
ಮಡಿಕೇರಿ: ಕೇಂದ್ರ ಸರ್ಕಾರ ಈಚೆಗೆ ಜಾರಿಗೆ ತಂದಿರುವ 4 ಕಾರ್ಮಿಕ ಸಂಹಿತೆಗಳನ್ನು ವಾಪಸ್ ಪಡೆಯಬೇಕು ಎಂಬುದು ಸೇರಿದಂತೆ ಇನ್ನಿತರ ಬೇಡಿಕೆಗಳ ಈಡೇರಿಕೆಗೆ ಒತ್ತಾಯಿಸಿ ಇಲ್ಲಿ ವಿವಿಧ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.
ಕಾರ್ಮಿಕ ಸಂಘಟನೆಗಳ ಜಂಟಿ ಸಮಿತಿ (ಜೆಸಿಟಿಯು) ನೇತೃತ್ವದಲ್ಲಿ ಸಿಐಟಿಯು ಸಂಯೋಜಿತ ಕರ್ನಾಟಕ ರಾಜ್ಯ ಹಮಾಲಿ ಕಾರ್ಮಿಕರ ಫೆಡರೇಷನ್, ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಮಿಕ ವಿಭಾಗ, ಕೊಡಗು ಜಿಲ್ಲಾ ಸರ್ಕಾರಿ ಆಸ್ಪತ್ರೆ ಸ್ವಚ್ಛತೆ ಮತ್ತು ‘ಡಿ’ ಗ್ರೂಪ್ ನೌಕರರ ಸಂಘ, ಎಸ್ಎಚ್‌ಕೆ, ಸಿಐಟಿಯು, ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘ, ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ಸಂಘ ಸೇರಿದಂತೆ ಹಲವು ಸಂಘಟನೆಗಳ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.
ಹಳೆಯ ಬಸ್‌ನಿಲ್ದಾಣದಿಂದ ಆರಂಭವಾದ ಪ್ರತಿಭಟನಾ ಮೆರವಣಿಗೆ ಗಾಂಧಿ ಮೈದಾನ ತಲುಪಿತು. ಅಲ್ಲಿ ಸಮಾವೇಶ ನಡೆಸಿದ ಕಾರ್ಮಿಕರು ಕೇಂದ್ರ ಸರ್ಕಾರದ ವಿರುದ್ಧ ದಿಕ್ಕಾರದ ಘೋಷಣೆಗಳನ್ನು ಮೊಳಗಿಸಿದರು. ಮೆರವಣಿಯುದ್ದಕ್ಕೂ ಕೆಂಬಾವುಟಗಳು ಹಾರಾಡಿದವು.
ಸಿಐಟಿಯು ಪ್ರಧಾನ ಕಾರ್ಯದರ್ಶಿ ಪಿ.ಆರ್.ಭರತ್ ಮಾತನಾಡಿ, ‘ದೇಶದ 10 ಟ್ರೇಡ್ ಯೂನಿಯನ್ ಒಂದಾಗಿ, ಪ್ರಗತಿಪರ ಸಂಘಟನೆಗಳೆಲ್ಲವೂ ಒಟ್ಟುಗೂಡಿ ದೇಶಾದ್ಯಂತ ಈ ಬೃಹತ್ ಪ್ರತಿಭಟನೆ ನಡೆಸುತ್ತಿದ್ದಾರೆ. ಸ್ವಾತಂತ್ರ್ಯಪೂರ್ವದಿಂದಲೇ ಹೋರಾಟ ಮಾಡಿ ದುಡಿಯುವ ವರ್ಗ ಪಡೆದುಕೊಂಡ ಕಾನೂನುಗಳನ್ನು ಕೇಂದ್ರ ಸರ್ಕಾರ ಬಂಡವಾಳಷಾಹಿಗಳ ಪರವಾಗಿ ಕಾರ್ಮಿಕರಿಗೆ ಹೊಡೆತ ನೀಡುವಂತಹ ಕಾರ್ಮಿಕ ಸಂಹಿತೆಗಳನ್ನಾಗಿ ಜಾರಿಗೆ ತಂದಿದೆ’ ಎಂದು ಆರೋಪಿಸಿದರು.
‘ಕಾರ್ಮಿಕರ ಕಾನೂನುಗಳನ್ನು ಕಿತ್ತುಕೊಳ್ಳಲು ಇದೇನು ಕೇಂದ್ರ ಸರ್ಕಾರ ಅವರು ಕೊಟ್ಟಿದ್ದೇ’ ಎಂದು ಪ್ರಶ್ನಿಸಿದ ಅವರು, ‘ಈ ಕಾನೂನುಗಳನ್ನು ನೂರಾರು ಕಾರ್ಮಿಕರ ಬಲಿದಾನದ ಫಲವಾಗಿ ಸ್ವಾತಂತ್ರ್ಯಪೂರ್ವದಲ್ಲೇ ಜಾರಿಗೊಳಿಸಲಾಗಿತ್ತು ಎಂದರು.
ದೇಶದ ಬಂಡವಾಳಶಾಹಿಗಳ ಸಂಪತ್ತನ್ನು ಹೆಚ್ಚಿಸಲು, ಶ್ರೀಮಂತರನ್ನು ಇನ್ನಷ್ಟು ಶ್ರೀಮಂತರನ್ನಾಗಿ ಮಾಡಲು ಕಾನೂನು ಸಂಹಿತೆಗಳನ್ನು ಜಾರಿಗೆ ತಂದಿದೆ ಎಂದು ಹರಿಹಾಯ್ದರು.
‘ಕಾರ್ಮಿಕರ ಹಕ್ಕುಗಳನ್ನು ಕಿತ್ತುಕೊಂಡು ಬಂಡವಾಳಶಾಹಿಗಳ ಗುಲಾಮರನ್ನಾಗಿಸುವ ಹುನ್ನಾರ’ ಎಂದು ಕಿಡಿಕಾರಿದರು.
ಮಹಾತ್ಮ ಗಾಂಧೀಜಿ ಅವರ ಹೆಸರಿನಲ್ಲಿರುವ ನರೇಗಾ ಕಾಯ್ದೆ ತೆಗೆದು ಹಾಕಿದ್ದಾರೆ. ಬೀಜ ಕಾಯ್ದೆ, ವಿದ್ಯುತ್‌ಚ್ಛಕ್ತಿ ಕಾಯ್ದೆ, ಜನವಿರೋಧಿಯಾದ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.
ಈ ಹೋರಾಟ ಆರಂಭವಷ್ಟೇ. ಒಂದು ವೇಳೆ ಸರ್ಕಾರ ಬೇಡಿಕೆ ಈಡೇರಿಸದೇ ಇದ್ದರೆ ನವದೆಹಲಿಯಲ್ಲಿ ನಡೆದ ಬೃಹತ್ ರೈತರ ಪ್ರತಿಭಟನೆಯಂತಹ ದೊಡ್ಡ ಪ್ರಮಾಣದ ಪ್ರತಿಭಟನೆಗಳು ನಡೆಯುತ್ತವೆ ಎಂದು ಎಚ್ಚರಿಕೆ ನೀಡಿದರು.
ರಾಜ್ಯದಲ್ಲಿ ಈ ಕಾನೂನುಗಳನ್ನು ಜಾರಿಗೆ ತರಬಾರದು ಎಂದು ಅವರು ಇದೇ ವೇಳೆ ಒತ್ತಾಯಿಸಿದರು.
ಸಿಐಟಿಯು ಜಿಲ್ಲಾ ಘಟಕದ ಅಧ್ಯಕ್ಷ ಎ.ಸಿ.ಸಾಬು, ಎಐಟಿಯುಸಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಎಂ.ಸೋಮಪ್ಪ, ಉಪಾಧ್ಯಕ್ಷರಾದ ಎನ್.ಮಣಿ, ರೈತ ಸಂಘದ ನೆರವಂಡ ಉಮೇಶ್, ಕಾರ್ಮಿಕ ವಿಭಾಗದ ಅಧ್ಯಕ್ಷ ಕೆ.ಆರ್.ದಿನೇಶ್ ಶೆಟ್ಟಿ, ಐಎನ್‌ಟಿಯುಸಿ ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಅಣ್ಣಯ್ಯ, ಕೊಡಗು ಜಿಲ್ಲಾ ಜನರಲ್ ವರ್ಕಸ್ ಯೂನಿಯನ್ ಕಾರ್ಯದರ್ಶಿ ಮಹದೇವ್, ಅಂಗನವಾಡಿ ವರ್ಕ್ಸ್ ಯೂನಿಯನ್‌ನ ಅಧ್ಯಕ್ಷೆ ಸುಮಿತ್ರಾ, ಪ್ರಧಾನ ಕಾರ್ಯದರ್ಶಿ ಜಮುನಾ, ಬಿಸಿಯೂಟ ಕಾರ್ಮಿಕರ ಸಂಘದ ಕುಸುಮಾ, ಕಾಫಿ ಕ್ಯೂರಿಂಗ್ ವರ್ಕ್‌ಸ್ ಯೂನಿಯನ್‌ನ ಅಧ್ಯಕ್ಷ ಮಂಜುನಾಥ್, ಮುಖಂಡರಾದ ಶಾಜಿ ರಮೇಶ್, ಜಾನಕಿ, ಡಿ.ಎಸ್.ನಿರ್ವಾಣಪ್ಪ, ಟಿ.ಪಿ.ರಮೇಶ್, ಪುಷ್ಪಾ, ಲಕ್ಷ್ಮಣ್, ಉದಯಕುಮಾರ್ ಭಾಗವಹಿಸಿದ್ದರು.
ಮಡಿಕೇರಿಯಲ್ಲಿ ಪ್ರತಿಭಟನಾ ಮೆರವಣಿಗೆ ಬೇಡಿಕೆ ಈಡೇರದಿದ್ದರೆ ಮುಂದೆ ಇನ್ನಷ್ಟು ಪ್ರತಿಭಟನೆ ರಾಜ್ಯದಲ್ಲಿ ಕಾನೂನು ಸಂಹಿತೆ ಜಾರಿ ಬೇಡ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.