ADVERTISEMENT

ಕೃಷ್ಣ ಭವನ್‌ ಹೋಟೆಲ್ ಮಾಲೀಕ ಕೇಶವ ನಿಧನ

​ಪ್ರಜಾವಾಣಿ ವಾರ್ತೆ
Published 11 ಅಕ್ಟೋಬರ್ 2020, 15:18 IST
Last Updated 11 ಅಕ್ಟೋಬರ್ 2020, 15:18 IST
ಕೇಶವ
ಕೇಶವ   

ಮಡಿಕೇರಿ: ಕೃಷ್ಣ ಭವನ ಹೋಟೆಲ್ ಮಾಲೀಕ ಕೇಶವ (64) ಅವರು ತೀವ್ರ ಅನಾರೋಗ್ಯದಿಂದ ಭಾನುವಾರ ನಿಧನರಾದರು.

ಅನಾರೋಗ್ಯದಿಂದ ಬಳುತ್ತಿದ್ದ ಅವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಮಡಿಕೇರಿಯಲ್ಲಿ ನಾಲ್ಕು ದಶಕಗಳಿಂದ ಮನೆಯಲ್ಲಿ ತಯಾರಿಸಿದ ತಿಂಡಿ, ಊಟದ ಹೋಟೆಲ್ ಆಗಿ ಕೃಷ್ಣ ಭವನ ಪ್ರಸಿದ್ಧಿ ಪಡೆದಿತ್ತು. ಈ ಹೋಟೆಲ್‌ ಬರೀ ಮಡಿಕೇರಿಯಲ್ಲಿ ಮಾತ್ರವಲ್ಲದೆ ರಾಜ್ಯದ ಬೇರೆ ಬೇರೆ ಕಡೆಯಲ್ಲೂ ಪ್ರಸಿದ್ಧಿ ಪಡೆದಿತ್ತು. ಆರಂಭಿಕ ದಿನಗಳಲ್ಲಿ ಕಾವೇರಿ ಚಿತ್ರಮಂದಿರದ ಬಳಿಯೇ ಹೋಟೆಲ್‌ ನಡೆಸುತ್ತಿದ್ದರು. ಬಳಿಕ ಅಲ್ಲಿಂದ ಜೂನಿಯರ್ ಕಾಲೇಜು ಎದುರಿಗೆ ಹೋಟೆಲ್‌ ಸ್ಥಳಾಂತರಗೊಂಡಿತ್ತು. ಅಲ್ಲಿಯೂ ಪುಟ್ಟ ಹೋಟೆಲ್‌ ಆಗಿತ್ತು.

ADVERTISEMENT

ಮಡಿಕೇರಿಗೆ ಬರುವ ಗಣ್ಯರು, ಸಿನಿಮಾ ನಟ– ನಟಿಯರೂ ಈ ಹೋಟೆಲ್‌ಗೆ ಬಂದು ತಿಂಡಿ ಸೇವಿಸಿದ್ದೂ ಇದೆ. ಅಷ್ಟರಮಟ್ಟಿಗೆ ಈ ಹೋಟೆಲ್‌ ಪ್ರಸಿದ್ಧಿ ಪಡೆದಿತ್ತು. ಈ ಹೋಟೆಲ್‌ನಲ್ಲಿ ಅವಲಕ್ಕಿ ಮೊಸರು ಜನಪ್ರಿಯ. ಮನೆಯಲ್ಲಿ ತಯಾರಿಸಿದ ಇಡ್ಲಿ, ಸಾಂಬಾರ್‌ಗೂ ಬೇಡಿಕೆಯಿತ್ತು.

‘ಹೋಟೆಲ್‌ಗೆ ಬರುವ ಗ್ರಾಹಕರನ್ನು ಕೇಶವ ಅವರು ಅಷ್ಟೇ ವಿನಯದಿಂದ ಮಾತನಾಡಿಸುತ್ತಿದ್ದರು. ಹೋಟೆಲ್‌ಗೆ ಹೋದ ಗ್ರಾಹಕರು ಏನಿದೆ ತಿಂಡಿಯೆಂದರೆ ಸಾಕು ‘ಬಿಸಿ ಕೆಂಡವಿದೆ ಬೇಕಾ’ ಎಂದು ನಗುವಿನಿಂದಲೇ ಕೇಳುತ್ತಿದ್ದರು ಕೇಶವ. ಮಡಿಕೇರಿಯಯಲ್ಲಿ ಸಹಜವಾಗಿ ಮಳೆ, ಚಳಿ ವಾತಾವರಣ ಇರಲಿದೆ. ಕೆಲವು ಹೋಟೆಲ್‌ಗಳಲ್ಲಿ ತಿಂಡಿ ಸಿಗುವುದು ಬೆಳಿಗ್ಗೆ ತಡ. ಆದರೆ, ಕೃಷ್ಣ ಭವನ್‌ನಲ್ಲಿ ಮಾತ್ರ ಬೆಳಿಗ್ಗೆಯೇ ಗ್ರಾಹಕರಿಗೆ ತಿಂಡಿ ಸಿಗುತ್ತಿತ್ತು. ಅಧಿಕಾರಿಗಳು ತಿಂಡಿ ಸೇವಿಸಿ ಕಚೇರಿಗಳಿಗೆ ತೆರಳುತ್ತಿದ್ದರು’ ಎಂದು ಗ್ರಾಹಕರೊಬ್ಬರು ಅವರನ್ನು ನೆನಪು ಮಾಡಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.