ADVERTISEMENT

ಕುಶಾಲನಗರ: ಬಜೆಟ್‌ನಲ್ಲಿ ಮಂಡನೆಯಾದವು ಹಲವು ಯೋಜನೆಗಳು

ಕುಶಾಲನಗರ ಪುರಸಭೆ ಆಯವ್ಯಯ ಸಭೆ, ₹ 15.38 ಲಕ್ಷ ಉಳಿತಾಯ ಬಜೆಟ್ ಮಂಡನೆ

​ಪ್ರಜಾವಾಣಿ ವಾರ್ತೆ
Published 21 ಫೆಬ್ರುವರಿ 2026, 6:34 IST
Last Updated 21 ಫೆಬ್ರುವರಿ 2026, 6:34 IST
ಕುಶಾಲನಗರ ಪುರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಮಂಡಿಸಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಭಾಗವಹಿಸಿದ್ದರು.
ಕುಶಾಲನಗರ ಪುರಸಭೆಯ 2026-27ನೇ ಸಾಲಿನ ಬಜೆಟ್ ಅನ್ನು ಆಡಳಿತಾಧಿಕಾರಿಯೂ ಆದ ಉಪ ವಿಭಾಧಿಕಾರಿ ನೀತಿನ್ ಚೆಕ್ಕಿ ಮಂಡಿಸಿದರು. ಯೋಜನಾ ಪ್ರಾಧಿಕಾರದ ಅಧ್ಯಕ್ಷ ಪ್ರಮೋದ್ ಮುತ್ತಪ್ಪ,ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್, ಆರೋಗ್ಯ ನಿರೀಕ್ಷಕ ಉದಯಕುಮಾರ್ ಭಾಗವಹಿಸಿದ್ದರು.   

ಕುಶಾಲನಗರ: ‘ಫುಡ್‌ಕೋರ್ಟ್‌ ನಿರ್ಮಾಣ, ಸಿಬ್ಬಂದಿಗೆ ಅಪಘಾತ ವಿಮೆ, ಗುಂಡೂರಾವ್ ಪ್ರತಿಮೆ ಸ್ಥಾಪನೆ ಸೇರಿದಂತೆ ಹಲವು ಯೋಜನೆಗಳನ್ನೊಳಗೊಂಡ ₹ 15.38 ಲಕ್ಷ ಉಳಿತಾಯ ಬಜೆಟ್‌ನ್ನು ಇಲ್ಲಿನ ಪುರಸಭೆಯ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಶುಕ್ರವಾರ ಮಂಡಿಸಿದರು.

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಮುಂಭಾಗದಲ್ಲಿ ಫುಡ್‌ಕೋರ್ಟ್‌ ನಿರ್ಮಾಣ ಮಾಡಲು ₹ 15 ಲಕ್ಷ, ಪುರಸಭೆ ಕಚೇರಿಯ ಸಂಪೂರ್ಣ ಕಡತಗಳನ್ನು ಡಿಜಿಟಲೀಕರಣಗೊಳಿಸಲು ₹ 20 ಲಕ್ಷ, ಪುರಸಭೆ ವ್ಯಾಪ್ತಿಯ ಎಲ್ಲಾ ವಾರ್ಡ್‌ಗಳಲ್ಲಿ ಮಹಿಳೆಯರು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಸೋಲಾರ್ ಸಿಸಿಟಿವಿ ಅಳವಡಿಸಲು ₹ 25 ಲಕ್ಷಗಳನ್ನು ಮೀಸಲಿರಿಸಲಾಗಿದೆ.

ಬೀದಿನಾಯಿಗಳ ಸಂತಾನ ಶಕ್ತಿಹರಣ ಶಸ್ತ್ರಚಿಕಿತ್ಸೆಗಾಗಿ ₹ 10 ಲಕ್ಷ, ಪುರಸಭೆ ವ್ಯಾಪ್ತಿಯ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಆವರಣದಲ್ಲಿ ಮಹಿಳೆಯರ ಅನುಕೂಲಕ್ಕಾಗಿ ಸ್ಯಾನಿಟರಿ ಪ್ಯಾಡ್ ವೆಂಡಿಂಗ್ ಯಂತ್ರ ಅಳವಡಿಸಲು ಈ ಬಾರಿ ಬಜೆಟ್‌ನಲ್ಲಿ ಉದ್ದೇಶಿಸಲಾಗಿದೆ.

ADVERTISEMENT

ಪುರಸಭೆಯಲ್ಲಿ ಕೆಲಸ ನಿರ್ವಹಿಸುತ್ತಿರುವ ಎಲ್ಲಾ ಪೌರಸಿಬ್ಬಂದಿಗಳಿಗೆ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯದಲ್ಲಿ ಜನರಲ್ ಪರ್ಸನಲ್ ಇನ್ಸೂರೆನ್ಸ್ ಅಡಿಯಲ್ಲಿ ₹ 60 ಲಕ್ಷದ ಅಪಘಾತ ವಿಮೆ ಮಾಡಿಸಲು ಉದ್ದೇಶಿಸಲಾಗಿದೆ. ಪುರಸಭೆ ವ್ಯಾಪ್ತಿಯಲ್ಲಿರುವ ಎಲ್ಲಾ ವೃತ್ತಗಳ ಅಭಿವೃದ್ಧಿ ಹಾಗೂ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿ ಪ್ರತಿಮೆ ಹಾಗೂ ಗುಂಡೂರಾವ್ ಪ್ರತಿಮೆ ಸ್ಥಾಪನೆಗಾಗಿ ₹ 25 ಲಕ್ಷ ಕಾಯ್ದಿರಿಸಲಾಗಿದೆ ಎಂದು ಮುಖ್ಯಾಧಿಕಾರಿ ಟಿ.ಎಸ್.ಗಿರೀಶ್ ತಿಳಿಸಿದರು.

2026-27ನೇ ಸಾಲಿಗೆ ನಿರೀಕ್ಷಿತ ಆದಾಯ ₹ 31.44 ಕೋಟಿ, ನಿರೀಕ್ಷಿತ ಖರ್ಚು ₹ 31.28 ಕೋಟಿ ಆದಾಂಜಿಸಲಾಗಿದ್ದು ₹ 15.38 ಲಕ್ಷ ಉಳಿತಾಯ ನಿರೀಕ್ಷಿಸಲಾಗಿದೆ.

ಈ ವೇಳೆ ಯೋಜನಾ ಪ್ರಾಧಿಕಾರ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಕಂದಾಯ ಅಧಿಕಾರಿ ರಾಮು, ಆರೋಗ್ಯ ನಿರೀಕ್ಷಕ ಉದಯಕುಮಾರ್ ಹಾಗೂ ಸಿಬ್ಬಂದಿ ಪಾಲ್ಗೊಂಡಿದ್ದರು.

ಆಸ್ತಿ ತೆರಿಗೆ ₹ 3.73 ಕೋಟಿ, ಉದ್ದಿಮೆ ಪರವಾನಗಿ ₹ 50 ಲಕ್ಷ, ಕಟ್ಟಡ ಪರವಾನಗಿ ₹ 32 ಲಕ್ಷ, ಖಾತಾ ವರ್ಗಾವಣೆ ₹ 4.50 ಲಕ್ಷ, ಮಾಂಸಮಾರಾಟ ಮಳಿಗೆಗಳಿಂದ ₹ 10 ಲಕ್ಷ, ಬ್ಯಾಂಕ್ ಗಳಿಂದ ಬಡ್ಡಿ ₹ 10 ಲಕ್ಷ, ಜಾಹೀರಾತು ಶುಲ್ಕ ₹ 3 ಲಕ್ಷ  ನಿರೀಕ್ಷಿಸಲಾಗಿದೆ. ಇದರೊಂದಿಗೆ 16ನೇ ಹಣಕಾಸು ಯೋಜನೆ ಅನುದಾನ ₹ 1.25 ಕೋಟಿ, ಕುಡಿಯುವ ನೀರಿನ ಅನುದಾನ ₹ 10 ಲಕ್ಷ, ಮಳೆಹಾನಿ ಅನುದಾನ ₹ 50 ಲಕ್ಷ, ಸ್ವಚ್ಛಭಾರತ್ ಅನುದಾನ ₹ 30 ಲಕ್ಷ, ಮುಖ್ಯಮಂತ್ರಿಗಳ ಅನುದಾನ ₹ 5.50 ಕೋಟಿ, ಎಸ್.ಎಫ್.ಸಿ ವಿಶೇಷ ಅನುದಾನ ₹ 5 ಕೋಟಿ, ಎಸ್.ಎಫ್.ಸಿ.ಮೀಸಲು ಅನುದಾನ ₹ 15  ಲಕ್ಷ  ಅನುದಾನಗಳನ್ನೂ ನಿರೀಕ್ಷಿಸಲಾಗಿದೆ.

ಎಲ್ಲರನ್ನೂ ಒಳಗೊಳ್ಳುವ ಬಜೆಟ್‌; ನಿತಿನ್ ಚಕ್ಕಿ ಅಲ್ಪಸಂಖ್ಯಾತರು ಮಹಿಳೆಯರು ತೃತೀಯ ಲಿಂಗಿಗಳೂ ಸೇರಿದಂತೆ ಎಲ್ಲರನ್ನೂ ಈ ಬಜೆಟ್ ಒಳಗೊಂಡಿದೆ. ಪುರಸಭೆಯ ದಾಖಲೆಗಳ ಡಿಜಿಟಲೀಕರಣಗೊಳಿಸುವಂತಹ ಮಹತ್ವ ಕಾರ್ಯಕ್ರಮವನ್ನು ಬಜೆಟ್‌ನಲ್ಲಿ ಹಾಕಿಕೊಳ್ಳಲಾಗಿದೆ. ಇದರಲ್ಲಿ ಶಾಸಕರೂ ಸೇರಿದಂತೆ ಎಲ್ಲ ಸಲಹೆಗಳನ್ನೂ ಪಡೆಯಲಾಗಿದೆ ಎಂದು  ರಸಭೆಯ ಆಡಳಿತಾಧಿಕಾರಿಯೂ ಆದ ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ ಬಜೆಟ್ ಮಂಡನೆ ಬಳಿಕ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.