ADVERTISEMENT

ಗೋಣಿಕೊಪ್ಪಲು: ಬೈಗುಳದ ಸುರಿಮಳೆಯೇ ದೇವರಿಗೆ ನೈವೇದ್ಯ

ವಿಜೃಂಭಣೆಯಿಂದ ಜರುಗಿದ ದಕ್ಷಿಣ ಕೊಡಗಿನ ಬುಡಕಟ್ಟು ಜನರ ‘ಕುಂಡೆ ಹಬ್ಬ’; ಕುಣಿದು ಸಂಭ್ರಮಿಸಿದ ಗಿರಿಜನ

​ಪ್ರಜಾವಾಣಿ ವಾರ್ತೆ
Published 27 ಮೇ 2022, 6:45 IST
Last Updated 27 ಮೇ 2022, 6:45 IST
ಗೋಣಿಕೊಪ್ಪಲು ಪಟ್ಟಣದಲ್ಲಿ ಗುರುವಾರ ಕುಂಡೆ ಹಬ್ಬದ ವೇಷಧಾರಿಗಳು ಕುಣಿದು ಕುಪ್ಪಳಿಸಿದರು.
ಗೋಣಿಕೊಪ್ಪಲು ಪಟ್ಟಣದಲ್ಲಿ ಗುರುವಾರ ಕುಂಡೆ ಹಬ್ಬದ ವೇಷಧಾರಿಗಳು ಕುಣಿದು ಕುಪ್ಪಳಿಸಿದರು.   

ಗೋಣಿಕೊಪ್ಪಲು: ದಕ್ಷಿಣ ಕೊಡಗಿನ ಬುಡಕಟ್ಟು ಜನರ ಪ್ರಮುಖ ಧಾರ್ಮಿಕ ಉತ್ಸವವಾದ ಕುಂಡೆ ಹಬ್ಬ ಗುರುವಾರ ವಿಜೃಂಭಣೆಯಿಂದ ನಡೆಯಿತು.

ಜಿಲ್ಲೆಯ ವಿವಿಧ ಭಾಗಗಳಿಂದ, ಮೈಸೂರು ಜಿಲ್ಲೆಯ ಬೂದಿತಿಟ್ಟು, ಮಾಲ್ದಾರೆ, ಪಂಚವಳ್ಳಿ, ಹನಗೋಡು, ಮಾಸ್ತಿಗುಡಿ, ವೀರನಹೊಸಳ್ಳಿ, ನಾಗಾಪುರ ಭಾಗಗಳಿಂದ ವೇಷ ಧರಿಸಿಕೊಂಡು ಬಂದಿದ್ದ ಸಾವಿರಾರು ಗಿರಿಜನರು ಕೈಗೆ ಸಿಕ್ಕಿದ ವಸ್ತುಗಳನ್ನೇ ತಾಳಮೇಳ ಮಾಡಿಕೊಂಡು, ಮನಸ್ಸಿಗೆ ಬಂದ ವೇಷ ಧರಿಸಿ ಎಲ್ಲೆಂದರಲ್ಲಿ ಕುಣಿದು ಕುಪ್ಪಳಿಸಿದರು.

ಗುರುವಾರ ಮಧ್ಯಾಹ್ನದ ಬಳಿಕ ಹಬ್ಬ ನಡೆಯುವ ಸ್ಥಳ ದೇವರಪುರದ ಭದ್ರಕಾಳಿ ದೇವಾಲಯದ ಆವರಣದಲ್ಲಿ ಜಮಾಯಿಸಿ ಕುಣಿದು ಸಂಭ್ರಮಿಸಿದರು. ಆದರೆ, ಇವರ ಸಂಭ್ರಮಕ್ಕೆ ಜಿಲ್ಲಾಡಳಿತ ಘೋಷಿಸಿದ್ದ ಮದ್ಯ ನಿಷೇಧ ತಣ್ಣೀರೆರಚಿತು. ಮಧ್ಯಮದ ವಯಸ್ಸಿನ ಪುರುಷ ಮತ್ತು ಮಹಿಳೆಯರು ಮದ್ಯವಿಲ್ಲದೆ ಸಪ್ಪೆ ಮೋರೆ ಹಾಕಿಕೊಂಡು ಪಟ್ಟಣದ ಅಂಗಡಿ ಮುಂಗಟ್ಟುಗಳ ಮುಂದೆ ಕುಳಿತಿದ್ದರು.

ADVERTISEMENT

ಇನ್ನು ಯುವಕರು ಕೈಗೆ ಸಿಕ್ಕಿದ ಹಳೆಯ ಟಿನ್, ಪ್ಲಾಸ್ಟಿಕ್ ಡ್ರಂ, ಒಡೆದ ಪ್ಲಾಸ್ಟಿಕ್ ಬಿಂದಿಗೆ, ಬಕೆಟ್‌ಗಳನ್ನು ವಾದ್ಯ ಪರಿಕರಗಳನ್ನಾಗಿ ಮಾಡಿಕೊಂಡಿದ್ದರು. ಮಹಿಳೆಯರ ಉಡುಪುಗಳನ್ನು ವಿಚಿತ್ರವಾಗಿ ತೊಟ್ಟಿದ್ದರೆ, ಬಗೆಬಗೆಯ ಬಣ್ಣಗಳು ಮುಖವನ್ನು ಆವರಿಸಿದ್ದವು. ಕರಡಿ, ಕಿರುಬ, ಮಂಗ ಮೊದಲಾದ ಪ್ರಾಣಿಗಳ ವೇಷಗಳನ್ನು ಮುಖಕ್ಕೆ ತೊಟ್ಟು, ಡ್ರಂಗಳನ್ನು ಬಡಿಯುತ್ತಾ, ಎದುರಿಗೆ ಬಂದವರಿಗೆ ‘ಏ ಕುಂಡೆ...’ ಎಂದು ಅಶ್ಲೀಲವಾಗಿ ಮನಸೋಇಚ್ಛೆ ಬೈಗುಳದ ಸುರಿಮಳೆಗೈಯ್ಯುತ್ತಾ, ಅದನ್ನೇ ಹಾಡುತ್ತಾ ಹಣ ಬೇಡಿದರು.

ಬುಧವಾರ ಬೆಳಿಗ್ಗೆ ಆರಂಭವಾದ ಇವರ ಹಬ್ಬ ಗುರುವಾರ ಸಂಜೆವರೆಗೂ ಮುಂದುವರಿಯಿತು. ಕೋವಿಡ್‌ನಿಂದಾಗಿ ಎರಡು ವರ್ಷಗಳ ಕಾಲ ಮರೆಯಾಗಿದ್ದ ಸಂಭ್ರಮ ಈ ಬಾರಿ ವಿಜೃಂಭಿಸಿತು.

ಪಿರಿಯಾಪಟ್ಟಣ ತಾಲ್ಲೂಕಿನ ಪಂಚವಳ್ಳಿಯಿಂದ ಹಿಡಿದು ಜಿಲ್ಲೆಯ ತಿತಿಮತಿ ದೇವರಪುರದವರೆಗೂ ಹೆದ್ದಾರಿಯಲ್ಲಿ ಕುಂಡೆ ಹಬ್ಬದ ವೇಷಧಾರಿಗಳೇ ಕಂಡುಬಂದರು. ರಸ್ತೆಯಲ್ಲಿ ಓಡಾಡುವ ವಾಹನಗಳನ್ನು ತಡೆಗಟ್ಟಿ ಕುಣಿಯುತ್ತಾ ಹಣ ಬೇಡಿದರು. ಅವರು ಹಣ ಕೊಟ್ಟರೂ ಬೈಯ್ಯುತ್ತಿದ್ದರು, ಕೊಡದಿದ್ದರೂ ಬೈಯ್ಯುತ್ತಿದ್ದರು. ವೇಷ ಧಾರಿಗಳು ಎಷ್ಟೇ ಬೈದರು ಯಾರೂ ಸಿಟ್ಟು ಮಾಡಿಕೊಳ್ಳುವುದಿಲ್ಲ. ಹೀಗಾಗಿ ಇದಕ್ಕೆ ಬೈಯ್ಗಳದ ಹಬ್ಬವೆಂದೇ ಪ್ರತೀತಿ.

ವೇಷಧಾರಿ ಗಿರಿಜನರು ಬೈಯ್ಯುವುದು ದೇವರಿಗೆ ಎಂಬುದು ಸ್ಥಳೀಯರಿಗೆ ಗೊತ್ತಿದೆ. ಹೀಗಾಗಿ, ಈ ಹಬ್ಬದ ಆಚರಣೆ ವೇಳೆ ಬೈಯ್ಯುವವರನ್ನು ಕಂಡು ನಸು ನಕ್ಕು ಮುಂದಕ್ಕೆ ಹೋಗುತ್ತಾರೆ. ಸಂಜೆಯಾದ ಬಳಿಕ ಗಿರಿಜನರು ತಾವು ಎರಡು ದಿನಗಳ ಕಾಲ ಬೇಡಿದ್ದ ಹಣದಲ್ಲಿ ಸ್ವಲ್ಪಭಾಗವನ್ನು ಭದ್ರಕಾಳಿ ದೇವಸ್ಥಾನದ ಹುಂಡಿಗೆ ಹಾಕಿ ಅಡ್ಡ ಬಿದ್ದು ‘ಬೈಯ್ದದ್ದು ತಪ್ಪಾಯಿತು, ಕ್ಷಮಿಸು...’ ಎಂದು ಕ್ಷಮೆ ಕೋರಿದರು. ಸೂರ್ಯಾಸ್ತದ ಬಳಿಕ ಎಲ್ಲರೂ ತಮ್ಮ ಮನೆಗಳತ್ತ ತೆರಳಿದರು.

ಮಧ್ಯಾಹ್ನ 3 ಗಂಟೆ ವೇಳೆಗೆ ಭದ್ರಕಾಳಿ ದೇವಸ್ಥಾನದ ಭಂಡಾರ ತಕ್ಕರಾದ ಸಣ್ಣುವಂಡ ಮತ್ತು ಮನೆಯಪಂಡ ಕುಟುಂಬಸ್ಥರು ಕೃತಕ ಕುದುರೆ ಕಟ್ಟಿ, ಭಂಡಾರ ತಟ್ಟೆ ಹೊತ್ತು ವಾದ್ಯದೊಂದಿಗೆ ದೇವಸ್ಥಾನದ ಬಳಿ ಬಂದು ಪೂಜೆ ಪುನಸ್ಕಾರ ನೆರವೇರಿಸಿದರು.

ಭದ್ರಕಾಳಿಯನ್ನು ಬೈಯ್ಯುವುದು ಈ ಹಬ್ಬದ ವಿಶೇಷ

ಹಿರಿಯರು ಹೇಳುವಂತೆ ಈ ಬೈಯ್ಗುಳಕ್ಕೆ ಒಂದು ಕಾರಣವಿದೆ. ಅಯ್ಯಪ್ಪ ಎಂಬ ವ್ಯಕ್ತಿ ಜೇನುಕುರುಬರನ್ನು ಕರೆದುಕೊಂಡು ದಟ್ಟ ಅರಣ್ಯಕ್ಕೆ ಬೇಟಿಗೆ ಹೋದನಂತೆ. ಅಲ್ಲಿ ಭದ್ರಕಾಳಿ ಎಂಬ ಮಹಿಳೆ ಕಾಣಿಸಿಕೊಂಡಾಗ ಅಯ್ಯಪ್ಪ ಆಕೆಯ ವ್ಯಾಮೋಹಕ್ಕೆ ಒಳಗಾಗಿ ತನ್ನ ಜತೆಯಲ್ಲಿದ್ದ ಜೇನುಕರುಬರನ್ನು ಕಾಡಿನಲ್ಲೇ ಬಿಟ್ಟು ಆಕೆಯೊಂದಿಗೆ ಓಡಿ ಹೋದನಂತೆ. ಇದರಿಂದ ದಿಕ್ಕು ಕಾಣದ ಜೇನುಕುರುಬರು ಮತ್ತೆ ಹಿಂದಿರುಗಲು ಅಸಹಾಯಕರಾಗಿ ದಾರಿ ಹುಡುಕುವಾಗ ಅವರಿಬ್ಬರು ಏಕಾಂತದಲ್ಲಿ ಮುಳುಗಿರುವುದು ಕಂಡು ಬಂದಿತಂತೆ. ತಮ್ಮ ಪ್ರೀತಿಯ ಆರಾಧ್ಯ ದೈವವಾದ ಅಯ್ಯಪ್ಪ ತಮ್ಮನ್ನು ಮಧ್ಯಕಾಡಿನಲ್ಲಿ ಕೈಬಿಡಲು ಕಾರಣಳಾದ ಭದ್ರಕಾಳಿಯ ಮೇಲೆ ಕೋಪಗೊಂಡ ಜೇನುಕುರುಬರು ಮನಸಾರೆ ಆಕೆಯನ್ನು ಶಪಿಸಿದರಂತೆ. ಹೀಗಾಗಿ ಭದ್ರಕಾಳಿಯನ್ನು ಮನಸಾರೆ ಬೈಯ್ಯುವ ಹಬ್ಬವೇ ‘ಕುಂಡೆ ಹಬ್ಬ’ ಎನ್ನುತ್ತಾರೆ ಹಿರಿಯರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.