ADVERTISEMENT

ಎಚ್.ಡಿ.ಕುಮಾರಸ್ವಾಮಿಯಿಂದ ಸುಳ್ಳು ಆರೋಪ: ಎಂ.ಲಕ್ಷ್ಮಣ

​ಪ್ರಜಾವಾಣಿ ವಾರ್ತೆ
Published 28 ಅಕ್ಟೋಬರ್ 2023, 3:25 IST
Last Updated 28 ಅಕ್ಟೋಬರ್ 2023, 3:25 IST
<div class="paragraphs"><p>ಎಂ.ಲಕ್ಷ್ಮಣ</p></div>

ಎಂ.ಲಕ್ಷ್ಮಣ

   

ಮಡಿಕೇರಿ: ರಾಜ್ಯದಲ್ಲಿ ವಿದ್ಯುತ್‌ನ ಕೃತಕ ಅಭಾವ ಸೃಷ್ಟಿಯಾಗಿದೆ ಎಂಬ ಆರೋಪ ಸತ್ಯಕ್ಕೆ ದೂರ. ಕಳೆದ ವರ್ಷಕ್ಕೆ ಹೋಲಿಸಿದರೆ ಈ ವರ್ಷ ವಿದ್ಯುತ್‌ನ ಬಳಕೆ ಹೆಚ್ಚಾಗಿರುವುದರಿಂದ ಕೊರತೆ ಎದುರಾಗಿದೆ ಎಂದು ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ತಿಳಿಸಿದರು.

ಜೆಡಿಎಸ್ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಕಮಿಷನ್‌ಗಾಗಿ ವಿದ್ಯುತ್ ಖರೀದಿಸಲು ಕೃತಕ ಅಭಾವ ಸೃಷ್ಟಿಸಲಾಗಿದೆ ಎಂದು ಸುಳ್ಳು ಆರೋಪ ಮಾಡಿದ್ದಾರೆ. ರಾಜ್ಯ ಸರ್ಕಾರ ಕೇಂದ್ರದ ಗ್ರಿಡ್‌ ಮೂಲಕವೇ ಕೊರತೆಯಾದ ವಿದ್ಯುತ್‌ನ್ನು ಖರೀದಿಸುತ್ತಿದೆ. ಕೇಂದ್ರದ ಗ್ರಿಡ್‌ ಕಮಿಷನ್ ಕೊಡಲು ಸಾಧ್ಯವೇ ಎಂದು ಅವರು ಇಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಪ್ರಶ್ನಿಸಿದರು.

ADVERTISEMENT

ರಾಜ್ಯಸರ್ಕಾರ ಇದುವರೆಗೂ ಖಾಸಗಿ ಕಂಪನಿಗಳಿಂದ ವಿದ್ಯುತ್ ಖರೀದಿಸಿಲ್ಲ. ಹಾಗಿದ್ದ ಮೇಲೆ ಕಮಿಷನ್‌ ಪಡೆಯುವ ಪ‍್ರಶ್ನೆಯೇ ಎದುರಾಗುವುದಿಲ್ಲ. ಇದರ ಕನಿಷ್ಠ ಜ್ಞಾನವೂ ಕುಮಾರಸ್ವಾಮಿ ಅವರಿಗೆ ಇಲ್ಲ ಎಂದು ಹೇಳಿದರು.

ಆದರೆ, ಬಿಜೆಪಿ ಸರ್ಕಾರವಿದ್ದಾಗ 2022ರಲ್ಲೇ ವಿದ್ಯುತ್ ತಯಾರಿಸುವ ಸಾಮರ್ಥ್ಯವಿದ್ದರೂ ಖಾಸಗಿ ಕಂಪನಿಯಿಂದ ಸರ್ಕಾರ ವಿದ್ಯುತ್ ಖರೀದಿಸಿತ್ತು ಎಂದು ಅಂದಿನ ಕೆಪಿಸಿಎಲ್‌ನ ಹಿರಿಯ ಅಧಿಕಾರಿಯೊಬ್ಬರು ಪತ್ರ ಬರೆದಿದ್ದರು. ಖಾಸಗಿ ಕಂಪನಿಯಿಂದ ವಿದ್ಯುತ್ ಖರೀದಿಸಿದ್ದು ಬಿಜೆಪಿ ಸರ್ಕಾರವೇ ಹೊರತು ಕಾಂಗ್ರೆಸ್ ಅಲ್ಲ ಎಂದು ಸ್ಪಷ್ಟಪಡಿಸಿದರು.

ಎಚ್.ಡಿ.ಕುಮಾರಸ್ವಾಮಿ ಅವರಿಗೆ ಆರೋಪ ಮಾಡುವುದೇ ಈಗ ವೃತ್ತಿಯಾದಂತಿದೆ. ಅಮಿತ್ ಶಾ ಅವರಿಂದ ಗುತ್ತಿಗೆ ಪಡೆದವರಂತೆ ನಿರಂತರವಾಗಿ ವೃಥಾ ಆರೋಪಗಳನ್ನು ಮಾಡುತ್ತಿದ್ದಾರೆ. ಆದರೆ, ಯಾವುದೂ ಸತ್ಯವಲ್ಲ. ಈ ಹಿಂದೆ ಪೆನ್‌ಡ್ರೈವ್‌ನಲ್ಲಿ ದಾಖಲೆಗಳು ಇವೆ ಎಂದು ಹೇಳಿದ್ದರು. ಅದನ್ನು ಬಿಡುಗಡೆ ಮಾಡಲೇ ಇಲ್ಲ. ಗಾಳಿಯಲ್ಲಿ ಗುಂಡು ಹೊಡೆಯುವ ಕೆಲಸವನ್ನು ಅವರು ಇನ್ನಾದರೂ ನಿಲ್ಲಿಸಬೇಕು ಎಂದರು.

‘ಡಿ.ಕೆ.ಶಿವಕುಮಾರ್ ಅವರ ತಪ್ಪನ್ನು ದಾಖಲೆಗಳ ಸಮೇತ ತೋರಿಸಿದರೆ ನಾವೇ ಅವರಿಂದ ರಾಜೀನಾಮೆ ಕೊಡಿಸುವ ಕೆಲಸ ಮಾಡುತ್ತೇವೆ. ರಾಮನಗರ ಜಿಲ್ಲೆ ಮೊದಲಿಗೆ ಬೆಂಗಳೂರಿನ ಜಿಲ್ಲೆಯಲ್ಲೇ ಸೇರಿತ್ತು. ಈಗ ಮತ್ತೆ ಅದು ಬೆಂಗಳೂರಿನ ವ್ಯಾಪ್ತಿಗೆ ಸೇರಿದರೆ ಭೂಮಿಯ ಮೌಲ್ಯ ಹೆಚ್ಚುತ್ತದೆ. ಬೆಂಗಳೂರು ಎಂಬ ಬ್ರ್ಯಾಂಡ್‌ಗೆ ಅಂತಹ ದೊಡ್ಡ ಮಹತ್ವ ಇದೆ’ ಎಂದು ಹೇಳಿದರು.

ಕತಾರ್‌ನಲ್ಲಿ ನಿವೃತ್ತ ಸೇನಾ ನೌಕರರಿಗೆ ಗಲ್ಲು ಶಿಕ್ಷೆಯಾಗಿದೆ. ವಿಶ್ವಗುರು ಎಂಬ ಹೆಸರು ಪಡೆದ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಅಲ್ಲಿ ತನಿಖೆ ನಡೆಯುವಾಗ ಏಕೆ ಅವರಿಗೆ ನೆರವು ನೀಡಲಿಲ್ಲ ಎಂದು ಪ್ರಶ್ನಿಸಿದ ಲಕ್ಷ್ಮಣ್, ‘ಕೂಡಲೇ ಅಂತರರಾಷ್ಟ್ರೀಯ ನ್ಯಾಯಾಲಯದಲ್ಲಿ ಅರ್ಜಿ ಹಾಕಿ ಅವರನ್ನು ದೇಶಕ್ಕೆ ವಾಪಸ್ ಕರೆತರಬೇಕು’ ಎಂದು ಒತ್ತಾಯಿಸಿದರು.

ಹುಲಿ ಉಗುರು ಧರಿಸಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ನಟ, ಸಾಮಾನ್ಯ ವ್ಯಕ್ತಿ, ರಾಜಕೀಯ ನಾಯಕರ ಮಕ್ಕಳಾದರೂ ಸರಿ ಕಾನೂನು ಎಲ್ಲರಿಗೂ ಒಂದೇ. ಅದು ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಮುಖಂಡರೇ ಇರಲಿ ಎಲ್ಲರನ್ನೂ ಸಮಾನವಾಗಿ ಕಾಣಬೇಕು ಎಂದು ಒತ್ತಾಯಿಸಿದರು.

ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಕ್ರಮ ಕೈಗೊಳ್ಳುವ ಮುನ್ನವೇ, ನಿಖಿಲ್ ಧರಿಸಿದ್ದು ದನದ ಕೊಂಬಿನಿಂದ ಮಾಡಿದ ನಕಲಿ ಹುಲಿ ಉಗುರು ಎಂದು ಕುಮಾರಸ್ವಾಮಿ ಪುತ್ರನ ಪರ ವಾದಿಸುತ್ತಿರುವುದು ಅನುಮಾನಕ್ಕೆ ಎಡೆಮಾಡಿದೆ. ಅಧಿಕಾರಿಗಳು ಎಲ್ಲರಿಗೂ ಒಂದೇ ಕಾನೂನು ಅನುಸರಿಸಬೇಕು ಎಂದರು.

ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಧರ್ಮಜಾ ಉತ್ತಪ್ಪ, ಮುಖಂಡರಾದ ಮಂಜುನಾಥ, ಹಂಜ್ಹ, ರಾಮು, ಸುರೇಶ ಇದ್ದರು.

ನಾನೂ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕ್ಷಾಂಕ್ಷಿ

ಮುಂಬರುವ ಲೋಕಸಭಾ ಕ್ಷೇತ್ರದ ಟಿಕಟ್‌ ಕುರಿತು ಕೇಳಲಾದ ಪ್ರಶ್ನೆಗೆ ಪ್ರತಿಕ್ರಿಯಿಸಿದ ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ ‘ನಾನೂ ಮೈಸೂರು– ಕೊಡಗು ಕ್ಷೇತ್ರದ ಆಕಾಂಕ್ಷಿಯಾಗಿದ್ದೇನೆ. ನನ್ನ ಹಾಗೆ ಹಲವು ಮಂದಿ ಆಕಾಂಕ್ಷಿಗಳಿದ್ದಾರೆ. ಮುಖ್ಯಮಂತ್ರಿ ಉಪಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್‌ ನಿರ್ಧಾರಕ್ಕೆ ಬದ್ಧನಾಗಿರುತ್ತೇನೆ’ ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.