ಮಡಿಕೇರಿ: ಮಡಿಕೇರಿಯಿಂದ ಮೇಕೇರಿವರೆಗಿನ ರಸ್ತೆಯಲ್ಲಿ ಫೆ. 25ರಿಂದ ಮಾರ್ಚ್ 25ರ ವರೆಗೆ ಎಲ್ಲಾ ರೀತಿಯ ವಾಹನಗಳ ಸಂಚಾರವನ್ನು ನಿರ್ಬಂಧಿಸಿರುವುದು ಸರಿಯಾದ ಕ್ರಮವಲ್ಲ ಎಂದು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಪ್ರಧಾನ ಕಾರ್ಯದರ್ಶಿ ಅಂಬೆಕಲ್ಲು ನವೀನ್ ಕುಶಾಲಪ್ಪ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕಾಂಕ್ರೀಟ್ ರಸ್ತೆ ನಿರ್ಮಾಣದ ಕಾರಣ ನೀಡಿ ಮುಖ್ಯರಸ್ತೆಯನ್ನು ಒಂದು ತಿಂಗಳ ಕಾಲ ಬಂದ್ ಮಾಡುವುದು ಎಷ್ಟು ಸರಿ? ಕಾಂಕ್ರೀಟ್ ಹಾಕುವ ಬದಲು ಡಾಂಬರೀಕರಣ ಮಾಡಿ ಶೀಘ್ರ ಕಾಮಗಾರಿಯನ್ನು ಪೂರ್ಣಗೊಳಿಸಬೇಕೆಂದು ಒತ್ತಾಯಿಸಿದ್ದಾರೆ.
ಮೊದಲ ಹಂತದ ಕಾಮಗಾರಿಯ ಸಂದರ್ಭ ಸುಮಾರು ಎರಡು ತಿಂಗಳ ಕಾಲ ಇದೇ ರಸ್ತೆಯನ್ನು ಬಂದ್ ಮಾಡಲಾಗಿತ್ತು. ಇದೀಗ ಮುಂದುವರಿದ ಕಾಮಗಾರಿಗಾಗಿ ಮತ್ತೆ ಒಂದು ತಿಂಗಳ ಕಾಲ ರಸ್ತೆ ಬಂದ್ ಎಂದು ಹೇಳಲಾಗುತ್ತಿದೆ. ಆದರೆ, 30 ದಿನಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಹೇಳಿಕೆ ಅನುಮಾನದಿಂದ ಕೂಡಿದೆ, ಅಲ್ಲದೇ ಕೇವಲ ಅರ್ಧ ಕಿ.ಮೀ ದೂರದ ರಸ್ತೆಯನ್ನು ಕಾಂಕ್ರೀಟಿಕರಗೊಳಿಸಲು ಒಂದು ತಿಂಗಳು ಬೇಕೆ? ನಿರಂತರವಾಗಿ ರಸ್ತೆ ಬಂದ್ ಮಾಡುವುದರಿಂದ ಈ ಭಾಗದ ವ್ಯಾಪಾರಸ್ಥರಿಗೆ, ನಿವಾಸಿಗಳಿಗೆ, ಖಾಸಗಿ ಬಸ್, ಆಟೊ ಮತ್ತು ಇತರ ವಾಹನಗಳಿಗೆ ತೊಂದರೆಯಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಪ್ರಸ್ತುತ ಕೈಗೊಂಡಿರುವ ಕಾಮಗಾರಿ ಅತ್ಯಂತ ಕಳಪೆ ಗುಣಮಟ್ಟದಿಂದ ಕೂಡಿದ್ದು, ಹಳೆಯ ರಸ್ತೆಯ ಕಲ್ಲುಗಳನ್ನು ವೈಜ್ಞಾನಿಕವಾಗಿ ತೆರವುಗೊಳಿಸಿ ಗುಣಮಟ್ಟದಿಂದ ಕಾಂಕ್ರಿಟೀಕರಣಗೊಳಿಸದೆ ಹೊಸ ಕಾಮಗಾರಿಗೆ ಬಳಕೆ ಮಾಡಿಕೊಳ್ಳಲಾಗುತ್ತಿದೆ ಎಂದು ಅವರು ಆರೋಪಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.