ADVERTISEMENT

ಮಡಿಕೇರಿ: ಸರ್ಕಾರದ ಸಾಧನೆಯ ಪ್ರದರ್ಶನಕ್ಕೆ ಚಾಲನೆ

ಮಡಿಕೇರಿಯ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಆಯೋಜನೆ

​ಪ್ರಜಾವಾಣಿ ವಾರ್ತೆ
Published 7 ಜುಲೈ 2025, 3:11 IST
Last Updated 7 ಜುಲೈ 2025, 3:11 IST
ವಸ್ತು ಪ್ರದರ್ಶನದಲ್ಲಿ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆ ಒಳಗೊಂಡ ಪುಸ್ತಕವನ್ನು ಮುಖ್ಯಮಂತ್ರಿ ಅವರ ಮಾದರಿ ಪ್ರತಿಕೃತಿಯಿಂದ ಪಡೆಯುವ ರೀತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಫೋಟೊ ತೆಗೆಸಿಕೊಂಡರು
ವಸ್ತು ಪ್ರದರ್ಶನದಲ್ಲಿ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆ ಒಳಗೊಂಡ ಪುಸ್ತಕವನ್ನು ಮುಖ್ಯಮಂತ್ರಿ ಅವರ ಮಾದರಿ ಪ್ರತಿಕೃತಿಯಿಂದ ಪಡೆಯುವ ರೀತಿಯಲ್ಲಿ ಜಿಲ್ಲಾಧಿಕಾರಿ ವೆಂಕಟ್ ರಾಜಾ ಫೋಟೊ ತೆಗೆಸಿಕೊಂಡರು   

ಮಡಿಕೇರಿ: ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ವತಿಯಿಂದ ‘ಕರ್ನಾಟಕ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿಯುಳ್ಳ ವಸ್ತು ಪ್ರದರ್ಶನಕ್ಕೆ ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮತ್ತು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಇಲ್ಲಿನ ಕೆಎಸ್‌ಆರ್‌ಟಿಸಿ ಬಸ್‌ ನಿಲ್ದಾಣದಲ್ಲಿ ಭಾನುವಾರ ಚಾಲನೆ ನೀಡಿದರು.

ವಸ್ತು ಪ್ರದರ್ಶನ ಮಳಿಗೆಯಲ್ಲಿ ಗ್ಯಾರಂಟಿ ಸಮರ್ಪಣೆ ಅಭಿವೃದ್ಧಿಯ ಸಂಕಲ್ಪ, ನಾಡಿನ ಏಳು ಕೋಟಿ ಜನರ ಬೆಳಕು ಗ್ಯಾರಂಟಿ ಬದುಕು ಫಲಕ, 5 ಗ್ಯಾರಂಟಿ ಯೋಜನೆಗಳ ವಿವರಗಳ ಫಲಕಗಳಿವೆ.

ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಭಾವಚಿತ್ರಗಳನ್ನು ಒಳಗೊಂಡ ಸೆಲ್ಫಿ ಪಾಯಿಂಟ್‍ಗಳನ್ನು ರಚಿಸಿರುವುದನ್ನು ಅವರು ಶ್ಲಾಘಿಸಿದರು.

ADVERTISEMENT

ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ಧರ್ಮಜ ಉತ್ತಪ್ಪ, ತಾಲ್ಲೂಕು ಅಧ್ಯಕ್ಷ ಮಂದ್ರಿರ ಮೋಹನ್ ದಾಸ್, ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೆಲ್ಫಿ ಪಾಯಿಂಟ್‍ಗಳಲ್ಲಿ ಫೋಟೊ ತೆಗದುಕೊಂಡರು.

ಈ ವಸ್ತು ಪ್ರದರ್ಶನದಲ್ಲಿ ನಾಡಿನ ಜನರ ಬದುಕು ಬೆಳಗಿಸಿದ ಗ್ಯಾರಂಟಿ ಯೋಜನೆಗಳ ಸಮಗ್ರ ಮಾಹಿತಿ, ಯಶೋಗಾಥೆ ಒಳಗೊಂಡ ಪುಸ್ತಕವನ್ನು ರಾಜ್ಯದ ಮುಖ್ಯಮಂತ್ರಿ ಅವರ ಮಾದರಿ ಪ್ರತಿಕೃತಿಯಿಂದ ಪಡೆಯುವಂತೆ ಫೋಟೊ ತೆಗೆದುಕೊಳ್ಳುವ ಅವಕಾಶ ನೀಡಿರುವುದು ವಿಶೇಷ.

ಕೆಎಸ್‌ಆರ್‌ಟಿಸಿ ಸಹಾಯಕ ಸಂಚಾರ ಅಧೀಕ್ಷರಕ ಎ.ಈರಸಪ್ಪ, ಸಂಚಾರ ನಿಯಂತ್ರಕ ಮಲ್ಲಿಕಾರ್ಜುನ, ನಾಯಕ್ ಭಾಗವಹಿಸಿದ್ದರು.

ವಸ್ತು ಪ್ರದರ್ಶನ ಗಮನ ಸೆಳೆಯುತ್ತದೆ: ಧರ್ಮಜ ಉತ್ತಪ್ಪ

ಗ್ಯಾರಂಟಿ ಯೋಜನೆ ಜಿಲ್ಲಾ ಅನುಷ್ಠಾನ ಸಮಿತಿ ಅಧ್ಯಕ್ಷ ತೀತೀರ ಧರ್ಮಜ ಉತ್ತಪ್ಪ ಮಾತನಾಡಿ ‘ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಗ್ಯಾರಂಟಿ ಯೋಜನೆ ಸೇರಿದಂತೆ ಹಲವು ಜನಪರ ಕಾರ್ಯಕ್ರಮ ಜಾರಿಗೊಳಿಸಿದೆ. ಆ ನಿಟ್ಟಿನಲ್ಲಿ ಗ್ರಾಮೀಣ ಮಟ್ಟಕ್ಕೂ ಈ ಯೋಜನೆಯ ಮಾಹಿತಿ ದೊರೆಯಬೇಕು’ ಎಂದರು. ಸರ್ಕಾರದ ಕಾರ್ಯಕ್ರಮಗಳ ಮಾಹಿತಿ ಒಳಗೊಂಡ ಚಿತ್ರಣ ಜನ ಸಾಮಾನ್ಯರಿಗೆ ತಲುಪಿಸುವಲ್ಲಿ ಸರ್ಕಾರದ ಸಾಧನೆ ಒಳಗೊಂಡ ಮಾಹಿತಿ ವಸ್ತು ಪ್ರದರ್ಶನ ಗಮನ ಸೆಳೆಯುತ್ತದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಜುಲೈ 8 ರವರೆಗೆ ವಸ್ತು ಪ್ರದರ್ಶನ: ಚಿನ್ನಸ್ವಾಮಿ ‌‌‌

ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ವತಿಯಿಂದ ರಾಜ್ಯ ಸರ್ಕಾರದ ಎರಡು ವರ್ಷಗಳ ಸಾಧನೆ ಹಾಗೂ ಯೋಜನೆಗಳನ್ನು ಬಿಂಬಿಸುವ ಮಾಹಿತಿ ಒಳಗೊಂಡ ವಸ್ತು ಪ್ರದರ್ಶನವನ್ನು ನಗರದ ಕೆಎಸ್‍ಆರ್‌ಟಿಸಿ ಬಸ್ ನಿಲ್ದಾಣದಲ್ಲಿ ಆಯೋಜಿಸಲಾಗಿದ್ದು ಜುಲೈ 8ರವರೆಗೆ ವಸ್ತು ಪ್ರದರ್ಶನವು ಸಾರ್ವಜನಿಕರ ವೀಕ್ಷಣೆಗೆ ಲಭ್ಯವಿದೆ ಎಂದು ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ ಮಾಹಿತಿ ನೀಡಿದರು. ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಲಾಭ ಪ್ರತಿಯೊಬ್ಬ ಅರ್ಹ ಫಲಾನುಭವಿಗಳಿಗೆ ದೊರಕಿಸುವ ನಿಟ್ಟಿನಲ್ಲಿ ಗ್ಯಾರಂಟಿ ಯೋಜನೆಗಳು ಒಳಗೊಂಡಂತೆ ಸರ್ಕಾರದ ಜನಪರ ಯೋಜನೆಗಳ ಅಭಿವೃದ್ಧಿ ಸಾಧನೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಲು ವಸ್ತು ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.