
ಕುಶಾಲನಗರ: ‘ಆದಿವಾಸಿ ಸಮುದಾಯದವರು ತಮ್ಮ ಮಕ್ಕಳಿಗೆ ಉತ್ತಮ ಶಿಕ್ಷಣ ಕೊಡಿಸುವತ್ತ ಒತ್ತು ನೀಡಬೇಕು. ಯುವಕರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ಹವ್ಯಾಸಗಳನ್ನು ಬೆಳೆಸಿಕೊಂಡು ಆರೋಗ್ಯವಂತರಾಗಬೇಕು’ ಎಂದು ಶಾಸಕ ಡಾ.ಮಂತರ್ ಗೌಡ ಸಲಹೆ ನೀಡಿದರು.
ಕೂಡಿಗೆ ಗ್ರಾಮ ಪಂಚಾಯತಿ ವ್ಯಾಪ್ತಿಯ ಬ್ಯಾಡಗೊಟ್ಟದಲ್ಲಿ ದಿಡ್ಡಳ್ಳಿಯ ನಿರಾಶ್ರಿತ ಅರಣ್ಯವಾಸಿಗಳಿಗೆ ಪುನರ್ವಸತಿ ಕಲ್ಪಿಸಿ 10 ವರ್ಷ ಪೂರೈಸಿದ ನಿಮಿತ್ತ ಎರಡು ದಿನಗಳ ಹಾಡಿ ಹಬ್ಬದ ಅಂಗವಾಗಿ ನಡೆದ ಕ್ರಿಕೆಟ್ ಟೂರ್ನಿಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
‘ಯುವಕರು ಆರೋಗ್ಯದಿಂದ ಇದ್ದಾಗ ಮಾತ್ರ ಸಮಾಜಕ್ಕಾಗಿ ದುಡಿಯಲು ಸಾಧ್ಯ. ಇದಕ್ಕಾಗಿ ಆರೋಗ್ಯ ವೃದ್ಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಬೇಕು, ಸ್ವಚ್ಛ, ಸುಂದರ ಪರಿಸರ ನಿರ್ಮಾಣಕ್ಕೆ ಆದ್ಯತೆ ನೀಡಬೇಕಿದೆ. ಈ ಪುನರ್ವಸತಿ ಶಿಬಿರದಲ್ಲಿ ಶಾಶ್ವತ ಕ್ರೀಡಾಂಗಣ ಸೇರಿದಂತೆ ಕೇಂದ್ರದ ಸರ್ವಾಂಗೀಣ ಅಭಿವೃದ್ದಿಗೆ ಕ್ರಮವಹಿಸಲಾಗುವುದು’ ಎಂದರು.
ಕೂಡಿಗೆ ಗ್ರಾಮ ಪಂಚಾಯತಿ ಸದಸ್ಯ ಟಿ.ಪಿ.ಹಮೀದ್ ಮಾತನಾಡಿ, ‘ಪುನರ್ವಸತಿ ಕೇಂದ್ರದಲ್ಲಿ ರಸ್ತೆ ಅಭಿವೃದ್ದಿಗೆ ಶಾಸಕರು ₹1.30 ಕೋಟಿ ಅನುದಾನ ನೀಡಿದ್ದು, ಅಂಗನವಾಡಿ ಕೇಂದ್ರಕ್ಕೆ ತಡೆಗೋಡೆ ನಿರ್ಮಾಣ ಪ್ರಗತಿಯಲ್ಲಿದೆ. ಸಮುದಾಯ ಭವನ ನಿರ್ಮಾಣಕ್ಕೆ ಕೂಡ ಪ್ರಸ್ತಾವ ಸಲ್ಲಿಸಿದ್ದು, ಮುಂದಿನ ದಿನಗಳಲ್ಲಿ ಇಲ್ಲಿ ವಾಲ್ಮೀಕಿ ಭವನ ನಿರ್ಮಾಣವಾಗಲಿದೆ. ಇದರೊಂದಿಗೆ ಯುಜಿಡಿ ಸಮಸ್ಯೆ ನಿವಾರಣೆಗೆ ಶಾಸಕರು ಕ್ರಮವಹಿಸಲಿದ್ದಾರೆ’ ಎಂದು ತಿಳಿಸಿದರು.
‘ಹಬ್ಬದ ಅಂಗವಾಗಿ ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ನಡೆಯಲಿವೆ’ ಎಂದು ಅವರು ತಿಳಿಸಿದರು.
ಕುಶಾಲನಗರ ತಾಲ್ಲೂಕು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್, ರೈತ ಮುಖಂಡ ನಿರ್ವಾಣಪ್ಪ ಪಾಲ್ಗೊಂಡಿದ್ದರು.