
ಮಡಿಕೇರಿ: ‘ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳ ಹಾವಳಿ ತಡೆಯಬೇಕು. ಪ್ರತೀ ಕಚೇರಿಯಲ್ಲಿ ಸ್ವೀಕೃತಿ ಮತು ರವಾನೆ ವಹಿಯನ್ನು ಸಮಪರ್ಕವಾಗಿ ನಿರ್ವಹಿಸಬೇಕು’ ಎಂದು ಲೋಕಾಯುಕ್ತ ಮಡಿಕೇರಿ ಡಿವೈಎಸ್‍ಪಿ ದಿನಕರ ಶೆಟ್ಟಿ ಸೂಚಿಸಿದರು.
ಇಲ್ಲಿನ ತಹಶೀಲ್ದಾರರ ಕಚೇರಿಯಲ್ಲಿ ಬುಧವಾರ ಸಾರ್ವಜನಿಕರ ಅಹವಾಲು ಸ್ವೀಕಾರ ಮತ್ತು ಕುಂದುಕೊರತೆ ಸಭೆಯಲ್ಲಿ ಸಾರ್ವಜನಿಕರ ಅಹವಾಲು ಆಲಿಸಿ ಮಾತನಾಡಿದರು.
‘ವಿವಿಧ ಇಲಾಖೆಗಳ ಅಧಿಕಾರಿಗಳು ಕಚೇರಿಗಳಲ್ಲಿ ಇರುವುದಿಲ್ಲ ಎಂಬ ದೂರು ಸಾಮಾನ್ಯವಾಗಿದೆ. ಹೀಗಾಗಿ, ಎಲ್ಲ ಇಲಾಖೆಯ ಅಧಿಕಾರಿಗಳು, ಸಿಬ್ಬಂದಿಯ ಚಲನವಲನದ ಕುರಿತು ನಿತ್ಯವೂ ದಾಖಲಿಸಿಕೊಳ್ಳಬೇಕು’ ಎಂದು ಹೇಳಿದರು.
ಸಾರ್ವಜನಿಕರು ಕಚೇರಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅಧಿಕಾರಿಗಳು ಇರುವುದಿಲ್ಲ ಎಂಬ ದೂರುಗಳು ಕೇಳಿ ಬರುತ್ತಿದೆ. ಸರ್ಕಾರದ ಅಧಿಕಾರಿ ಮತ್ತು ಸಿಬ್ಬಂದಿಗಳಲ್ಲಿ ಸಮಯ ಪಾಲನೆ ಅತಿಮುಖ್ಯ. ಆ ನಿಟ್ಟಿನಲ್ಲಿ ಚಲನವಲನ ವಹಿಯನ್ನು ಸರಿಯಾಗಿ ನಿರ್ವಹಿಸಬೇಕು. ರಜೆ ಪಡೆದಿದ್ದಲ್ಲಿ ರಜೆ ಅರ್ಜಿ ಕಚೇರಿಯಲ್ಲಿ ಇರಬೇಕು. ನಗದು ವಹಿ ಬರೆಯಬೇಕು. ಕಚೇರಿ ಕೆಲಸ ನಿರ್ವಹಣೆ ಸಂಬಂಧ ಸರಿಯಾಗಿ ಪಾಲನೆ ಮುಖ್ಯ’ ಎಂದು ನಿರ್ದೇಶನ ನೀಡಿದರು.
ಸರ್ಕಾರದ ವಿವಿಧ ಇಲಾಖೆಗಳಿಗೆ ಸಂಬಂಧಿಸಿದಂತೆ ಬಹಳಷ್ಟು ವಿಚಾರಗಳು ಲೋಕಾಯುಕ್ತರ ಗಮನಕ್ಕೆ ಬರುತ್ತಿದ್ದು, ದೂರುಗಳು ಕೇಳಿಬರದಂತೆ ಕಚೇರಿ ಕೆಲಸ ನಿರ್ವಹಣೆ ಸಂಬಂಧಿಸಿದಂತೆ ಹೆಚ್ಚಿನ ಗಮನಹರಿಸುವಂತೆಯೂ ಎಚ್ಚರಿಸಿದರು.
ಸರ್ಕಾರಿ ಶಾಲೆಗಳು ಹಾಗೂ ವಿದ್ಯಾರ್ಥಿ ನಿಲಯಗಳಿಗೆ ಭೇಟಿ ನೀಡುವ ಸಂದರ್ಭದಲ್ಲಿ ಹಲವು ದೂರುಗಳು ಕೇಳಿಬರುತ್ತಿದ್ದು, ಈ ಬಗ್ಗೆ ಅಧಿಕಾರಿಗಳು ಗಮನಹರಿಸಬೇಕು. ಮಕ್ಕಳ ಮೇಲೆ ದೌರ್ಜನ್ಯ ಆಗದಂತೆ ನಿಗಾವಹಿಸಬೇಕು ಎಂದು ಸೂಚಿಸಿದರು.
‘ವಿದ್ಯಾರ್ಥಿ ನಿಲಯಗಳಲ್ಲಿ ಗುಣಮಟ್ಟದ ಆಹಾರ ನೀಡಬೇಕು. ನಮ್ಮ ಮನೆಯ ಮಕ್ಕಳು ಎಂದು ತಿಳಿಯಬೇಕು. ಇತರರ ಬಗ್ಗೆ ಮಾನವೀಯತೆ ಇರಬೇಕು’ ಎಂದರು.
‘ಸರ್ಕಾರದಿಂದ ನೀಡುವ ಸೌಲಭ್ಯಗಳನ್ನು ಅರ್ಹರಿಗೆ ತಲುಪಿಸಬೇಕು. ವ್ಯವಸ್ಥೆಯಲ್ಲಿ ಸಾಕಷ್ಟು ಸುಧಾರಣೆ ಮತ್ತು ಬದಲಾವಣೆ ತರಬೇಕು. ಸರ್ಕಾರದ ವ್ಯವಸ್ಥೆಯಲ್ಲಿ ಪರಿಪೂರ್ಣತೆ ಕಾಯ್ದುಕೊಳ್ಳಬೇಕು’ ಎಂದರು.
ಬಂದಿದ್ದ ಸಾರ್ವಜನಿಕರೊಬ್ಬರು ಕಟ್ಟಡ ಮುಕ್ತಾಯ ಪ್ರಮಾಣ ಪತ್ರ ನೀಡುತ್ತಿಲ್ಲ ಎಂದು ದೂರಿದರು.
ತಹಶೀಲ್ದಾರ್ ಶ್ರೀಧರ, ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ಶೇಖರ್, ಪೌರಾಯುಕ್ತ ಎಚ್.ಆರ್.ರಮೇಶ್, ಭೂದಾಖಲೆಗಳ ಸಹಾಯಕ ನಿರ್ದೇಶಕ ಮಹೇಶ್ ಕುಮಾರ್, ತೋಟಗಾರಿಕೆ ಇಲಾಖೆಯ ಹಿರಿಯ ಸಹಾಯಕ ನಿರ್ದೇಶಕ ಪಣೀಂದ್ರ, ತಾಲ್ಲೂಕು ಸಮಾಜ ಕಲ್ಯಾಣಾಧಿಕಾರಿ ಬಾಲಕೃಷ್ಣ ರೈ, ಶಿಶು ಅಭಿವೃದ್ಧಿ ಯೋಜನಾಧಿಕಾರಿ ಸೀತಾಲಕ್ಷ್ಮಿ, ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಸ್ನೇಹ, ತಾಲ್ಲೂಕು ಹಿಂದುಳಿದ ವರ್ಗಗಳ ಕಲ್ಯಾಣಾಧಿಕಾರಿ ಮೋಹನ್ ಕುಮಾರ್, ಕಾರ್ಮಿಕ ಇಲಾಖೆಯ ತಾಲ್ಲೂಕು ಅಧಿಕಾರಿ ಎಂ.ಎಂ.ಯತ್ನಟ್ಟಿ, ಹಿರಿಯ ಉಪ ನೋಂದಣಾಧಿಕಾರಿ ಸೌಮ್ಯಲತಾ, ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಕಿರಿಯ ಭೂ ವಿಜ್ಞಾನಿ ಲೋಯಲ್ ಮಿರಂಡ, ಸಣ್ಣ ನೀರಾವರಿ ಇಲಾಖೆಯ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರಸ್ವಾಮಿ, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕಿ ವಿ.ಟಿ.ವಿಸ್ಮಯಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಕುಮಾರ, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಪ್ರವೀಣ್, ಸೆಸ್ಕ್ ಎಇಇ ವಿನಯಕುಮಾರ್ ಭಾಗವಹಿಸಿದ್ದರು.
‘ಸಾರ್ವಜನಿಕರನ್ನು ಸತಾಯಿಸದಿರಿ’
ಲೋಕಾಯುಕ್ತ ಇನ್‌ಸ್ಪೆಕ್ಟರ್ ವೀಣಾ ನಾಯಕ್ ಮಾತನಾಡಿ ‘ಸರ್ಕಾರಿ ಕೆಲಸವನ್ನು ನಿಷ್ಠೆ ಮತ್ತು ಪ್ರಾಮಾಣಿಕತೆಯಿಂದ ನಿರ್ವಹಿಸಬೇಕು. ವ್ಯಕ್ತಿಗೆ ವ್ಯಕ್ತಿತ್ವ ಮತ್ತು ಮನುಷತ್ವ ಇರಬೇಕು. ಸಾರ್ವಜನಿಕರ ಸೇವೆಗೆ ಬಂದಿರುವವರು ಇರುವ ಅವಕಾಶವನ್ನು ನಿಷ್ಠೆಯಿಂದ ನಿರ್ವಹಿಸಬೇಕು. ಯಾವುದೇ ಕಾರಣಕ್ಕೂ ಜನರನ್ನು ಸತಾಯಿಸಬಾರದು’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.