ಕುಶಾಲನಗರ: ‘ಸಾಹಿತ್ಯಕ್ಕೆ ಯಾವುದೇ ಭಾಷೆ, ಜಾತಿ ಪರಿಮಿತಿ ಇರುವುದಿಲ್ಲ’ ಎಂದು ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.
ಪಟ್ಟಣದಲ್ಲಿ ಪೈಗಂಬರ್ ಮೊಹಮ್ಮದ್ ಸೀರತ್ ಅಭಿಯಾನದ ಪ್ರಯುಕ್ತ ಕೃತಿಗಳ ಬಿಡುಗಡೆ ಮತ್ತು ಪುಸ್ತಕ ಪ್ರದರ್ಶನ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.
‘ಪೈಗಂಬರ್ ಅವರ ಜೀವನದ ಆದರ್ಶ, ತ್ಯಾಗ ಕಲಿಕೆಗೆ ಕೃತಿಗಳು ಸಹಕಾರಿಯಾಗಿವೆ. ಸಾಹಿತ್ಯ ಧಾರ್ಮಿಕ ಕಾರ್ಯಗಳಿಗೆ ಯುವಜನತೆಯ ಒಲವು ಮೂಡಿಸುವ ಕೆಲಸ ನಡೆಯಬೇಕಾಗಿದೆ’ ಎಂದರು.
ಕೃತಿಗಳನ್ನು ಬಿಡುಗಡೆಗೊಳಿಸಿದ ಸಾಹಿತಿ ಕಣಿವೆ ಭಾರದ್ವಾಜ್ ಆನಂದ ತೀರ್ಥ ಮಾತನಾಡಿ, ‘ಪ್ರತಿಯೊಬ್ಬರು ಆತ್ಮ ವಂಚನೆಯಿಂದ ಹೊರ ಬರಬೇಕಿದೆ. ಧರ್ಮ ಗ್ರಂಥಗಳಿಗೆ ನಿಷ್ಠರಾಗುವ ಮೂಲಕ ನೆಮ್ಮದಿ, ಶಾಂತಿ ಗಳಿಸಲು ಸಾಧ್ಯ. ಧರ್ಮ ಪರಿಪಾಲನೆ ಮೂಲಕ ಬದುಕು ಸಾಗಿಸಬೇಕು’ ಎಂದರು.
ಸರಳ ಭಾಷೆಯಲ್ಲಿ ಎಲ್ಲರಿಗೂ ಅರ್ಥೈಸುವ ರೀತಿಯಲ್ಲಿ ಕೃತಿಗಳು ರಚನೆಯಾಗಿವೆ ಎಂದರು.
ಶಾಂತಿ ಪ್ರಕಾಶನ ವ್ಯವಸ್ಥಾಪಕ ಎಂ.ಎಚ್.ಮಹಮ್ಮದ್ ಕುಂಞಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ‘ಕಪೋಲಕಲ್ಪಿತ ಕಥೆಗಳಿಲ್ಲದ ಕೃತಿಗಳ ಮೂಲಕ ಉತ್ತಮ ಸಮಾಜ ನಿರ್ಮಾಣ ಸಾಧ್ಯ. ಜನರನ್ನು ವಿಭಜಿಸುವ, ಮನಸು ಕೆಡಿಸುವ ಪುಸ್ತಕಗಳು ಆತಂಕಕಾರಿ ಬೆಳವಣಿಗೆಯನ್ನು ಸೃಷ್ಟಿಸುತ್ತವೆ. ಯುವಜನತೆ ವಿವೇಕ ಬೆಳೆಸುವ ಜೊತೆಗೆ ಓದಿನ ಕಡೆ ಮನಸು ಮಾಡಬೇಕು’ ಎಂದರು.
ಸಾಹಿತಿ ಫ್ಯಾನ್ಸಿ ಮುತ್ತಣ್ಣ, ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ನಾಗೇಶ್, ದಲಿತ ಸಾಹಿತ್ಯ ಪರಿಷತ್ ಅಧ್ಯಕ್ಷ ಅರ್ಜುನ ಮೌರ್ಯ ಶುಭ ಹಾರೈಸಿದರು.
ಕುಶಾಲನಗರ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ನಾಗೇಂದ್ರ ಬಾಬು, ಸಾರ್ವಜನಿಕ ಸೀರತ್ ಸಮಾವೇಶ ಗೌರವಾಧ್ಯಕ್ಷ ನಜೀರ್ ಅಹ್ಮದ್, ಜಮಾತೆ ಇಸ್ಲಾಮಿ ಹಿಂದ್ ಸಂಚಾಲಕರಾದ ಅಬ್ದುಲ್ ಸಲಾಂ, ಸಿ.ಎಚ್.ಆಪ್ಷಲ್, ಕಾರ್ಯದರ್ಶಿ ಪಿ.ಕೆ.ಅಬ್ದುಲ್ ರೆಹಮಾನ್ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.