ಮಡಿಕೇರಿಯಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕ್ರೀಡೆ, ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ರಚಿಸಿರುವ ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು. ಲೇಖಕಿ ಡಾ.ಕೋರನ ಸರಸ್ವತಿ ಪ್ರಕಾಶ್, ಸಹ ಪ್ರಾಧ್ಯಾಪಕ ಕೆ.ಬಸವರಾಜು ಇದ್ದರು
ಮಡಿಕೇರಿ: ‘ತಲೆಬಗ್ಗಿಸಿ ಪುಸ್ತಕ ಓದಿದರೆ ಮುಂದೊಂದು ದಿನ ತಲೆ ಎತ್ತುವಂತೆ ಮಾಡುತ್ತದೆ’ ಎಂದು ಲೇಖಕಿ ಕೋರನ ಸರಸ್ವತಿ ಪ್ರಕಾಶ್ ತಿಳಿಸಿದರು.
ಕಾಲೇಜು ಶಿಕ್ಷಣ ಇಲಾಖೆ, ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ವತಿಯಿಂದ ನಗರದ ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜು ಸಭಾಂಗಣದಲ್ಲಿ ಗುರುವಾರ ನಡೆದ ಸಾಂಸ್ಕೃತಿಕ ಕ್ರೀಡೆ, ಪಠ್ಯೇತರ ಮತ್ತು ಸಹಪಠ್ಯ ಚಟುವಟಿಕೆಗಳ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
‘ಒಂದು ವೇಳೆ ತಲೆ ಬಗ್ಗಿಸಿ ಮೊಬೈಲ್ ನೋಡುತ್ತಿದ್ದರೆ ಹಾಗೆಯೇ ಜೀವನ ಕಳೆದು ಹೋಗುತ್ತದೆ’ ಎಂದೂ ಎಚ್ಚರಿಸಿದರು.
‘ಮೊಬೈಲ್ ಗೀಳನ್ನು ಬಿಟ್ಟು ಒಳ್ಳೆಯ ಪುಸ್ತಕಗಳನ್ನು ಹೆಚ್ಚಾಗಿ ಓದಬೇಕು. ಪುಸ್ತಕ ಓದುವ ಹವ್ಯಾಸ ರೂಢಿಸಿಕೊಂಡರೆ ಮಾನಸಿಕ ನೆಮ್ಮದಿಯನ್ನು ಹೆಚ್ಚು ಸಂಪಾದಿಸಿಕೊಳ್ಳಬಹುದು. ವಿದ್ಯಾರ್ಥಿಗಳು ಮೊಬೈಲ್ ಅನ್ನು ದೂರ ಮಾಡಿ ಸಹಪಾಠಿಗಳೊಂದಿಗೆ ಬೆರೆಯಬೇಕು’ ಎಂದು ವಿದ್ಯಾರ್ಥಿಗಳಿಗೆ ಸಲಹೆ ನೀಡಿದರು.
ಸರ್ಕಾರಿ ಪ್ರಥಮದರ್ಜೆ ಮಹಿಳಾ ಕಾಲೇಜಿನ ಪ್ರಾಂಶುಪಾಲ ಡಿ.ಜೆ.ಜವರಪ್ಪ ಮಾತನಾಡಿ, ‘ವಿದ್ಯಾರ್ಥಿಗಳು ಓದಿನ ಜೊತೆಗೆ ಸಾಹಿತ್ಯ, ಸಂಗೀತ, ಕ್ರೀಡೆ, ಹೀಗೆ ವಿವಿಧ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಲ್ಲಿ ಸದಾ ಚಟುವಟಿಕೆಯಿಂದ ಇರಬಹುದು’ ಎಂದು ತಿಳಿಸಿದರು.
‘ಕ್ರೀಡೆ, ನೃತ್ಯ, ಸಂಗೀತ, ಸಾಹಿತ್ಯ ಮತ್ತಿತರ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುವುದರಿಂದ ಗಮನ ಬೇರೆಡೆ ಹೋಗುವುದಕ್ಕೆ ಸಾಧ್ಯವಾಗುವುದಿಲ್ಲ. ಆ ನಿಟ್ಟಿನಲ್ಲಿ ಲಭ್ಯವಿರುವ ಕಾಲಾವಕಾಶವನ್ನು ಸರಿಯಾಗಿ ಬಳಸಿಕೊಂಡು ಮುನ್ನಡೆಯಬೇಕು’ ಎಂದು ಸಲಹೆ ಮಾಡಿದರು.
ಪತ್ರಕರ್ತೆ ಜಿ.ಆರ್.ಪ್ರಜ್ಞಾ ಮಾತನಾಡಿ, ‘ವೈಯಕ್ತಿಕ ಬದುಕಿನಲ್ಲಿ ಪಠ್ಯೇತರ ಚಟುವಟಿಕೆಗಳು ಬಹಳ ಮುಖ್ಯ. ವಿದ್ಯಾರ್ಥಿ ಜೀವನವನ್ನು ಸುಗಮವಾಗಿರಿಸಲು ಪಠ್ಯೇತರ ಚಟುವಟಿಕೆಗಳು ಸಹಕಾರಿಯಾಗಿವೆ’ ಎಂದು ಹೇಳಿದರು.
ಡಾ.ಕೋರನ ಸರಸ್ವತಿ ಪ್ರಕಾಶ್ ಅವರು ರಚಿಸಿರುವ ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕಗಳನ್ನು ಬಿಡುಗಡೆ ಮಾಡಲಾಯಿತು.
ವಿರಾಜಪೇಟೆ ಸರ್ಕಾರಿ ಪ್ರಥಮದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಕೆ.ಬಸವರಾಜು, ಸಾಂಸ್ಕೃತಿಕ ಕಾರ್ಯಕ್ರಮ ಸಂಚಾಲಕಿ ಡಾ.ಡಿ.ಕನ್ನಿಕಾ ಇದ್ದರು.
ಪತ್ತಾಯ, ನುಡಿದೀಪ, ಅರೆಭಾಷೆ ಗಾದೆಗಳು ಪುಸ್ತಕಗಳ ಬಿಡುಗಡೆ ಪಠ್ಯೇತರ ಚಟುವಟಿಕೆಗಳ ಮಹತ್ವ ಕುರಿತು ಸಲಹೆಗಳು ಪುಸ್ತಕ ಓದಲು ಕರೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.