ADVERTISEMENT

ಕಟ್ಟೆಮಾಡು ಪ್ರಕರಣ: ಬಿಳುಗುಂದ ಕೊಡವ ಸಮಾಜ ಖಂಡನೆ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2024, 15:14 IST
Last Updated 30 ಡಿಸೆಂಬರ್ 2024, 15:14 IST

ವಿರಾಜಪೇಟೆ: ಜಿಲ್ಲೆಯ ಕಟ್ಟೆಮಾಡುವಿನ ಮೃತ್ಯುಂಜಯ ದೇವಾಲಯಕ್ಕೆ ಕೊಡವರು ತಮ್ಮ ಸಾಂಪ್ರದಾಯಿಕ ಉಡುಪು ಧರಿಸಿ ಪ್ರವೇಶಿಸಬಾರದು ಎಂದು ದೇವಾಲಯದ ಆಡಳಿತ ಮಂಡಳಿ ತೆಗೆದುಕೊಂಡ ನಿರ್ಧಾರ ಹಾಗೂ ಅಲ್ಲಿ ನಡೆದ ಘಟನೆ ಖಂಡನೀಯ ಎಂದು ಬಿಳುಗುಂದ ಕೊಡವ ಸಮಾಜದ ಅಧ್ಯಕ್ಷ ಐನಂಡ ಕಿರಣ್ ಹೇಳಿದರು.

ಪಟ್ಟಣದಲ್ಲಿ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಗ್ರಾಮಗಳಲ್ಲಿ ನಡೆಯುವ ಹಬ್ಬ ಹರಿದಿನಗಳಲ್ಲಿ ದೇವಾಲಯಕ್ಕೆ ಕೊಡವ ಸಾಂಪ್ರದಾಯಿಕ ಉಡುಪಾದ ಕುಪ್ಯಚೇಲೆ, ಪೀಚೆಕತ್ತಿ, ಮಂಡೆತುಣಿ ಧರಿಸಿ ಭಾಗವಹಿಸುವುದು ಹಿಂದಿನಿಂದ ನಡೆದು ಬಂದಿದೆ. ಕಟ್ಟೆಮಾಡುವಿನಲ್ಲಿ ಹಬ್ಬದ ಸಂದರ್ಭ ಕೆಲವರು ಕೊಡವರ ಮೇಲೆ ಹಲ್ಲೆಗೆ ಮುಂದಾಗಿರುವುದನ್ನು ಖಂಡಿಸುತ್ತೇವೆ. ಇದೇ ರೀತಿ ಮುಂದುವರೆದರೆ ಮುಂದಿನ ದಿನಗಳಲ್ಲಿ ಇತರ ಸಂಘ ಸಂಸ್ಥೆಗಳ ಜತೆಗೂಡಿ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.

ಸಮಾಜದ ಕಾರ್ಯದರ್ಶಿ ಅಲ್ಲಪಿರ ಎಂ.ಕಾರ್ಯಪ್ಪ ಮಾತನಾಡಿ, ಕೊಡವರು ಬಿಳಿ ಪಂಚೆ ಧರಿಸುವುದು ಶವ ಸಂಸ್ಕಾರ ಹಾಗೂ ಪಿಂಡ ಪ್ರಧಾನ ಮಾಡುವ ಸಂದರ್ಭದಲ್ಲಿ ಮಾತ್ರ. ಪವಿತ್ರವಾದ ದೇವಾಲಯಕ್ಕೆ ಬಿಳಿ ಪಂಚೆ ಧರಿಸಿ ತೆರಳುವುದು ನಮ್ಮ ಸಂಸ್ಕೃತಿಯಲ್ಲ. ಬೇರೆ ಜಿಲ್ಲೆಗಳಲ್ಲಿನ ದೇವಾಲಯಗಳ ಕಟ್ಟುಪಾಡುಗಳಿಗೆ ಮತ್ತು ನಮ್ಮ ದೇವಾಲಯಗಳ ಕಟ್ಟುಪಾಡುಗಳಿಗೆ ವ್ಯತ್ಯಾಸವಿದೆ. ಅನ್ಯ ಜಿಲ್ಲೆಗಳ ಸಂಪ್ರದಾಯಗಳನ್ನು ಇಲ್ಲಿನ ದೇವಾಲಯಗಳಲ್ಲಿ ಹೇರುವುದು ಸರಿಯಲ್ಲ ಎಂದರು.

ADVERTISEMENT

ಉಪಾಧ್ಯಕ್ಷ ಮೂಕೋಂಡ ಪಿ.ದೇವಯ್ಯ ಮಾತನಾಡಿ, ಕಟ್ಟೆಮಾಡು ಮೃತ್ಯುಂಜಯ ದೇವಾಲಯದಲ್ಲಿ ನಡೆದ ಘಟನೆ ಖಂಡಿಸಿ ಹಮ್ಮಿಕೊಂಡಿದ್ದ ಬೈಕ್ ರ‍್ಯಾಲಿಯನ್ನು ಪೊಲೀಸರು ತಡೆದು, ಸಂಘಟನೆಯ ಪ್ರಮುಖರನ್ನು ವಶಕ್ಕೆ ಪಡೆದಿರುವುದು ಸರಿಯಲ್ಲ ಎಂದರು.

ಗೋಷ್ಠಿಯಲ್ಲಿ ಸಮಾಜದ ಸದಸ್ಯರಾದ ಮೂಕೋಂಡ ಅರುಣ್ ಗಣಪತಿ, ಉಪ್ಪಂಗಡ ಕರುಂಬಯ್ಯ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.