ADVERTISEMENT

ಪ್ರಣಾಳಿಕೆ ಬಿಡುಗಡೆ ಮಾಡಿದ ಎಂ.ಲಕ್ಷ್ಮಣ್

ಮೈಸೂರು– ಕೊಡಗು ಕ್ಷೇತ್ರಕ್ಕೆ ಭರಪೂರ ಕೊಡುಗೆಯ ಭರವಸೆ

​ಪ್ರಜಾವಾಣಿ ವಾರ್ತೆ
Published 17 ಏಪ್ರಿಲ್ 2024, 17:11 IST
Last Updated 17 ಏಪ್ರಿಲ್ 2024, 17:11 IST
   

ಮಡಿಕೇರಿ: ಮೈಸೂರು– ಕೊಡಗು ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಎಂ.ಲಕ್ಷ್ಮಣ್ ಅವರು ಬುಧವಾರ ಇಲ್ಲಿನ ಖಾಸಗಿ ಹೋಟೆಲ್‌ನಲ್ಲಿ ಪ್ರಣಾಳಿಕೆ ಬಿಡುಗಡೆ ಮಾಡಿ, ಮೈಸೂರು– ಕೊಡಗು ಜಿಲ್ಲೆಗಳಿಗೆ ಭರಪೂರ ಕೊಡುಗೆಗಳನ್ನು ನೀಡುವ ಭರವಸೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ‘ನನಗೆ ಹಾಕಿದ ಮತ ವ್ಯರ್ಥ ಆಗಬಾರದು. ಜನರು ನನಗೆ ಮತ ಹಾಕಿ ತಪ್ಪು ಮಾಡಿದೆವು ಎಂದು ಹಳಹಳಿಸದಂತೆ ನಾನು ಎಚ್ಚರಿಕೆ ವಹಿಸುವೆ. ಅದಕ್ಕಾಗಿಯೇ ನಾನು ಗೆದ್ದರೆ ಮೈಸೂರು– ಕೊಡಗು ಜಿಲ್ಲೆಗಳಿಗೆ ಏನೇನು ಕೆಲಸ ಮಾಡುವೆ ಎಂಬ ಪ್ರಣಾಳಿಕೆಯನ್ನು ಬಿಡುಗಡ ಮಾಡಿರುವೆ’ ಎಂದು ತಿಳಿಸಿದರು.

‘ನಾನು ಆಕಾಶವನ್ನೇ ಕೆಳಗಿಳಿಸುತ್ತೇನೆ ಎಂದು ಭರವಸೆ ನೀಡುವುದಿಲ್ಲ. ನನ್ನ ವ್ಯಾಪ್ತಿಯಲ್ಲಿ ಎಷ್ಟು ಆಗುತ್ತದೋ ಅಷ್ಟನ್ನು ಕುರಿತು ಭರವಸೆ ನೀಡಿರುವೆ. ಕೇಂದ್ರ ಸರ್ಕಾರದ ಶೇ 98ರಷ್ಟು ಯೋಜನೆಗಳನ್ನು ಕ್ಷೇತ್ರಕ್ಕೆ ತರುವೆ. ರಾಜ್ಯ ಸರ್ಕಾರ ನಮ್ಮದೇ ಇರುವುದರಿಂದ ಅದರ ಸಹಕಾರದೊಂದಿಗೆ ಅವುಗಳ ಅನುಷ್ಠಾನ ಸುಲಭವಾಗಲಿದೆ’ ಎಂದರು.

ADVERTISEMENT

2014ರಲ್ಲಿ ಪ್ರಧಾನಿಯವರು ಮೈಸೂರನ್ನು ಪ್ಯಾರೀಸ್‌ ಆಗಿ, ಕೊಡಗನ್ನು ಸ್ವಿಟ್ಜರ್‌ಲ್ಯಾಂಡ್‌ ಆಗಿ ಮಾಡುತ್ತೇವೆ ಎಂದು ಹೇಳಿದ್ದರು. ಆದರೆ, ಏನೂ ಮಾಡಲಿಲ್ಲ. ಕೊನಗೆ ಇಲ್ಲಿನ ಸಂಸದರು ಕಾಫಿ ಬೆಳೆಗಾರರ ಪರ ಸಂಸತ್ತಿನಲ್ಲಿ ಧ್ವನಿ ಎತ್ತಲಿಲ್ಲ. ಕೊಡಗಿನಲ್ಲಿ ಅವರು ಕನಿಷ್ಠ ಕಚೇರಿಯನ್ನೂ ತೆರೆಯಲಿಲ್ಲ. ಆದರೆ, ನಾನು ಹಾಗೆ ಮಾಡುವುದಿಲ್ಲ ಎಂದು ಭರವಸೆ ನೀಡಿದರು.

‘ಅರೆಭಾಷೆ ಗೌಡರು ಮತ್ತು ಒಕ್ಕಲಿಗರಲ್ಲಿ ಜಾತಿ ಆಧಾರದ ಮೇಲೆ ಮತ ಕೇಳುವುದು ಎಷ್ಟು ಸರಿ’ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ‘ಈ ಹಿಂದೆ ಪ್ರತಾಪಸಿಂಹ ಸಹ ಈ ಬಗೆಯಲ್ಲಿ ಮತ ಯಾಚನೆ ಮಾಡಿದ್ದರು. ನಾನು ಕೇವಲ ಒಕ್ಕಲಿಗ ಸಮುದಾಯ ಮಾತ್ರವಲ್ಲ ಎಲ್ಲ ಸಮುದಾಯದವರನ್ನೂ ಮತಕೊಡಿ ಎಂದು ಕೇಳುವೆ. ದಶಕಗಳ ನಂತರ ಒಕ್ಕಲಿಗ ಸಮುದಾಯದ ಅಭ್ಯರ್ಥಿಗೆ ಪಕ್ಷ ಟಿಕೆಟ್ ನೀಡಿದೆ ಎಂದು ಹೇಳುವುದು ತಪ್ಪೇ’ ಎಂದು ಪ್ರಶ್ನಿಸಿದರು.

ಪ್ರಬಲ ಸಮುದಾಯಕ್ಕೆ ಸೇರಿದ ಪ್ರತಾಪಸಿಂಹ ಅವರಿಗೆ ಏಕೆ ಟಿಕೆಟ್ ಕೊಡಲಿಲ್ಲ ಎಂದು ಬಿಜೆಪಿ ಸ್ಪಷ್ಟಪಡಿಸಬೇಕು ಎಂದೂ ಅವರು ಒತ್ತಾಯಿಸಿದರು.

ಮುಖ್ಯಮಂತ್ರಿಯ ಕಾನೂನು ಸಲಹೆಗಾರ ಎ.ಎಸ್.ಪೊನ್ನಣ್ಣ ಮಾತನಾಡಿ, ‘ಬಿಜೆಪಿ ಅಭ್ಯರ್ಥಿ ಏನು ಮಾಡುತ್ತೇನೆ ಎಂದು ಎಲ್ಲೂ ಹೇಳಿಲ್ಲ. ಆದರೆ, ನಮ್ಮ ಅಭ್ಯರ್ಥಿ ಪ್ರಣಾಳಿಕೆ ಬಿಡುಗಡೆ ಮಾಡಿದ್ದಾರೆ’ ಎಂದರು.

ಶಾಸಕ ಡಾ.ಮಂತರ್‌ಗೌಡ ಮಾತನಾಡಿ, ‘ಹಿಂದಿನ ಬಿಜೆಪಿ ಶಾಸಕರು, ಸಂಸದರ ನಡುವಿನ ಹೊಂದಾಣಿಕೆ ಹೇಗಿತ್ತು ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ನಾವು ಹಾಗೆ ಮಾಡುವುದಿಲ್ಲ. ಏನೇ ಮಾಡುವುದಿದ್ದರೂ ಮೂವರೂ ಒಟ್ಟಿಗೆ ಮಾಡುತ್ತೇವೆ. ಒಗ್ಗಟ್ಟಿನಿಂದ ಇರುತ್ತೇವೆ’ ಎಂದು ಭರವಸೆ ನೀಡಿದರು.

ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ಧರ್ಮಜ ಉತ್ತಪ್ಪ, ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್, ಪಕ್ಷದ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ವಿಧಾನಪರಿಷತ್ತಿನ ನಿಕಟಪೂರ್ವ ಸದಸ್ಯೆ ವೀಣಾ ಅಚ್ಚಯ್ಯ ಭಾಗವಹಿಸಿದ್ದರು.

Highlights - ಮೊದಲ ಬಾರಿಗೆ ಪ್ರಣಾಳಿಕೆ ಬಿಡುಗಡೆ ಮಾಡಿದ ಅಭ್ಯರ್ಥಿ ಲಕ್ಷ್ಮಣ ಮೈಸೂರಿನಲ್ಲಿ 21ರಂದು ಬಿಡುಗಡೆ ಹಲವು ಯೋಜನೆಗಳ ಕುರಿತು ಅನುಷ್ಠಾನ

Cut-off box - ಪ್ರಣಾಳಿಕೆಯಲ್ಲಿ ಏನಿದೆ? * ಜೈಪುರ ಮಾದರಿಯ ಪಾರಂಪರಿಕ ಪ್ರಾಧಿಕಾರ ರಚಿಸಿ ₹ 3 ಸಾವಿರ ಕೋಟಿ ಅನುದಾನದ ಮೂಲಕ ಮೈಸೂರು ಮತ್ತು ಕೊಡಗು ಪಾರಂ‍ಪರಿಕ ಸ್ಥಳಗಳ ಅಭಿವೃದ್ಧಿ * ಈಗಾಗಲೇ ಸಮೀಕ್ಷಾ ಕಾರ್ಯ ಮುಗಿದಿರುವ ಮೈಸೂರು– ಕುಶಾಲನಗರ ರೈಲ್ವೆ ಮಾರ್ಗದ ಕಾಮಗಾರಿಯನ್ನು ಮುಂದಿನ 5 ವರ್ಷಗಳಲ್ಲಿ ಪೂರ್ಣಗೊಳಿಸಲಾಗುವುದು. ಮೈಸೂರಿನ ಎಲ್ಲ ತಾಲ್ಲೂಕು ಕೇಂದ್ರಗಳ ಮೂಲಕ ಹಾದು ಹೋಗುವಂತಹ ವರ್ತುಲ ರೈಲು ಮಾರ್ಗ ನಿರ್ಮಾಣ. * ಮೈಸೂರು ವಿಮಾನ ನಿಲ್ದಾಣವನ್ನು ರಾಷ್ಟ್ರೀಯ ಮಟ್ಟಕ್ಕೆ ಮೇಲ್ದರ್ಜೆಗೇರಿಸಲಾಗುವುದು. ಇದಕ್ಕಾಗಿ ಮೈಸೂರು– ನಂಜನಗೂಡು ರಾಷ್ಟ್ರೀಯ ಹೆದ್ದಾರಿಯ ಮಾರ್ಗವನ್ನು ಬದಲಾಯಿಸಲಾಗುವುದು. ಮಡಿಕೇರಿಯಲ್ಲಿ ಲಘು ವಿಮಾನ ನಿಲ್ದಾಣ ನಿರ್ಮಾಣ. * ಮೈಸೂರಿನಲ್ಲಿ ಇನ್ನಷ್ಟು ಐಟಿ ಬಿಟಿ ಕಂಪನಿಗಳ ಆರಂಭ. ಇವುಗಳಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಯವರಿಗೆ ಶೇ 50ರಷ್ಟು ಉದ್ಯೋಗಕ್ಕೆ ಮೀಸಲಿರಿಸುವುದು * ಮಡಿಕೇರಿ ನಗರಕ್ಕೆ ಮತ್ತು ಕ್ಷೇತ್ರದ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ಶಾಶ್ವತ ಕುಡಿಯುವ ನೀರಿನ ವ್ಯವಸ್ಥೆ ಜಾರಿ * ‍‍‍ಪಿರಿಯಾಪಟ್ಟಣದಲ್ಲಿ ಕೃಷಿ ಸಂಶೋಧನಾ ಕೇಂದ್ರ ಹಾಗೂ ಎಲ್ಲ ತಾಲ್ಲೂಕುಗಳಲ್ಲಿಯೂ ಶೈತ್ಯಾಗಾರಗಳ ನಿರ್ಮಾಣ * ಮೈಸೂರು– ಕೊಡಗು ಜಿಲ್ಲೆಗಳ ಪ್ರವಾಸಿ ತಾಣಗಳ ಅಭಿವೃದ್ಧಿಗೆ ಮಾಸ್ಟರ್ ಪ್ಲಾನ್ ರೂಪಿಸುವುದು * ಆಯ್ದ ಪ್ರಮುಖ ಕೆರೆಗಳ ಜೀರ್ಣೋದ್ದಾರ * ಮಡಿಕೇರಿಯಲ್ಲಿ ಟ್ರಾಮಾ ಕೇಂದ್ರ ಕೊಡಗಿನಲ್ಲಿ ಅಂತರರಾಷ್ಟ್ರೀಯ ಹಾಕಿ ಕ್ರೀಡಾಂಗಣ ಮೈಸೂರಿನಲ್ಲಿ ಅಂತರರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ ಸ್ಥಾಪನೆ * ಸೈನ್ಸ್ ಸಿಟಿ ಪ್ಲಾನಿಟೋರಿಯಂ ವ್ಯವಸ್ಥೆ ಮೂಲಕ ಖಗೋಳಶಾಸ್ತ್ರ ಅಭ್ಯಾಸ ಮಾಡಲು ಉನ್ನತ ಪದವಿ ವಿದ್ಯಾರ್ಥಿಗಳಿಗೆ ಅನುಕೂಲವಾಗುವ ಟೆಕ್ನಾಲಜಿ ಪಾರ್ಕ್ ಅನ್ನು ಸೋಮವಾರಪೇಟೆಯಲ್ಲಿ ನಿರ್ಮಿಸುವುದು * ಕೊಡಗಿನ ಕಾಫಿ ಏಲಕ್ಕಿ ಮೆಣಸು ಬೆಳೆಗಾರರಿಗೆ ಕೃಷಿ ಕಾರ್ಮಿಕರಿಗೆ ನಿವೃತ್ತ ಸೇನಾನಿಗಳಿಗೆ ಪ್ರತ್ಯೇಕ ಪ್ಯಾಕೇಜ್‌ಗಳ ಘೋಷಣೆ ತಂಬಾಕಿಗೆ ಬೆಂಬಲ ಬೆಲೆ ನಿಗದಿ * ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಅವರಿಗೆ ಮರಣೋತ್ತರ ಭಾರತ ರತ್ನ ಕೊಡಿಸಲು ಪ್ರಯತ್ನ * ಎಲ್ಲ ತಾಲ್ಲೂಕು ಕೇಂದ್ರಗಳಲ್ಲಿ ಯೋಗ ಶಾಲೆಗಳ ನಿರ್ಮಾಣ * ಹುಣಸೂರಿನಲ್ಲಿ ಸೆಂಟ್ರಲ್ ಯೂನಿವರ್ಸಿಟಿ ವಿರಾಜಪೇಟೆಯಲ್ಲಿ ಕಂಪ್ಯೂಟರ್ ಹಾರ್ಡ್‌ವೇರ್ ಕೇಂದ್ರ ಗೋಣಿಕೊಪ್ಪಲಿನಲ್ಲಿ ಕಾಫಿ ರಫ್ತು ಕೇಂದ್ರ ಸ್ಥಾಪನೆ ಜಯಪುರದಲ್ಲಿ ಮೆಟಿರಿಯಲ್ ಟೆಸ್ಟಿಂಗ್ ಲ್ಯಾಬ್ ಸ್ಥಾಪನೆ ಸಣ್ಣ ಸಣ್ಣ ವಿದ್ಯುಚ್ಛಕ್ತಿ ಘಟಕಗಳ ನಿರ್ಮಾಣ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.