
ಕುಶಾಲನಗರ ಪುರಸಭೆ ಸಭಾಂಗಣದಲ್ಲಿ ಕುಡಿಯುವ ನೀರಿನ ಸಮಸ್ಯೆ ಕುರಿತ ಟಾಸ್ಕ್ ಫೋರ್ಸ್ ಸಭೆ ಶಾಸಕ ಡಾ.ಮಂತರ್ ಗೌಡ ಅವರ ಅಧ್ಯಕ್ಷತೆಯಲ್ಲಿ ಮಂಗಳವಾರ ನಡೆಯಿತು
ಕುಶಾಲನಗರ: ಬೇಸಿಗೆ ಆರಂಭಗೊಂಡಿದ್ದು, ಕಾವೇರಿ ಹಾಗೂ ಹಾರಂಗಿ ನದಿಗಳಲ್ಲಿ ದಿನದಿಂದ ದಿನಕ್ಕೆ ನೀರು ಕ್ಷೀಣಿಸುವ ಮುನ್ಸೂಚನೆ ಇದೆ. ಹಾಗಾಗಿ, ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗದಂತೆ ಮುಂಜಾಗ್ರತಾ ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕಿನ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳಿಗೆ ಶಾಸಕ ಡಾ.ಮಂತರ್‌ಗೌಡ ಖಡಕ್ ಸೂಚನೆ ನೀಡಿದರು.
ಇಲ್ಲಿನ ಪುರಸಭೆ ಸಭಾಂಗಣದಲ್ಲಿ ಮಂಗಳವಾರ ನಡೆದ ಕುಡಿಯುವ ನೀರಿನ ಸಮಸ್ಯೆ ಕುರಿತ ಕಾರ್ಯಪಡೆ ಸಭೆಯಲ್ಲಿ ಅವರು ಮಾತನಾಡಿದರು.
ಪಟ್ಟಣ ಹಾಗೂ ಗ್ರಾಮೀಣ ಪ್ರದೇಶಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಆಗದಂತೆ ನೋಡಿಕೊಳ್ಳಬೇಕು. ಕೊಳವೆಬಾವಿ ಕೆಟ್ಟು ಹೋದಾಗ ತುರ್ತಾಗಿ ದುರಸ್ತಿ ಮಾಡಿಸಬೇಕು. ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು ಎಂದು ನಿರ್ದೇಶನ ನೀಡಿದರು.
ಪಂಚಾಯತಿ ವ್ಯಾಪ್ತಿಯಲ್ಲಿ ಟ್ಯಾಂಕರ್ ನೀರಿನಿಂದ ನೀರು ಪೂರೈಕೆ ಮಾಡಿ ಹಣ ಪಡೆಯಲಾಗುತ್ತಿದೆ. ಈ ರೀತಿಯಲ್ಲಿ ಹಣ ಮಾಡಲು ಅವಕಾಶ ನೀಡುವುದಿಲ್ಲ. ಇದರ ಬದಲು ಒಂದು ತಿಂಗಳೊಳಗೆ ಶಾಶ್ವತ ಪರಿಹಾರ ಕಂಡುಕೊಳ್ಳಬೇಕು ಎಂದು ಪಂಚಾಯತಿ ಅಧಿಕಾರಿಗಳಿಗೆ ಹೇಳಿದರು.
ತಾಲ್ಲೂಕಿನ ಪ್ರತಿ ಗ್ರಾಮ ಪಂಚಾಯತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗ್ಗೆ ಪಿಡಿಒ ಹಾಗೂ ಕಾರ್ಯದರ್ಶಿಗಳಿಂದ ಮಾಹಿತಿ
ಪಡೆದುಕೊಂಡರು.
ನೀರಿನ ಸಮಗ್ರ ಮಾಹಿತಿ ನೀರುಗಂಟಿ (ವಾಟರ್ ಮ್ಯಾನ್)ಗಳಿಗಿರುತ್ತದೆ. ಅಧಿಕಾರಿಗಳಿಗೆ ಮಾಹಿತಿಯೇ ಇರುವುದಿಲ್ಲ. ಆದ್ದರಿಂದ ಮುಂದಿನ ದಿನಗಳಲ್ಲಿ ಅಧಿಕಾರಿಗಳನ್ನು ಬಿಟ್ಟು ನೀರುಗಂಟಿಗಳ ಜೊತೆ ಸಭೆ ನಡೆಸುವುದು ಸೂಕ್ತ ಎಂದೂ ಅವರು ಹೇಳಿದರು.
ನೆಲ್ಲಿಹುದಿಕೇರಿ 2, 3ನೇ ಬ್ಲಾಕ್‌ನಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗಿದ್ದು, ಖಾಸಗಿ ವ್ಯಕ್ತಿಗಳ ಕೊಳವೆಬಾವಿಯಿಂದ ನೀರು ಪೂರೈಕೆ ಮಾಡಲಾಗುತ್ತಿದೆ ಎಂದು ಪಂಚಾಯತಿ ಕಾರ್ಯದರ್ಶಿ ಪ್ರವೀಣ್ ಹೇಳಿದರು.
ಪಂಚಾಯತಿ ಕೊಳವೆಬಾವಿ ಪಕ್ಕವೇ 50 ಮೀಟರ್ ಅಂತರದಲ್ಲಿ ಹೇಗೆ ಖಾಸಗಿ ಅವರಿಗೆ ಕೊಳವೆಬಾವಿ ಕೊರೆಯಲು ಅನುಮತಿ ಕೊಟ್ಟಿರಿ ಎಂದು ಪ್ರಶ್ನಿಸಿದರು. ನೀರಿನ ಸಮಸ್ಯೆ ಆಗದಂತೆ ಹೊಸದಾಗಿ ಪಂಚಾಯತಿ ವ್ಯಾಪ್ತಿಯಲ್ಲಿ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳಬೇಕು ಎಂದು ತಾಲ್ಲೂಕು ಪಂಚಾಯತಿ ಅಧಿಕಾರಿಗಳಿಗೆ ನಿರ್ದೇಶನ
ನೀಡಿದರು.
ಈ ವೇಳೆ ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ, ತಾಲ್ಲೂಕು ಪಂಚಾಯತಿ ಆಡಳಿತಾಧಿಕಾರಿ ಅಬ್ದುಲ್ ನಭಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ಪುರಸಭೆ ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ಹಾಗೂ ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಗ್ರಾಮ ಪಂಚಾಯತಿ ಅಭಿವೃದ್ಧಿ ಅಧಿಕಾರಿಗಳು
ಪಾಲ್ಗೊಂಡಿದ್ದರು.
ಪಂಚಾಯತಿ ವ್ಯಾಪ್ತಿಯಲ್ಲಿ ಹೊಸ ಕೊಳವೆಬಾವಿ ಕೊರೆಸಲು ಕ್ರಮ ಕೈಗೊಳ್ಳುತ್ತೇವೆ.ವೀರೇಂದ್ರ, ಗ್ರಾಮೀಣ ಕುಡಿಯುವ ನೀರಿನ ಯೋಜನೆ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್.
ಎಲ್ಲಾ ಹೊಸ ಕೊಳವೆಬಾವಿಗಳಿಗೆ ಅಗತ್ಯ ವಿದ್ಯುತ್ ಸಂಪರ್ಕ ಕಲ್ಪಿಸಲು ಕ್ರಮ ಕೈಗೊಳ್ಳುತ್ತೇವೆಮಂಜುನಾಥ್, ಸೆಸ್ಕ್ ಸಹಾಯಕ ಕಾರ್ಯಪಾಲಕ ಎಂಜಿನಿಯರ್.
ಜಲಜೀವನ್ ಮಿಷನ್ ವಿಫಲ; ಶಾಸಕ
ಗ್ರಾಮೀಣ ನೀರು ಪೂರೈಕೆ ಇಲಾಖೆ ಹಾಗೂ ಸೆಸ್ಕ್ ಎಂಜಿನಿಯರ್‌ಗಳ ಕಾರ್ಯವೈಖರಿ ಬಗ್ಗೆ ಶಾಸಕ ಡಾ.ಮಂತರ್‌ಗೌಡ ಅಸಮಾಧಾನ ವ್ಯಕ್ತಪಡಿಸಿದರು.
ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಸಂಪೂರ್ಣ ವಿಫಲವಾಗಿದೆ. ಆದರೆ, ‘ಹರ್ ಘರ್ ಜಲ್’ ಎಂದುಕೊಂಡು ಸಂಸದರು ಹೋಗುತ್ತಾರೆ. ಆದರೆ, ಇಲ್ಲಿ ಏನು ಆಗಿಲ್ಲ’ ಎಂದು ಟೀಕಿಸಿದರು.
18 ಹೊಸ ಕೊಳವೆ ಬಾವಿಗಳು ಅಗತ್ಯ
ತಾಲ್ಲೂಕು ಪಂಚಾಯತಿ ಕಾರ್ಯನಿರ್ವಹಣಾಧಿಕಾರಿ ಪರಮೇಶ್ ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಹೊಸದಾಗಿ 18 ಕೊಳವೆಬಾವಿ ಬೇಕಾಗಿದೆ. ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕುಡಿಯುವ ನೀರಿನ ಸಮಸ್ಯೆ ಆಗದಂತೆ ಕ್ರಮ ಕೈಗೊಳ್ಳಬೇಕು. ಶನಿವಾರ, ಭಾನುವಾರ ಸೇರಿದಂತೆ ರಜಾದಿನಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ಉಂಟಾಗುತ್ತದೆ. ಪಿಡಿಒ ಅವರ ಮೊಬೈಲ್‌ಗೆ ಯಾವುದೇ ರಜೆ ಇಲ್ಲ. ಕರೆ ಬಂದ ತಕ್ಷಣ ಸ್ಪಂದಿಸಿ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಬೇಕು. ಸಣ್ಣ ಪುಟ್ಟ ರಿಪೇರಿ ಕಾರ್ಯಗಳನ್ನು ತುರ್ತಾಗಿ ನಿರ್ವಹಿಸಬೇಕು. ಹೆಚ್ಚುವರಿಯಾಗಿ ಮೋಟರ್ ಖರೀದಿಸಿ ಇಟ್ಟುಕೊಳ್ಳಬೇಕು. ಸಮಸ್ಯೆ ಬಂದಾಗ ಪರದಾಡಬೇಡಿ ಎಂದು ಅಧಿಕಾರಿಗಳಿಗೆ ಸೂಚನೆ ನೀಡಿದರು.
ಸರ್ಕಾರಿ ಜಾಗ ಗುರುತಿಸಿ; ಸೂಚನೆ
ತಾಲ್ಲೂಕಿನ ಪಂಚಾಯತಿ ವ್ಯಾಪ್ತಿಯಲ್ಲಿ ಲಭ್ಯವಿರುವ ಪೈಸಾರಿ, ಸರ್ಕಾರಿ ಜಾಗವನ್ನು ಗುರುತಿಸಿ ಹದ್ದುಬಸ್ತ್ ಮಾಡಿಕೊಳ್ಳಲು ಪಿಡಿಒ ಕ್ರಮ ಕೈಗೊಳ್ಳಬೇಕು.
ಸಿಎಂ ವಿವೇಚನ ನಿಧಿಯಲ್ಲಿ ಒಂದು ಎಕರೆಗೆ ಬಡಾವಣೆ ಅಭಿವೃದ್ಧಿಗೆ ₹ 35 ಲಕ್ಷ ಅನುದಾನ ನೀಡಲಾಗುತ್ತದೆ
ಗುಡ್ಡೆಹೊಸೂರಿನಲ್ಲಿ ಹತ್ತು ಎಕರೆ, ಕೂಡುಮಂಗಳೂರು ಎಕರೆ ಹಾಗೂ ಕಂಬಿಬಾಣೆ 10.5 ಎಕರೆ ಸೇರಿದಂತೆ ಇತರ ಪಂಚಾಯತಿಯಲ್ಲಿರುವ ಜಾಗವನ್ನು ಗುರುತಿಸಿ ಬಡಾವಣೆಯಾಗಿ ಅಭಿವೃದ್ಧಿ ಪಡಿಸಿ ವಸತಿ ರಹಿತರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.