ಕುಶಾಲನಗರ: ಈ ಹಿಂದೆಯೇ ಪಟ್ಟಣದಲ್ಲಿ ಆರಂಭಿಸಿರುವ ₹73 ಕೋಟಿ ವೆಚ್ಚದ ಒಳಚರಂಡಿ (ಯುಜಿಡಿ) ಬಾಕಿ ಕಾಮಗಾರಿಯನ್ನು ಮುಂದಿನ ಅಕ್ಟೋಬರ್ ಒಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಶಾಸಕ ಡಾ.ಮಂತರ್ ಗೌಡ ಜಲಮಂಡಳಿ ಅಧಿಕಾರಿಗಳಿಗೆ ಖಡಕ್ ಸೂಚನೆ ನೀಡಿದರು.
ಇಲ್ಲಿನ ನೂತನ ಪುರಸಭೆ ಕಚೇರಿ ಸಭಾಂಗಣದಲ್ಲಿ ಅಧ್ಯಕ್ಷೆ ಜಯಲಕ್ಷ್ಮಿಚಂದ್ರು ಅಧ್ಯಕ್ಷತೆಯಲ್ಲಿ ಮುಂದುವರಿದ ಸಾಮಾನ್ಯ ಸಭೆ ಮಂಗಳವಾರ ನಡೆಯಿತು.
ಒಳಚರಂಡಿ ವ್ಯವಸ್ಥೆ ಗಬ್ಬೆದ್ದು ನಾರುತ್ತಿದೆ ಎಂದು ಪುರಸಭೆ ಸದಸ್ಯರು ಶಾಸಕ ಮಂತರ್ ಗೌಡ ಅವರ ಉಪಸ್ಥಿತಿಯಲ್ಲಿ ನಡೆದ ಸಭೆಯಲ್ಲೂ ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ಯುಜಿಡಿ ಕಾಮಗಾರಿ ವಸ್ತುಸ್ಥಿತಿ ಏನು? ಯಾವಾಗ ಪೂರ್ಣಗೊಳಿಸುತ್ತಿರಿ ಎಂದು ಶಾಸಕರು ಜಲಮಂಡಳಿ ಕಾರ್ಯಪಾಲಕ ಎಂಜಿನಿಯರ್ ಉಮೇಶ್ ಕುಮಾರ್ ಹಾಗೂ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಪ್ರಸನ್ನ ಕುಮಾರ್ ಅವರನ್ನು ಪ್ರಶ್ನಿಸಿದರು. ಬಹುತೇಕ ಕಾಮಗಾರಿ ಈಗಾಗಲೇ ಮುಗಿದಿದೆ. ಮನೆಗಳಿಗೆ ಸಂಪರ್ಕ ನೀಡಿ, ನಿರ್ವಹಣೆ ಮಾಡಬೇಕಿದೆ. ಇದಕ್ಕಾಗಿ ಮೂರು ತಿಂಗಳಿಗೆ ₹12 ಲಕ್ಷ ಅನುದಾನವನ್ನು ಪುರಸಭೆ ಒದಗಿಸಿಕೊಡಬೇಕು ಎಂದರು.
‘ಇನ್ನೂ ಕಾಮಗಾರಿಯೇ ಮುಗಿದಿಲ್ಲದಿರುವಾಗ ನಿರ್ವಹಣೆ ಬಗ್ಗೆ ಏಕೆ ಮಾತನಾಡುತ್ತಿರಿ? ಮೊದಲು ಒಳಚರಂಡಿ ಯೋಜನೆಗೆ ಚಾಲನೆ ನೀಡಿ. ಸದಸ್ಯರನ್ನು ದಾರಿ ತಪ್ಪಿಸುವ ಕೆಲಸ ಮಾಡಬೇಡಿ’ ಎಂದು ಎಚ್ಚರಿಕೆ ನೀಡಿದರು.
ಯುಜಿಡಿ ಬಗ್ಗೆ ಜನರು ವಿಶ್ವಾಸ ಕಳೆದುಕೊಂಡಿದ್ದಾರೆ. ಕೋಟ್ಯಂತರ ರೂಪಾಯಿ ಅನುದಾನ ಕಾವೇರಿ ನದಿಯಲ್ಲಿ ಹೋಮ ಆಗಬಾರದು. ಮುಂದಿನ ಅಕ್ಟೋಬರ್ ಒಳಗೆ ಎಸ್‌ಟಿಪಿ ಮತ್ತು ಮನೆಗಳಿಗೆ ಸಂಪರ್ಕ ಕಲ್ಪಿಸುವುದು ಸೇರಿ ಎಲ್ಲ ಕಾಮಗಾರಿಯನ್ನು ಪೂರ್ಣಗೊಳಿಸಿ, ಮುಕ್ತಾಯದ ವರದಿ ಸಲ್ಲಿಸುವಂತೆ ಶಾಸಕರು ಸೂಚನೆ ನೀಡಿದರು.
ಸದಸ್ಯ ಡಿ.ಕೆ.ತಿಮ್ಮಪ್ಪ ಮಾತನಾಡಿ, ಯೋಜನೆ ಕಾಮಗಾರಿ ಸರಿಯಾಗಿ ಮಾಡಿಲ್ಲ. ಸರ್ಕಾರದ ಹಣ ಪೋಲು ಆಗಿದೆ. ಈಗ ಆಗಿರುವ ಕಾಮಗಾರಿ ಬಗ್ಗೆ ತನಿಖೆ ನಡೆಸಬೇಕು ಎಂದು ಈ ಹಿಂದೆಯೇ ನಿರ್ಣಯ ಕೂಡ ಮಾಡಲಾಗಿದೆ ಎಂದು ಹೇಳಿದರು.
ಸಾಯಿ ಬಡಾವಣೆಗೆ ಹೋಗುವ ವಿಶಾಲ್ ಮಾರ್ಟ್ ಬಳಿ ರಾಜಕಾಲುವೆ ಒತ್ತುವರಿ ಮಾಡಿ ಖಾಸಗಿ ಬಡಾವಣೆ ನಿರ್ಮಿಸಲಾಗುತ್ತಿದೆ ಎಂದು ಸದಸ್ಯ ಖಲಿಮುಲ್ಲಾ ಖಾನ್ ದೂರಿದರು.
ಪುರಸಭೆ ವ್ಯಾಪ್ತಿಯಲ್ಲಿ ಸರ್ವೇಕಾರ್ಯ ಕೈಗೊಂಡು ರಾಜಕಾಲುವೆಗಳ ಒತ್ತುವರಿ ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕು ಎಂದು ಮುಖ್ಯಾಧಿಕಾರಿ ಗಿರೀಶ್ ಅವರಿಗೆ ಶಾಸಕರು ಸೂಚನೆ ನೀಡಿದರು.
ಉದ್ಯಾನಗಳ ಅಭಿವೃದ್ಧಿ, ಕೊಪ್ಪ ಹಳೆಯ ಸೇತುವೆ ಹಾಗೂ ಹೊಸ ಸೇತುವೆ ದುರಸ್ತಿಪಡಿಸುವಂತೆ ಸದಸ್ಯರು ಶಾಸಕರಿಗೆ ಮನವಿ ಮಾಡಿದರು. ಸೇತುವೆ ದುರಸ್ತಿಗೆ ಕ್ರಮ ಕೈಗೊಳ್ಳಬೇಕು ಎಂದು ಪುರಸಭೆ ಎಂಜಿನಿಯರ್ ಮತ್ತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳಿಗೆ ಶಾಸಕರು ಸೂಚಿಸಿದರು. ಅಲ್ಲದೆ, ಶಾಸಕರ ₹5 ಲಕ್ಷ ಅನುದಾನದಲ್ಲಿ ಹಳೆಯ ಸೇತುವೆಯ ಅಭಿವೃದ್ಧಿಗೆ ಕ್ರಿಯಾಯೋಜನೆ ಸಿದ್ಧಪಡಿಸುವಂತೆ ತಿಳಿಸಿದರು.
ಕೊಪ್ಪ ಗೇಟ್‌ನಿಂದ ತಾವರೆಕೆರೆವರೆಗೆ ಪಾದಚಾರಿ ಮಾರ್ಗ ಸ್ಥಾಪನೆಗೆ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದರು.
ಸದಸ್ಯ ಜೈವರ್ಧನ್ ಮತ್ತು ಶಿವಶಂಕರ್ ಅವರು ಪೌರಕಾರ್ಮಿಕರಿಗೆ ನಿವೇಶನ ಒದಗಿಸುವಂತೆ ಮನವಿ ಮಾಡಿದರು.
ಪ್ರಥಮ ದರ್ಜೆ ಕಾಲೇಜು ಹಿಂಭಾಗ ಇರುವ ಎರಡು ಎಕರೆ ಜಾಗದಲ್ಲಿ ಒಂದು ಎಕರೆಯಲ್ಲಿ 12 ಮಂದಿ ಪೌರ ಕಾರ್ಮಿಕರಿಗೆ ನಿವೇಶನ ಒದಗಿಸಲು ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶಿಸಿದ ಶಾಸಕರು, ಉಳಿದ ಒಂದು ಎಕರೆಯನ್ನು ಮುಳ್ಳುಸೋಗೆ ಗ್ರಾಮಕ್ಕೆ ಸ್ಮಶಾನಕ್ಕಾಗಿ ಕಾಯ್ದಿರಿಸಬೇಕು ಎಂದು ಕಂದಾಯ ಅಧಿಕಾರಿ ಸಂತೋಷ್ ಅವರಿಗೆ ಸೂಚನೆ ನೀಡಿದರು.
ಪುರಸಭೆ ಉಪಾಧ್ಯಕ್ಷೆ ಪುಟ್ಟಲಕ್ಷ್ಮಿ, ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಕಂದಾಯ ಅಧಿಕಾರಿ ರಾಮು, ಆರೋಗ್ಯ ಅಧಿಕಾರಿ ಉದಯಕುಮಾರ್, ವಿವಿಧ ಇಲಾಖೆ ಅಧಿಕಾರಿಗಳು ಪಾಲ್ಗೊಂಡಿದ್ದರು.
‘ಒಂದು ಲೀಟರ್‌ಗಿಂತ ಕಡಿಮೆಯ ಬಾಟಲಿ ನಿಷೇಧಿಸಿ
’ ಪರಿಸರ ಸಂರಕ್ಷಣೆಗೆ ಒತ್ತು ನೀಡುವ ನಿಟ್ಟಿನಲ್ಲಿ ಕುಡಿಯುವ ನೀರಿನ ಒಂದು ಲೀಟರ್ ಬಾಟಲ್‌ಗಿಂತ ಕಡಿಮೆ ಸಾಮರ್ಥ್ಯದ ಬಾಟಲ್‌ಗಳನ್ನು ನಿಷೇಧಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಮಂತರ್ ಗೌಡ ಪುರಸಭೆ ಅಧಿಕಾರಿಗಳಿಗೆ ಸಲಹೆ ನೀಡಿದರು. ಕೊಡಗಿನ ಪ್ರವೇಶದ್ವಾರದ ಟೋಲ್ ಗೇಟ್ ಬಳಿ ಡಿಜಿಟಲ್ ಶೈನ್ ಬೋರ್ಡ್ ಅಳವಡಿಕೆ ಕ್ರಮ ಕೈಗೊಳ್ಳಬೇಕು ಎಂದೂ ಸೂಚಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.