ಕುಶಾಲನಗರ: ಸೋಮವಾರಪೇಟೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಆಶ್ರಯದಲ್ಲಿ ಶಿಶು ಅಭಿವೃದ್ಧಿ ಯೋಜನೆ ಅಡಿಯಲ್ಲಿ 2025-26ನೇ ಸಾಲಿನಲ್ಲಿ ಇಲ್ಲಿನ ಹೆಚ್.ಆರ್.ಪಿ.ಕಾಲೋನಿಯ ಅಂಗನವಾಡಿಯಲ್ಲಿ 1ನೇ ಮತ್ತು 2ನೇ ತರಗತಿಯ ಪೂರ್ವ ಪ್ರಾಥಮಿಕ ಶಿಕ್ಷಣ ಪ್ರಾರಂಭೋತ್ಸವಕ್ಕೆ ಚಾಲನೆ ನೀಡಲಾಯಿತು.
ತಾಲ್ಲೂಕು ಗ್ಯಾರೆಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ವಿ.ಪಿ.ಶಶಿಧರ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಹಿಂದಿನ ಕಾಲಕ್ಕೂ ಇಂದಿಗೂ ಕಾಲಘಟಕ್ಕೂ ಮಕ್ಕಳ ಕಲಿಕಾ ವಿಧಾನದಲ್ಲಿ ಬದಲಾವಣೆ ಕಾಣಬಹುದು. ಆಧುನಿಕತೆಗೆ ತಕ್ಕಂತೆ ಶಿಕ್ಷಣ ವ್ಯವಸ್ಥೆ ಬಳಕೆಯಾಗಬೇಕಿದೆ. ಪುಟಾಣಿಗಳ ಕಲಿಕೆಯನ್ನು ಉತ್ತೇಜಿಸಲು ಆಕರ್ಷಣೀಯ ವಾತಾವರಣ ಸೃಷ್ಠಿಸುವ ಅಗತ್ಯತೆ ಎದುರಾಗಿದೆ. ಮಕ್ಕಳು ಕಷ್ಟಪಟ್ಟು ಕಲಿಯುವುದಕ್ಕಿಂತ ಇಷ್ಟಪಟ್ಟು ಕಲಿಯುವಂತೆ ಶಿಕ್ಷಕರು ಪ್ರೇರೇಪಿಸಬೇಕು.ಶಿಕ್ಷಣವನ್ನು ಪರಿಣಾಮಕಾರಿಯಾಗಿಸುವ ನಿಟ್ಟಿನಲ್ಲಿ ಪೂರಕ ಪರಿಕರಗಳ ಬಳಕೆ ಸಹಕಾರಿಯಾಗಲಿದೆ. ಅಂಗನವಾಡಿಯಲ್ಲಿ ಎಲ್.ಕೆ.ಜಿ, ಯುಕೆಜಿ ಆರಂಭಿಸುವ ಸರ್ಕಾರದ ಇಂತಹ ಆಲೋಚನೆ, ಪ್ರಯೋಗ ಸ್ವಾಗತಾರ್ಹ ಎಂದರು.
ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಾಯಕ ನಿರ್ದೇಶಕಿ ಶ್ರೀದೇವಿ ಮಾತನಾಡಿ ಯೋಜನೆಯ ಬಗ್ಗೆ ಮಾಹಿತಿ ನೀಡಿದರು.
ಪುರಸಭೆ ಅಧ್ಯಕ್ಷೆ ಜಯಲಕ್ಷ್ಮಿ ಚಂದ್ರ ಹಾಗೂ ನಾಮನಿರ್ದೇಶಿತ ಸದಸ್ಯ ಜಿ.ಬಿ.ಜಗದೀಶ್ ಮಾತನಾಡಿ, ಸರ್ಕಾರದ ಈ ಯೋಜನೆ ಹಾಗೂ ಸೌಲಭ್ಯಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಇದೇ ಸಂದರ್ಭ ಸರ್ಕಾರದಿಂದ ಒದಗಿಸಿದ ಎಲ್.ಇ.ಡಿ ಟಿವಿ ಹಾಗೂ ಮಕ್ಕಳ ಪಠ್ಯಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಪುರಸಭೆ ಸದಸ್ಯ ಶೈಲಾ ಕೃಷ್ಣಪ್ಪ ಪೂಜೆ ನೆರವೇರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭ ಪುರಸಭೆ ಸದಸ್ಯರಾದ ಜಯಲಕ್ಷ್ಮಮ್ಮ ನಂಜುಂಡಸ್ವಾಮಿ, ವಿ.ಜೆ.ನವೀನ್ ಗೌಡ, ಗುಡ್ಡೆಹೊಸೂರು ಗ್ರಾಮ ಪಂಚಾಯತಿ ಮಾಜಿ ಅಧ್ಯಕ್ಷೆ ರುಕ್ಮಿಣಿ, ಇಲಾಖೆಯ ಸಂಯೋಜಕಿ ರಂಜಿತಾ, ಅಂಗನವಾಡಿ ಕಾರ್ಯಕರ್ತೆ ಸುಚಿತ್ರಾ ಸೇರಿದಂತೆ ಸುತ್ರಮುತ್ತಲಿನ ಅಂಗನವಾಡಿಗಳ ಕಾರ್ಯಕರ್ತರು, ಪೋಷಕರು ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.