೃಹ ಕಚೇರಿಯಲ್ಲಿ ಸ್ಥಾಪನೆಗೊಂಡಿತು.
ಯೋಜನೆಗೆ ಚಾಲನೆ ನೀಡಿ ಮಾತನಾಡಿದ ಶಾಸಕ ಎ.ಎಸ್.ಪೊನ್ನಣ್ಣ, ‘ಕೊಡವ ಸಾಹಿತ್ಯ ಹಾಗೂ ಸಂಸ್ಕೃತಿಯ ಮೇಲೆ ಎಲ್ಲೆಡೆ ಆಸಕ್ತಿ-ಅಭಿಮಾನ ಹುಟ್ಟಿಸುವ ಉದ್ದೇಶದಿಂದ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ನೂತನವಾಗಿ ಆರಂಭಿಸಿರುವ ‘ಕೊಡವ ಪುಸ್ತಕ ಪತ್ತಾಯ’ ಯೋಜನೆಯು ಶ್ಲಾಘನಿಯ’ ಎಂದು ಮೆಚ್ಚುಗೆಯ ನುಡಿಗಳನ್ನಾಡಿದರು.
ಅಕಾಡೆಮಿಯ ಇಂತಹ ಯೋಜನೆಯು ಕೊಡವ ಸಾಹಿತ್ಯ-ಸಂಸ್ಕೃತಿಯನ್ನು ಉಳಿಸಿ ಬೆಳೆಸಿ ಮುಂದಿನ ಪೀಳಿಗೆಗೆ ಹಸ್ತಾಂತರಿಸುವಲ್ಲಿ ಸಹಕಾರಿಯಾಗಲಿದೆ ಎಂದರು.
ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ಮಾತನಾಡಿ, ‘ಪುಸ್ತಕ ಪತ್ತಾಯ ಪ್ರತಿಯೊಬ್ಬರ ಪ್ರತಿಷ್ಠೆಯ ವಿಷಯವಾಗಬೇಕು’ ಎಂದರು.
ಕೊಡವ ಭಾಷೆಯಲ್ಲಿ ಮತ್ತಷ್ಟು ಸಾಹಿತ್ಯ ರೂಪುಗೊಳ್ಳಬೇಕು. ಸಾಹಿತಿಗಳಿಗೆ ಉತ್ತಮವಾದ ವೇದಿಕೆ ಸೃಷ್ಟಿಯಾಗಬೇಕಾಗಿದೆ. ಇದಕ್ಕಾಗಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ರೂಪಿಸಿರುವ ‘ಕೊಡವ ಪುಸ್ತಕ ಪತ್ತಾಯ’ ಮುಂದಿನ ದಿನಗಳಲ್ಲಿ ಕೊಡವ ಸಾಹಿತ್ಯವನ್ನು ಮತ್ತಷ್ಟು ಗಟ್ಟಿಗೊಳಿಸುತ್ತದೆ ಎಂದರು.
ಕೊಡವ ಪುಸ್ತಕ ಪತ್ತಾಯವನ್ನು ಮುಂದಿನ ದಿನಗಳಲ್ಲಿ ಪ್ರತೀಯೊಂದು ಕೊಡವ ಸಮಾಜಗಳಲ್ಲಿ, ಭಾಷಿಕರ ಸಮಾಜಗಳಲ್ಲಿ, ಬಲ್ಯಮನೆ, ಮುಂದುಮನೆ, ಐನ್‍ಮನೆಗಳಲ್ಲಿ, ದೇವನೆಲೆಗಳಲ್ಲಿ ಸ್ಥಾಪಿಸುವ ಉದ್ದೇಶವನ್ನು ಹೊಂದಿದೆ. ಲೇಖಕರ ಪುಸ್ತಕಗಳು ಒಂದೆಡೆ ಹೇಳಕೇಳದವರಿಲ್ಲದೆ ಬಿದ್ದುಕೊಂಡಿರುವ ಕಾಲಘಟ್ಟದಲ್ಲಿ ಪುಸ್ತಕ ಪತ್ತಾಯವು ಅದಕ್ಕೆಲ್ಲ ಮರುಜೀವ ಕೊಡುವ ಕಾಲ ಸನ್ನಿಹಿತವಾಗಿದೆ. ಸಾಹಿತ್ಯಾಭಿಮಾನಿಗಳು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಆ ಮೂಲಕ ಕೊಡಗಿನಲ್ಲಿ ಪುಸ್ತಕ ಪತ್ತಾಯಕ್ಕೆ ಪ್ರತಿಯೊಬ್ಬರ ಮನೆಯಲ್ಲಿ ಒಂದಿಷ್ಟು ಜಾಗ ಮಾಡಿಕೊಂಡರೆ ಕ್ರಮೇಣ ಎಲ್ಲಾರಲ್ಲಿ ಪುಸ್ತಕ ಪ್ರೇಮ ಉಂಟಾಗಿ ಜ್ಞಾನ ಭಂಡಾರವೂ ವೃದ್ಧಿಸಲು ಅನುಕೂಲ ಆಗುತ್ತದೆ ಎಂದರು.
ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಚೆಪ್ಪುಡಿರ ಅರುಣ್ ಮಾಚಯ್ಯ ಮಾತನಾಡಿ, ‘ಅಕಾಡೆಮಿಯಿಂದ ಉತ್ತಮ ಕಾರ್ಯಕ್ರಮಗಳು ನಡೆಯುತ್ತಿದೆ. ಇದರಿಂದಾಗಿ ಎಲ್ಲಾ ಜನಾಂಗಗಳ ಒಗ್ಗಟ್ಟಿಗೆ ಕಾರಣವಾಗಿದೆ’ ಎಂದರು.
ಕೊಡವ ಸಮಾಜ ಒಕ್ಕೂಟಗಳ ಅಧ್ಯಕ್ಷ ಕಳ್ಳಿಚಂಡ ವಿಷ್ಣು ಕಾರ್ಯಪ್ಪ ಕುಟ್ಟ ಕೊಡವ ಸಮಾಜ ಹಾಗೂ ಬಾಳುಗೋಡು ಕೊಡವ ಫೆಡರೇಶನ್ನಿನಲ್ಲಿ ‘ಕೊಡವ ಪುಸ್ತಕ ಪತ್ತಾಯ’ ಸ್ಥಾಪಿಸುವಂತೆ ಮನವಿ ಮಾಡಿದರು.
ಹಿರಿಯ ಶಿಕ್ಷಕಿ ಕರ್ನಂಡ ಬೊಳ್ಳಮ್ಮ ನಾಣಯ್ಯ, ಸೋಮವಾರಪೇಟೆ ಕೊಡವ ಸಮಾಜದ ಅಧ್ಯಕ್ಷ ಮಾಳೇಟಿರ ಅಭಿಮನ್ಯುಕುಮಾರ್, ಮಾದಾಪುರ ಕೊಡವ ಸಮಾಜದ ಅಧ್ಯಕ್ಷ ಮಂಡೇಪಂಡ ಮನು ಮೇದಪ್ಪ, ಮೂರ್ನಾಡು ಕೊಡವ ಸಮಾಜದ ಅಧ್ಯಕ್ಷ ತೇಲಪಂಡ ಸುಬ್ಬಯ್ಯ, ಅಮ್ಮತ್ತಿ ಕೊಡವ ಸಮಾಜದ ಅಧ್ಯಕ್ಷ ಐನಂಡ ಪ್ರಕಾಶ್ ಗಣಪತಿ, ಕೊಡವ ತಕ್ಕ್ ಜನಾಂಗಕಾರಡ ಒಕ್ಕೂಟದ ಪಡಿಞಂರಂಡ ಜಿ. ಅಯ್ಯಪ್ಪ, ಕೊಡವ ಭಾಷಿಕ ಸಮುದಾಯಗಳ ಅಧ್ಯಕ್ಷ ಡಾ.ಮೇಚಿರ ಸುಭಾಷ್ ನಾಣಯ್ಯ ಮಾತನಾಡಿದರು.
ವೀರಾಜಪೇಟೆಯ ಪಂಜರಪೇಟೆ ಕೊಡವ ಕೇರಿ ಅಧ್ಯಕ್ಷ ವಾಂಚಿರ ಟಿ.ನಾಣಯ್ಯ, ಪರದಂಡ ವಿಠಲ ಹಾಗೂ ಪದಾಧಿಕಾರಿಗಳು, ಕೆಂಬಟ್ಟಿ ಸಮಾಜದ ಬಿಲ್ಲಿರಿಕುಟ್ಟಡ ಪ್ರಭು ಅಯ್ಯಪ್ಪ, ಚೋಕುಟ್ಟಡ ಚಿಮ್ಮ ಅಯ್ಯಪ್ಪ, ಕಾರ್ಯಧ್ಯಕ್ಷ ಬಾಳೆಕುಟ್ಟಡ ಉದಯ ಮಾದಪ್ಪ, ಬಣ್ಣ ಸಮಾಜದ ಅಧ್ಯಕ್ಷ ಬೀಕಚಂಡ ಪುಟ್ಟ ಬೆಳ್ಯಪ್ಪ, ಕುಡಿಯ ಸಮಾಜದ ಕುಡಿಯರ ಕೆ.ಮುತ್ತಪ್ಪ,
ಸಾಹಿತಿಗಳಾದ ಪಿ.ವೈಲೇಶ್, ಉಳುವಂಗಡ ಕಾವೇರಿ ಉದಯ, ಕೊಟ್ಟಿಯಂಡ ಜೀವನ್ ಚಿಣ್ಣಪ್ಪ, ಪ್ರೊ.ಪಟ್ಟಡ ಎ. ಪೂವಣ್ಣ, ತಾತಂಡ ಪ್ರಭಾ ನಾಣಯ್ಯ, ಕರೋಟಿರ ಶಶಿ ಸುಬ್ರಮಣಿ, ಅಮ್ಮಣಿಚಂಡ ಗಂಗಮ್ಮ ಬೆಳ್ಯಪ್ಪ, ಅಜ್ಜಿನಿಕಂಡ ಪ್ರಮೀಳ ನಾಚಯ್ಯ, ಅರೆಕಾಡ್-ಹೊಸ್ಕೇರಿ ಕೊಡವ ಅಸೋಸಿಯೇಶನ್ ಅಧ್ಯಕ್ಷ ಕುಕ್ಕೆರ ಜಯಚಿಣ್ಣಪ್ಪ. ಹಿರಿಯ ಶಿಕ್ಷಕ ಬೀನಂಡ ಎಸ್.ಪೂಣಚ್ಚ, ಪ್ರಗತಿ ಶಾಲೆಯ ಸ್ಥಾಪಕ ಮಾದಂಡ ಎಸ್.ಪೂವಯ್ಯ, ಪಾಲೇಂಗಡ ಅಮಿತ್ ಭೀಮಯ್ಯ, ಚೇಂದಂಡ ವಸಂತ ಭಾಗವಹಿಸಿದ್ದರು.
ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯರಾದ ಪುತ್ತರಿರ ಪಪ್ಪು ತಿಮ್ಮಯ್ಯ, ಪೊನ್ನಿರ ಯು.ಗಗನ್, ಕುಡಿಯರ ಕಾವೇರಪ್ಪ, ನಾಯಿಂದರ ಆರ್.ಶಿವಾಜಿ, ಚೆಪ್ಪುಡಿರ ಎಸ್.ಉತ್ತಪ್ಪ, ನಾಪಂಡ ಗಣೇಶ್ ಉಪಸ್ಥಿತರಿದ್ದರು. ಮೊಳ್ಳೆಕುಟ್ಟಡ ದಿನು ಬೋಜಪ್ಪ, ಚೊಟ್ಟೆಯಂಡ ಎ. ಸಂಜು ಕಾವೇರಪ್ಪ ಸಂಚಾಲಕರಾಗಿ ಕಾರ್ಯ ನಿರ್ವಹಿಸಿದರು.
ಏನಿದು ಕೊಡವ ಪುಸ್ತಕ ಪತ್ತಾಯ?
ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯು ಮನೆಮನೆಗಳಲ್ಲಿ ಓದುವ ಸಂಸ್ಕೃತಿಯನ್ನು ಹೆಚ್ಚಿಸುವ ಸಲುವಾಗಿ ಈ ವಿಶಿಷ್ಟ ಯೋಜನೆಯನ್ನು ಜಾರಿಗೆ ತಂದಿದೆ. ಐನ್‌ಮನೆಗಳು ದೇಗುಲಗಳು ಸಂಘ ಸಂಸ್ಥೆಗಳು ಮಾತ್ರವಲ್ಲ ಆಸಕ್ತ ಪುಸ್ತಕಪ್ರೇಮಿಗಳೂ ತಮ್ಮಲ್ಲಿ ಇಂತಹದ್ದೊಂದು ಪುಸ್ತಕ ಭಂಡಾರವನ್ನು ಹೊಂದಲು ಅವಕಾಶ ಮಾಡಿಕೊಡಲಾಗಿದೆ. ‘₹ 10 ಸಾವಿರ ನೋಂದಣಿ ಶುಲ್ಕ ಪಾವತಿಸಿದರೆ ಅಕಾಡೆಮಿ ಹೊರತಂದಿರುವ ₹ 17ರಿಂದ 18 ಸಾವಿರ ಮೌಲ್ಯದ ಪುಸ್ತಕಗಳು ಅದನ್ನಿಡಲು ಸುಸಜ್ಜಿತವಾದ ಅಂದಾಜು ₹ 25 ಸಾವಿರ ಮೌಲ್ಯದ ಕಪಾಟನ್ನು ನೀಡಲಾಗುತ್ತದೆ. ಮನೆಯಲ್ಲಿ ಅಥವಾ ಇನ್ನಾವುದೇ ಸ್ಥಳದಲ್ಲಿ ಇವುಗಳನ್ನು ಇಡಬಹುದು’ ಎಂದು ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಸಿ. ಮಹೇಶ್ ನಾಚಯ್ಯ ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.