ಕುಶಾಲನಗರ: ಸಣ್ಣ ಉದ್ಯಮಿಗಳಿಗೆ ಉತ್ತೇಜನ ನೀಡಲು ಪ್ರದರ್ಶನ ಮತ್ತು ಮಾರಾಟ ಮೇಳ ಸಹಕಾರಿಯಾಗಿದೆ ಎಂದು ಶಾಸಕ ಡಾ.ಮಂತರ್ ಗೌಡ ಹೇಳಿದರು.
ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ವತಿಯಿಂದ ಬೈಚನಹಳ್ಳಿ ಎಸ್ಎಲ್ಎನ್ ಟೈಮ್ ಸ್ಕ್ವೇರ್ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಬೃಹತ್ ಗ್ರಾಹಕ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮೇಳ ಉದ್ಘಾಟಿಸಿ ಅವರು ಮಾತನಾಡಿದರು. ವರ್ತಕರ ಒಗ್ಗಟ್ಟಿನ ಮೂಲಕ ಸಣ್ಣ ವ್ಯಾಪಾರಿಗಳ ಏಳಿಗೆಗಾಗಿ ಚೇಂಬರ್ ಆಫ್ ಕಾಮರ್ಸ್ ಶ್ರಮಿಸಬೇಕು. ಸ್ಥಳೀಯ ಹಣಕಾಸು ವ್ಯವಸ್ಥೆಗೆ ಶಕ್ತಿ ತುಂಬುವ ವ್ಯಾಪಾರಿಗಳ ಅಭಿವೃದ್ಧಿಗೆ ಸರ್ಕಾರದ ಮೂಲಕ ಅಗತ್ಯ ನೆರವು ಕಲ್ಪಿಸಲು ಪ್ರಯತ್ನಿಸುವುದಾಗಿ ಹೇಳಿದರು.
ಗ್ರಾಹಕರಿಗೆ ಗುಣಮಟ್ಟದ ವಸ್ತುಗಳ ಪೂರೈಕೆ ಮಾಡುವಲ್ಲಿ ಪ್ರತಿಯೊಬ್ಬ ವರ್ತಕರು ಗಮನಹರಿಸಬೇಕು. ವ್ಯಾಪಾರಿಗಳ ಸಮಸ್ಯೆಗಳನ್ನು ಚರ್ಚಿಸಿ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಚೇಂಬರ್ ಆಫ್ ಕಾಮರ್ಸ್ ಸದಾ ಕಾರ್ಯ ನಿರ್ವಹಿಸುವಂತಾಗಲಿ ಎಂದು ಮೇಳದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಅದ್ವೈತ್ ಹ್ಯುಂಡೈ ಮಾರುಕಟ್ಟೆ ವಿಭಾಗದ ನಿರ್ದೇಶಕ ಎಲ್.ಎನ್. ಅಜಯ್ ಸಿಂಗ್ ಮಾತನಾಡಿ, ಗ್ರಾಹಕರಿಗೆ ಉತ್ತಮ ಸೇವೆ ನೀಡುವ ಮೂಲಕ ವರ್ತಕರು ನಿರಂತರ ವ್ಯಾಪಾರ ವಹಿವಾಟು ಮಾಡುವಂತಾಗಲಿ ಎಂದು ಮೇಳಕ್ಕೆ ಶುಭ ಕೋರಿದರು.
ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸ್ಥಾನೀಯ ಸಮಿತಿ ಅಧ್ಯಕ್ಷ ಕೆ.ಎಸ್ ನಾಗೇಶ್ ಅಧ್ಯಕ್ಷತೆ ವಹಿಸಿದ್ದರು. ಎಸ್‌ಎಲ್‌ಎನ್ ಗ್ರೂಪ್ ಮುಖ್ಯಸ್ಥ ವಿಶ್ವನಾಥನ್, ಲೀಡ್ ಬ್ಯಾಂಕ್ ವ್ಯವಸ್ಥಾಪಕ ಗಂಗಾಧರ್ ನಾಯಕ್, ಚೇಂಬರ್ ಆಫ್ ಕಾಮರ್ಸ್ ಕೊಡಗು ಜಿಲ್ಲಾಧ್ಯಕ್ಷ ಬಿ.ಆರ್ .ನಾಗೇಂದ್ರ ಪ್ರಸಾದ್, ಮಾಜಿ ಅಧ್ಯಕ್ಷ ಎಸ್.ಕೆ.ಸತೀಶ್, ಪ್ರಧಾನ ಕಾರ್ಯದರ್ಶಿ ಚಿತ್ರ ರಮೇಶ್, ನಿರ್ದೇಶಕ ರಂಗಸ್ವಾಮಿ,ಚಂದ್ರು ಪಾಲ್ಗೊಂಡಿದ್ದರು.
ಮೇಳದಲ್ಲಿ ವಿವಿಧ ಕಂಪನಿಗಳ ದ್ವಿಚಕ್ರ, ಕಾರು ಮತ್ತಿತರ ವಾಹನಗಳ ಪ್ರದರ್ಶನ ಹಾಗೂ ಮಾರಾಟ ಸೇರಿದಂತೆ ವಿವಿಧ ರೀತಿಯ ನೂರಕ್ಕೂ ಅಧಿಕ ಮಳಿಗೆಗಳು ಗ್ರಾಹಕರನ್ನು ಆಕರ್ಷಿಸಿತು. ಸ್ಥಳೀಯ ಪ್ರತಿಭೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಇದೇ ಸಂದರ್ಭ ಶಾಸಕರು ಮತ್ತು ಗಣ್ಯರನ್ನು ಸನ್ಮಾನಿಸಿ ಗೌರವಿಸಲಾಯಿತು. ಕೆಲವು ನೂತನ ಕಾರುಗಳನ್ನು ಮೇಳದಲ್ಲಿ ಲೋಕಾರ್ಪಣೆಗೊಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.