ADVERTISEMENT

ಮಡಿಕೇರಿ: ನಗರಸಭೆಗೆ ಲೋಕಾಯುಕ್ತ ಶಾಕ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 7:18 IST
Last Updated 20 ಸೆಪ್ಟೆಂಬರ್ 2025, 7:18 IST
ಮಡಿಕೇರಿ ನಗರಸಭೆಯಲ್ಲಿ ಶುಕ್ರವಾರ ರಾತ್ರಿಯಾದರೂ ಲೋಕಾಯುಕ್ತ ಪೊಲೀಸರು ಕಡತಗಳ ಪರಿಶೀಲನೆ ನಡೆಸಿದರು
ಮಡಿಕೇರಿ ನಗರಸಭೆಯಲ್ಲಿ ಶುಕ್ರವಾರ ರಾತ್ರಿಯಾದರೂ ಲೋಕಾಯುಕ್ತ ಪೊಲೀಸರು ಕಡತಗಳ ಪರಿಶೀಲನೆ ನಡೆಸಿದರು   

ಮಡಿಕೇರಿ: ಇಲ್ಲಿನ ನಗರಸಭೆಗೆ ಲೋಕಾಯುಕ್ತ ಪೊಲೀಸರ ತಂಡ ಶುಕ್ರವಾರ ದಿಢೀರ್ ದಾಳಿ ನಡೆಸಿದ್ದು, ಸಾರ್ವಜನಿಕ ವಲಯದಲ್ಲಿ ಸಂಚಲನ ಸೃಷ್ಟಿಸಿದೆ. 

ಬೆಳಿಗ್ಗೆ 11 ಗಂಟೆ ಹೊತ್ತಿಗೆ ನಗರಸಭೆಯ ಕಚೇರಿಯನ್ನು ಒಟ್ಟು 19 ಲೋಕಾಯುಕ್ತ ಪೊಲೀಸರು ಪ್ರವೇಶಿಸಿ, ತಪಾಸಣೆ ಆರಂಭಿಸಿದರು. ಮೊದಲಿಗೆ ಸಾರ್ವಜನಿಕರನ್ನು ಹೊರಕ್ಕೆ ಕಳುಹಿಸಿ, ಬಾಗಿಲು ಬಂದ್ ಮಾಡಿದರು. ತೀರಾ ತುರ್ತು ಕೆಲಸಗಳಿದ್ದ ಸಾರ್ವಜನಿಕರಿಗೆ ಮಾತ್ರ ಪ್ರವೇಶ ನೀಡಲಾಯಿತು.

ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಹೊರ ಹೋಗದಂತೆ ತಡೆದು, ಎಲ್ಲ ಕಡತಗಳ ಪರಿಶೀಲನೆಗೆ ತೊಡಗಿದರು. ಇದು ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ಅಕ್ಷರಶಃ ಆಘಾತಕ್ಕೆ ದೂಡಿತು.

ADVERTISEMENT

ಈ ವಿಷಯ ವ್ಯಾಪಕವಾಗಿ ಹಬ್ಬುತ್ತಿದ್ದಂತೆ ಸಾಮಾಜಿಕ ಮಾಧ್ಯಮಗಳಲ್ಲಿ ತರಹೇವಾರಿ ಚರ್ಚೆಗಳು ಆರಂಭವಾದವು. ಬಹುತೇಕ ಮಂದಿ ಲೋಕಾಯುಕ್ತ ದಾಳಿಯನ್ನು ಸ್ವಾಗತಿಸಿದರು. ಇನ್ನಾದರೂ ನಗರಸಭೆಯಲ್ಲಿ ವೇಗವಾಗಿ ಕೆಲಸಗಳು ನಡೆಯಲಿ ಎಂದು ಒಂದಷ್ಟು ಜನ ತಮ್ಮ ಅಭಿಪ್ರಾಯ ತಿಳಿಸಿದರು.

ಸಂಜೆ ನಂತರವೂ ಪರಿಶೀಲನೆ ಮುಂದುವರಿಯಿತು. ರಾತ್ರಿಯವರೆಗೂ ಪರಿಶೀಲಿಸಿದ ಲೋಕಾಯುಕ್ತ ಪೊಲೀಸರು ವಿಲೇವಾರಿಯಾಗದೇ ಉಳಿಸಿಕೊಂಡ ಕಡತಗಳ ಕುರಿತು ಪ್ರಶ್ನಿಸಿದರು. ಅಧಿಕಾರಿಗಳು ಸಿಬ್ಬಂದಿ ಕೊರತೆ ಸಾಕಷ್ಟಿದೆ ಎಂಬ ವಾದ ಮಂಡಿಸಿದರು.

ಸುಮಾರು ಒಂದು ವರ್ಷದಿಂದಲೂ ವಿಲೇವಾರಿಯಾಗದ ಕಡತಗಳು, ಟೆಂಡರ್‌ಗಳಲ್ಲಿ ಅವ್ಯವಹಾರ ಮೊದಲಾದವು ಮೇಲ್ನೋಟಕ್ಕೆ ಗೋಚರವಾಗಿದ್ದು, ಅವುಗಳ ಕುರಿತು ಕೂಲಂಕಷವಾದ ಪರಿಶೀಲನೆ ನಡೆಯುತ್ತಿದೆ ಎಂದು ಮೂಲಗಳು ತಿಳಿಸಿವೆ.

ಮೈಸೂರ ವಿಭಾಗದ ಲೋಕಾಯುಕ್ತ ಎಸ್‌.ಪಿ ಉದೇಶ್‌ ಅವರ ಮಾರ್ಗದರ್ಶನದಲ್ಲಿ ಮೈಸೂರಿನ ಲೋಕಾಯುಕ್ತ ಡಿವೈಎಸ್‌ಪಿ ವೆಂಕಟೇಶ್, ಮಡಿಕೇರಿಯ ಡಿವೈಎಸ್‌ಪಿ ದಿನಕರಶೆಟ್ಟಿ ನೇತೃತ್ವದಲ್ಲಿ ನಡೆದ ಈ ಕಾರ್ಯಾಚರಣೆಯಲ್ಲಿ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ವೀಣಾ ನಾಯಕ್, ಗಿರೀಶ್ ಹಾಗೂ ಇತರೆ 14 ಸಿಬ್ಬಂದಿ ಇದ್ದರು.

ಬೆಳಿಗ್ಗೆ 11 ಗಂಟೆಗೆ ಆರಂಭವಾದ ಕಾರ್ಯಾಚರಣೆ ರಾತ್ರಿಯವರೆಗೂ ಮುಂದುವರಿದ ತಪಾಸಣೆ ಇಬ್ಬರು ಡಿವೈಎಸ್‌ಪಿ, ಮೂವರು ಇನ್‌ಸ್ಪೆಕ್ಟರ್‌ಗಳ ನೇತೃತ್ವ

ಲೋಕಾಯುಕ್ತದಿಂದ ಸ್ವಯಂಪ್ರೇರಿತ ಪ್ರಕರಣ ದಾಖಲು ಮಡಿಕೇರಿ: ಕೊಡಗು ಜಿಲ್ಲೆಯಲ್ಲಿನ ಸೈನಿಕರು ಮಾಜಿ ಸೈನಿಕರು ಸ್ವಾತಂತ್ರ್ಯ ಹೋರಾಟಗಾರರಿಗೆ ಸರ್ಕಾರದಿಂದ ದೊರಕಬೇಕಾದ ಸವಲತ್ತುಗಳನ್ನು ಒದಗಿಸಲು ನಿರ್ಲಕ್ಷ್ಯ ತೋರಿದ ಕುರಿತು ಲೋಕಾಯುಕ್ತ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿದೆ. ಈ ಕುರಿತು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲೆಯ ಎಲ್ಲ ತಾಲ್ಲೂಕುಗಳ ತಹಶೀಲ್ದಾರ್‌ಗಳು ಮತ್ತು ಹೆಚ್ಚುವರಿ ಜಿಲ್ಲಾಧಿಕಾರಿಗೆ ಆದೇಶಿಸಿದೆ. ಸ್ವಾತಂತ್ರ್ಯ ಯೋಧರು ಮತ್ತು ಅವರ ಅವಲಂಬಿತರು ಹಾಗೂ ಹುತಾತ್ಮ ಯೋಧರ ಅವಲಂಬಿತರಿಗೆ ಸಂವಿಧಾನಾತ್ಮಕವಾಗಿ ನೀಡಬೇಕಾದ ಪರಿಹಾರವನ್ನು (ಜಮೀನು) ಕಲ್ಪಿಸುವಲ್ಲಿ ನಿರ್ಲಕ್ಷ್ಯ ಮತ್ತು ವಿಳಂಬ ಧೋರಣೆ ತೋರಿದ ಆರೋಪ ಕೇಳಿ ಬಂದಿದೆ. ಹಾಗಾಗಿ ದೂರು ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ. ಪ್ರತಿ ತಾಲ್ಲೂಕಿನಲ್ಲಿಯೂ ಎಷ್ಟು ಮಾಜಿ ಸೈನಿಕರಿದ್ದಾರೆ ಕರ್ತವ್ಯದ ಸಮಯದಲ್ಲಿ ಹುತಾತ್ಮರಾದವರು ಎಷ್ಟು ಎಷ್ಟು ಮಂದಿಗೆ ನಿಯಮಾನುಸಾರ ಪರಿಹಾರ ನೀಡಲಾಗಿದೆ ಎಂಬುದೂ ಸೇರಿದಂತೆ ಸಮಗ್ರ ವರದಿ ಸಲ್ಲಿಸುವಂತೆ ಆದೇಶಿಸಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.