ಕುಶಾಲನಗರ: ಉತ್ತರ ಕೊಡಗಿನ ಚಿಕ್ಕಅಳುವಾರ ಗ್ರಾಮದಲ್ಲಿ ಅಳುವಾರದಮ್ಮ ದೇವಾಲಯ ಸಮಿತಿಯಿಂದ ಏರ್ಪಡಿಸಿದ್ದ ಗ್ರಾಮ ದೇವತೆ ಅಳುವಾರದಮ್ಮ (ಚೌಡೇಶ್ವರಿ) ದೇವಿಯ ವಾರ್ಷಿಕ ಪೂಜಾ ಮಹೋತ್ಸವವು ಶುಕ್ರವಾರ ಶ್ರದ್ಧಾಭಕ್ತಿಯಿಂದ ನೆರವೇರಿತು.
ಬೆಳಿಗ್ಗೆ ದೇವರ ವಿಗ್ರಹಗಳಿಗೆ ಗಂಗಾಸ್ನಾನ ಹಾಗೂ ಗಂಗಾಪೂಜೆ ನೆರವೇರಿಸಲಾಯಿತು. ಅರ್ಚಕ ಜೆ.ಚಂದ್ರ ನೇತೃತ್ವದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ಮಹಾಮಂಗಳಾರತಿ ಬಳಿಕ ದೇವರ ವಿಗ್ರಹದೊಂದಿಗೆ ಪೂರ್ಣಕುಂಭ ಕಳಶ ಹೊತ್ತ ಭಕ್ತಾದಿಗಳು ವಾದ್ಯಗೋಷ್ಠಿಯೊಂದಿಗೆ ದೇವಸ್ಥಾನದವರೆಗೆ ಮೆರವಣಿಗೆ ನಡೆಸಿದರು.
ಅಳುವಾರದಮ್ಮದೇವಿ ಬನದಲ್ಲಿ ದೇವಿಯ ವಿಗ್ರಹ ಮತ್ತು ಕಳಶ ಪ್ರತಿಷ್ಠಾಪಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು. ವಿವಿಧ ಪುಷ್ಪಗಳಿಂದ ದೇವಿಯ ವಿಗ್ರಹವನ್ನು ಶೃಂಗರಿಸಲಾಗಿತ್ತು. ಗ್ರಾಮದ ಜನತೆ ಸೇರಿದಂತೆ ಸುತ್ತಮುತ್ತಲಿನ ಹತ್ತಾರು ಗ್ರಾಮಗಳಿಂದ ಬಂದಿದ್ದ ಭಕ್ತರು ಹಬ್ಬದಲ್ಲಿ ಪಾಲ್ಗೊಂಡು ದೇವಿ ದರ್ಶನ ಪಡೆದರು.
ವಾರ್ಷಿಕ ಪೂಜಾ ಮಹೋತ್ಸವದ ಅಂಗವಾಗಿ ದೇವಸ್ಥಾನ ಸೇರಿದಂತೆ ಗ್ರಾಮವನ್ನು ವಿದ್ಯುತ್ ದೀಪ ಹಾಗೂ ಹಸಿರು ತೋರುಣಗಳಿಂದ ಸಿಂಗರಿಸಲಾಗಿತ್ತು. ಮಹಾಪೂಜೆಯ ನಂತರ ಅನ್ನಸಂತರ್ಪಣೆ ನೆರವೇರಿಸಲಾಯಿತು.
ದೇವರ ಉತ್ಸವಗಳು ಪೂಜಾ ಕೈಂಕರ್ಯಗಳು ದೇವಾಲಯ ಸಮಿತಿ ಅಧ್ಯಕ್ಷ ಎ.ಎನ್.ರಮೇಶ್ ಹಾಗೂ ಕಾರ್ಯದರ್ಶಿ ಸುನೀಲ್ ನೇತೃತ್ವದಲ್ಲಿ ನಡೆದವು. ವಿದ್ಯುತ್ ಅಲಂಕೃತ ಮಂಟಪದಲ್ಲಿ ರಾತ್ರಿ ದೇವಿ ಉತ್ಸವ ಮೆರವಣಿಗೆ ನಡೆಯಿತು.
ಸಮಿತಿ ಗೌರವಾಧ್ಯಕ್ಷ ಟಿ.ಆರ್.ಚಂದ್ರ, ಗೌರವ ಸಲಹೆಗಾರ ಕಾಳಶೆಟ್ಟಿ, ಶಿವಪ್ಪಯ್ಯ, ಉಪಾಧ್ಯಕ್ಷ ಎಚ್.ಎಂ.ಸಂತೋಷ್, ಕಾರ್ಯದರ್ಶಿ ಎ.ಪಿ.ಸುನಿಲ್, ಸಹಕಾರ್ಯದರ್ಶಿ ಎ.ಜಿ.ಸುನಿಲ್, ಖಜಾಂಚಿ ಎ.ಜಿ.ಜಗದೀಶ್, ನಿರ್ದೇಶಕರಾದ ಗುರುಲಿಂಗಪ್ಪ, ಮಾಣಿಚ್ಚ, ತ್ರಿಲೋಕ, ಶಿವರಾಜು, ಹರೀಶ್, ಹಾರುವಯ್ಯ, ಸ್ವಾಮಿ, ರಾಜೇಶ್, ನಾಗೇಶ್, ದೇವಾಲಯದ ಉಸ್ತುವಾರಿ ಶಿವಾನಂದ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.