
ಕುಶಾಲನಗರ: ಕೇಂದ್ರದ ಕಾರ್ಮಿಕ ವಿರೋಧಿ ನೀತಿಯನ್ನು ಖಂಡಿಸಿ ಎಐಟಿಯುಸಿ ಸಂಘಟನೆ ಮತ್ತು ಎಸ್.ಎಲ್.ಎನ್ ಕಾಫಿ ಕ್ಯೂರಿಂಗ್ ಎಂಪ್ಲಾಯಿಸ್ ಯೂನಿಯನ್ ವತಿಯಿಂದ ಗುರುವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರ ಕಾರ್ಮಿಕ ಸಂಘಟನೆಗಳು ಸಾರ್ವತ್ರಿಕ ಮುಷ್ಕರವನ್ನು ಬೆಂಬಲಿಸಿ ಕಾರ್ಮಿಕ ಸಂಘಟನೆಗಳ ಕಾರ್ಯಕರ್ತರು ಕೂಡ್ಲೂರು ಕೈಗಾರಿಕಾ ಬಡಾವಣೆಯಿಂದ ಕುಶಾಲನಗರ ತಹಶೀಲ್ದಾರ್ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿದರು.
‘ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್.ಡಿ.ಎ. ಸರ್ಕಾರ ಜಾರಿ ಮಾಡಿರುವ ನಾಲ್ಕು ಕಾರ್ಮಿಕ ಸಂಹಿತೆಗಳು ಕಾರ್ಮಿಕ ವಿರೋಧಿ ಸ್ವರೂಪದ ನೀತಿ, ನಿಯಮಗಳಾಗಿದ್ದು, ಕೂಡಲೇ ಇವುಗಳನ್ನು ಹಿಂಪಡೆಯಬೇಕು ಎಂದು ಆಗ್ರಹಿಸಿದರು. ಹೈಕೋರ್ಟ್ ನಿರ್ದೇಶನದಂತೆ ಕಾರ್ಮಿಕರಿಗೆ ಕನಿಷ್ಠ ವೇತನವನ್ನು ಘೋಷಿಸಲು ರಾಜ್ಯ ಸರ್ಕಾರವನ್ನು ಒತ್ತಾಯಿಸಿದರು.
ಕಾರ್ಮಿಕರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ತಾಲ್ಲೂಕು ತಹಶೀಲ್ದಾರ್ ಕಿರಣ್ ಜಿ.ಗೌರಯ್ಯ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಎಐಟಿಯುಸಿ ಮೈಸೂರು ಜಿಲ್ಲಾ ಕಾರ್ಯದರ್ಶಿ ಕೆ.ಜಿ. ಸೋಮರಾಜೇ ಅರಸ್, ಸಹ ಕಾರ್ಯದರ್ಶಿ ಎಚ್.ಬಿ. ರಾಮಕೃಷ್ಣ, ಎಸ್.ಎಲ್.ಎನ್ ಕಾಫಿ ಕ್ಯೂರಿಂಗ್ ಎಂಪ್ಲಾಯಿಸ್ ಯೂನಿಯನ್ ಅಧ್ಯಕ ಎಸ್. ಶಿವರಾಘವೇಂದ್ರ, ಕಾರ್ಯದರ್ಶಿ ಲೋಕೇಶ್, ಸಹ ಕಾರ್ಯದರ್ಶಿ ಕೆ.ಯು.ನವೀನ್, ಖಜಾಂಚಿ ಪ್ರದೀಪ್ ಮುಖಂಡರಾದ ಡಿ.ಆರ್. ರವಿತೇಜ, ಎಸ್.ಆರ್. ಲೋಕೇಶ್, ಕುಮಾರ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.