ವಿರಾಜಪೇಟೆ: ಪಟ್ಟಣದಲ್ಲಿ ನೂತನ ಮಾರುಕಟ್ಟೆ ಸಂಕೀರ್ಣ ನಿರ್ಮಾಣಕ್ಕೆ ₹10 ಕೋಟಿ ಅಗತ್ಯವಿದೆ. ಶಾಸಕರ ನಿಧಿಯಿಂದ ₹5 ಕೋಟಿ ಅನುದಾನವೊದಗಿಸಿದ್ದು, ಪುರಸಭೆಯ ಬಳಿ ₹1.40 ಕೋಟಿ ಇದೆ. ಉಳಿದ ಹಣವನ್ನು ಕರ್ನಾಟಕ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಪುರಸಭೆಯ ವಿಶೇಷ ಮಾಸಿಕ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಅಧ್ಯಕ್ಷೆ ಎಂ.ದೇಚಮ್ಮ ಅಧ್ಯಕ್ಷತೆಯಲ್ಲಿ ಶುಕ್ರವಾರ ನಡೆದ ಪುರಸಭೆಯ ವಿಶೇಷ ಮಾಸಿಕ ಸಭೆಯಲ್ಲಿ ಈ ತೀರ್ಮಾನವನ್ನು ಕೈಗೊಳ್ಳಲಾಯಿತು.
ಪುರಸಭೆಯ ಮಳಿಗೆ ಹರಾಜಿನ ವಿಚಾರದಲ್ಲಿ ಸದಸ್ಯ ಮಹಾದೇವ ಮಾಹಿತಿ ಬಯಸಿದಾಗ ಈ ವಿಚಾರವಾಗಿ ಅಧ್ಯಕ್ಷೆ ಎಂ.ದೇಚಮ್ಮ ಅವರು ಮಾತನಾಡಲು ಅವಕಾಶ ನೀಡಲಿಲ್ಲ ಎಂದು ಅಧ್ಯಕ್ಷೆ ಹಾಗೂ ಸದಸ್ಯರಾದ ಮಹಾದೇವ, ಸುನಿತ ಜೂನ ಅವರ ನಡುವೆ ಕೆಲಕಾಲ ಮಾತಿನ ಚಕಮಕಿ ನಡೆಯಿತು.
ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಅವಧಿ ಮುಗಿದ 41ಮಳಿಗೆಗಳಿವೆ. ಜೊತೆಗೆ ಮಾರುಕಟ್ಟೆ ಸಂಕೀರ್ಣದಲ್ಲಿ 18 ಮಳಿಗೆ ಹಾಗೂ 4 ನೆಲಬಾಡಿಗೆ ಮಳಿಗೆಗಳಿವೆ ಎಂದರು.
ಸದಸ್ಯ ರಂಜಿ ಪೂಣಚ್ಚ ಮಾತನಾಡಿ, ಮಾರುಕಟ್ಟೆಯ ಕಾಮಗಾರಿ ನಡೆಯಬೇಕಿರುವುದರಿಂದ 18 ಮಳಿಗೆಗಳ ಹರಾಜು ಕೈಬಿಡಬೇಕಿದೆ. ಉಳಿದವುಗಳಿಗೆ ಶಾಸಕರ ಸೂಚನೆಯಂತೆ ಇ–ಟೆಂಡರ್ ಕರೆಯುವಂತೆ ಒತ್ತಾಯಿಸಿದರು. ಸದಸ್ಯ ಶಬರೀಶ್ ಶೆಟ್ಟಿ ಮಾತನಾಡಿ, ಪುರಸಭೆ ಬಾಡಿಗೆ ಹೆಚ್ಚಿಸಿ ಇ–ಟೆಂಡರ್ ಕರೆದು ಮಳಿಗೆ ಹಂಚಿಕೆ ಮಾಡುವಂತೆ ಒತ್ತಾಯಿಸಿದರು. ಬಹುತೇಕ ಸದಸ್ಯರು ಒಪ್ಪಿಗೆ ವ್ಯಕ್ತಪಡಿಸಿದರು.
ಸದಸ್ಯ ಪೃಥ್ವಿನಾಥ್ ಮಾತನಾಡಿ, ಮೀನುಪೇಟೆಯಲ್ಲಿರುವ ಸ್ಮಶಾನದ ಸಿಲಿಕಾನ್ ಛೇಂಬರ್ ದುಸ್ಥಿತಿಯಲ್ಲಿದೆ. ನೀರಿನ ವ್ಯವಸ್ಥೆ ಸರಿಯಿಲ್ಲ, ವಿದ್ಯುತ್ ದೀಪ, ಶೆಡ್ ಇತ್ಯಾದಿಗಳ ನಿರ್ಮಾಣಕ್ಕೆ ₹2 ಲಕ್ಷ ಸಾಲದು, ಗೇಟ್ ಸರಿಯಾಗಿಲ್ಲ ಎಂದರು. ಸದಸ್ಯೆ ಆಶಾ ಸುಬ್ಬಯ್ಯ ಮಾತನಾಡಿ, ಪಟ್ಟಣದ ಬಸ್ ತಂಗುದಾಣ ಭಿಕ್ಷಕರ ಆಶ್ರಯ ತಾಣವಾಗಿದ್ದು, ನಿರುಪಯುಕ್ತವಾಗಿದೆ ಎಂದರು. ಅಧ್ಯಕ್ಷೆ ಎಂ.ದೇಚಮ್ಮ ಪ್ರತಿಕ್ರಿಯಿಸಿ ನಾಗರಿಕ ವಿನ್ಯಾಸ ಯೋಜನೆಯ ₹ 2 ಕೋಟಿ ಅನುದಾನದಲ್ಲಿ ವಿವಿಧ ಕಾಮಗಾರಿ, ತಂಗುದಾಣ ದುರಸ್ತಿ ಸೇರಿದೆ ಎಂದರು.
ಸದಸ್ಯ ಮಹಮದ್ ರಾಫಿ ಮಾತನಾಡಿ ಅಮೃತ್ ಯೋಜನೆಯ ನೀರಿನ ಕೊಳವೆ ಅಳವಡಿಕೆ ವೇಳೆ ಸುಣ್ಣದಬೀದಿ ರಸ್ತೆ ಬದಿ ಇಂಟರ್‌ಲಾಕ್ ತೆಗೆಯಲಾಗಿದ್ದು, ವಾಹನ ನಿಲುಗಡೆಗೆ ಸಮಸ್ಯೆಯಾಗಿದೆ. ಪುನಃ ಅಳವಡಿಸುವಂತೆ ಅವರು ಆಗ್ರಹಿಸಿದರು. ₹3 ಕೋಟಿ ಅನುದಾನ ಪಾದಚಾರಿ ರಸ್ತೆ ಅಭಿವೃದ್ಧಿಗೆ ಮೀಸಲಿರಿಸಲಾಗಿದೆ ಎಂದು ಅಧ್ಯಕ್ಷರು ತಿಳಿಸಿದರು.
ಅಧ್ಯಕ್ಷೆ ಎಂ.ದೇಚಮ್ಮ ಮಾತನಾಡಿ, ಬೀದಿ ದೀಪ ಅಳವಡಿಕೆಗೆ ₹2 ಕೋಟಿ ಅನುದಾನವಿದ್ದು, ಶಾಸಕರು ಹೆಚ್ಚುವರಿಯಾಗಿ ₹35 ಲಕ್ಷ ಅನುದಾನವೊದಗಿಸಿದ್ದಾರೆ. ಮುಖ್ಯರಸ್ತೆಯಿಂದ ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದವರೆಗಿನ ಕಾಲುದಾರಿಗೆ ₹2 ಲಕ್ಷ ವೆಚ್ಚದಲ್ಲಿ ಇಂಟರ್ ಲಾಕ್ ಹಾಕಲಾಗುವುದು. ಪುರಸಭೆಯ ಜೆ.ಸಿ.ಬಿ ಅಗತ್ಯವಿದೆ ಎಂದರು. ಉತ್ತಮ ಯಂತ್ರವನ್ನು ಖರೀದಿಸುವಂತೆ ಸದಸ್ಯರು ಸೂಚಿಸಿದರು.
ಪುರಸಭೆಯ ಮುಖ್ಯಾಧಿಕಾರಿ ನಾಚಪ್ಪ ಮಾತನಾಡಿ, ಗ್ರಂಥಾಲಯ ದುಸ್ಥಿತಿಯಲ್ಲಿದ್ದು, ಜಿಲ್ಲಾಧಿಕಾರಿ ಒಪ್ಪಿಗೆ ಪಡೆದು ಗ್ರಂಥಾಲಯ ಸೆಸ್‌ನಲ್ಲಿ ₹10 ಲಕ್ಷ ಬಳಸಿ ಕಾಮಗಾರಿ ಕೈಗೊಳ್ಳಲಾಗುವುದು ಎಂದರು.
ಅನಾಥ ಶವ ಹಾಗೂ ನಿರಾಶಿತರ ಶವ ಮಡಿಕೇರಿಗೆ ಸಾಗಿಸಬೇಕಿದ್ದು, ಈ ಶವಗಳ ಸಂಸ್ಕಾರಕ್ಕೆ ಪುರಸಭೆ ವಾರ್ಷಿಕವಾಗಿ ಮೀಸಲಿರುವ ಹಣವನ್ನು ₹1 ಲಕ್ಷದಿಂದ ₹2 ಲಕ್ಷಕ್ಕೆಏರಿಸಿ, ಬಡ ವರ್ಗದವರ ಅಂತ್ಯಕ್ರಿಯೆಗೆ ಪುರಸಭೆಯಿಂದ ನೀಡುವ ₹2 ಸಾವಿರವನ್ನು ₹3 ಸಾವಿರ ಕ್ಕೆ ಹೆಚ್ಚಿಸಲು ಸಭೆ ನಿರ್ಧರಿಸಿತು. ಸದಸ್ಯ ರಜನಿಕಾಂತ್ ಮಾತನಾಡಿದರು. ಪುರಸಭೆಯ ಉಪಾಧ್ಯಕ್ಷೆ ಫಸಿಹ ತಬುಸುಂ ಉಪಸ್ಥಿತರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.