
ಮಡಿಕೇರಿ: ರಾಜ್ಯದಲ್ಲೇ ಅತಿ ಹೆಚ್ಚು ಆದಾಯ ತರುವ ಕೇಂದ್ರಗಳಲ್ಲಿ ಮುಂಚೂಣಿಯಲ್ಲಿರುವ ಮಡಿಕೇರಿ ಆಕಾಶವಾಣಿ ಕೇಂದ್ರವು ಸಿಬ್ಬಂದಿ ಕೊರತೆಯಿಂದ ಏದುಸಿರು ಬಿಡುತ್ತಿದೆ.
1990ರ ದಶಕದಲ್ಲಿ ಇಲ್ಲಿ ಕಾರ್ಯಕ್ರಮ ವಿಭಾಗವೊಂದರಲ್ಲೆ 18ರಿಂದ 19 ಮಂದಿ ಕಾರ್ಯನಿರ್ವಹಿಸುತ್ತಿದ್ದರು. ಈಗ ಕೇವಲ ಇಬ್ಬರು ಮಾತ್ರವೇ ಈ ವಿಭಾಗದ ನೊಗ ಹೊತ್ತಿದ್ದಾರೆ. ಉಳಿದವರಿಗೆ ತಿಂಗಳಿಗೆ ಕೇವಲ 6 ದಿನ ಕೆಲಸ ಎನ್ನುವಂತಹ ವಿಚಿತ್ರ ನಿಯಮವನ್ನು ಕೇಂದ್ರ ಜಾರಿಗೊಳಿಸಿದೆ. ಹೀಗಾಗಿ, ಉತ್ತಮ ಆದಾಯ ತರುತ್ತಿರುವ ಆಕಾಶವಾಣಿ ಕೇಂದ್ರದಲ್ಲೂ ಸಾಲು ಸಾಲು ಸಮಸ್ಯೆಗಳೇ ಇವೆ ಎಂದು ಹೆಸರು ಬಹಿರಂಗಪಡಿಸಲು ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ದೇಶಾದ್ಯಂತ ಪ್ರತಿ ತಿಂಗಳೂ ಸಿಬ್ಬಂದಿ ನಿವೃತ್ತರಾಗುತ್ತಿದ್ದಾರೆ. ಆದರೆ, ಹೊಸ ನೇಮಕಾತಿ ಇಲ್ಲವೇ ಇಲ್ಲ ಎನ್ನುವಂತಿದೆ. ಕಾರ್ಯಕ್ರಮ ವಿಭಾಗದಲ್ಲಿ ನೇಮಕಾತಿ ನಡೆದಿದ್ದು 2015ರಲ್ಲೇ ಕೊನೆ. ಆ ನಂತರ ಒಂದೇ ಒಂದು ನೇಮಕಾತಿಯೂ ನಡೆದಿಲ್ಲ. ಇದರಿಂದ ವರ್ಷದಿಂದ ವರ್ಷಕ್ಕೆ ಆಕಾಶವಾಣಿ ಪರಿಸ್ಥಿತಿ ಹದಗೆಡುತ್ತಿದೆಯೇ ಹೊರತು ಸುಧಾರಿಸುತ್ತಿಲ್ಲ.
ಸಂಪೂರ್ಣ ಕೇಂದ್ರ ಸರ್ಕಾರದ ಸ್ವಾಮ್ಯಕ್ಕೆ ಒಳಪಡುವ ಸಾಂಪ್ರದಾಯಿಕ ಮಾಧ್ಯಮ ಎನ್ನುವಂತಹ ಈ ಆಕಾಶವಾಣಿಯ ಉಳಿವಿಗೆ ಕೇಂದ್ರ ಸರ್ಕಾರ ತನ್ನ ಬಜೆಟ್‌ನಲ್ಲಿ ವಿಶೇಷ ಗಮನ ಕೊಡಬೇಕು ಎಂಬ ಒತ್ತಾಯ ಕೇಳಿ ಬಂದಿದೆ. ಕನಿಷ್ಠ ಇಲ್ಲಿನ ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರಾದರೂ ಒಮ್ಮೆಯಾದರೂ ಆಕಾಶವಾಣಿ ಕೇಂದ್ರಕ್ಕೆ ಭೇಟಿ ನೀಡಿ ಸಮಸ್ಯೆ ಆಲಿಸುವರೇ ಎಂಬ ನಿರೀಕ್ಷೆಯೂ ಇದೆ.
103.1 ಕಂಪನಾಂಕದಲ್ಲಿ ಪ್ರಸಾರವಾಗುವ ಮಡಿಕೇರಿ ಆಕಾಶವಾಣಿ ಇಡೀ ದೇಶದಲ್ಲೇ ವಿಶೇಷ ಸ್ಥಾನ ಪಡೆದಿದೆ. ನಿಧನವಾರ್ತೆಗಳ ಪ್ರಸಾರ ಹೊಂದಿರುವ, 6 ಭಾಷೆಗಳಲ್ಲಿ ವಾರ್ತಾ ಪ್ರಸಾರ ಇರುವಂತಹ ದೇಶದ ಅಪರೂಪದ ಕೇಂದ್ರಗಳಲ್ಲಿ ಒಂದೆಂಬ ಹೆಗ್ಗಳಿಕೆ ಮಡಿಕೇರಿ ಆಕಾಶವಾಣಿಗೆ ಇದೆ. ಈ ಕೇಂದ್ರದ ಕಂಪನಾಂಕದಲ್ಲಿ ಕನ್ನಡ, ಹಿಂದಿ, ಇಂಗ್ಲಿಷ್, ಸಂಸ್ಕೃತ ಜೊತೆಗೆ ಕೊಡವ ಮತ್ತು ಅರೆಭಾಷೆಯಲ್ಲಿಯೂ ಸುದ್ದಿ ಪ್ರಸಾರ ನಡೆಯುತ್ತಿದೆ. ಇದಕ್ಕೆ ಹೆಚ್ಚಿನ ಕೇಳುಗರಿರುವುದು ವಿಶೇಷ.
ಈ ಕೇಂದ್ರಕ್ಕೆ ಉತ್ತಮ ಆದಾಯವೂ ಇದೆ. ಹೊರರಾಜ್ಯಗಳಿಂದಲೂ ಜಾಹೀರಾತು ಬರುತ್ತಿದೆ. ವಾರ್ಷಿಕ ₹ 80 ಲಕ್ಷದಷ್ಟು ಸರಾಸರಿ ಆದಾಯವನ್ನೂ ಹೊಂದಿದೆ. ಹೀಗಿದ್ದರೂ, ಕೇಂದ್ರದ ಸಿಬ್ಬಂದಿ ಕೊರತೆಯಂತಹ ಸಮಸ್ಯೆಗಳು ಪರಿಹಾರ ಕಂಡಿಲ್ಲ.
Highlights - ಕೊಡಗಿನಲ್ಲಿ ಆಕಾಶವಾಣಿಗಿದೆ ಅತಿ ಹೆಚ್ಚು ಕೇಳುಗರು ವಿದ್ಯುತ್ ವ್ಯತ್ಯಯವಾದಾಗ ಬೇಕೇ ಬೇಕು ರೇಡಿಯೊ ಕೊಡಗಿನ ಜನರಿಗೆ ರೇಡಿಯೊ ಅಚ್ಚುಮೆಚ್ಚು
Quote - ವಿದ್ಯುತ್ ವ್ಯತ್ಯಯದಂತಹ ಸಮಸ್ಯೆ ಎದುರಿಸುತ್ತಿರುವ ಗುಡ್ಡಗಾಡು ಪ್ರದೇಶವಾದ ಕೊಡಗು ಜಿಲ್ಲೆಯಲ್ಲಿ ಆಕಾಶವಾಣಿಯನ್ನೇ ಜನರು ನೆಚ್ಚಿಕೊಂಡಿದ್ದಾರೆ. ಆಕಾಶವಾಣಿಗೆ ವಿಶೇಷ ಆದ್ಯತೆ ನೀಡಬೇಕು ರಂಜಿತ್ ಕವಲಪಾರ ಸಾಹಿತಿ.
Cut-off box - ವಾಹನ ಸೌಕರ್ಯಕ್ಕೂ ನೂರೆಂಟು ಸಮಸ್ಯೆ! ಸಾಕಷ್ಟು ಆದಾಯ ಹೊಂದಿರುವ ಮಡಿಕೇರಿ ಆಕಾಶವಾಣಿ ಕೇಂದ್ರಕ್ಕೆ ಈಗ ವಾಹನ ಸೌಕರ್ಯದ ಸಮಸ್ಯೆಯೂ ಎದುರಾಗಿದೆ. ಈ ಮುಂಚೆ ವಾಹನಗಳನ್ನು ಬಾಡಿಗೆಗೆ ಪಡೆದು ಪ್ರಯಾಣಿಸಬೇಕಿದ್ದ ಸ್ಥಳಕ್ಕೆ ಹೋಗಬಹುದಿತ್ತು. ಆದರೆ ಈಗ ‘ಗವರ್ನಮೆಂಟ್–ಇ–ಮಾರ್ಕೆಟ್’ (ಜಮ್)ನಲ್ಲಿ ನೋಂದಾಯಿತವಾದ ವಾಹನಗಳನ್ನಷ್ಟೇ ಬಾಡಿಗೆಗೆ ಪಡೆಯಬೇಕು ಎಂಬ ನಿಯಮವನ್ನು ಕೇಂದ್ರ ಸರ್ಕಾರ ರೂಪಿಸಿದೆ. ಇದರಲ್ಲಿ ನೋಂದಾಯಿತರಾದವರು ಕೊಡಗಿನಲ್ಲಿ ಇಲ್ಲ. ಹೀಗಾಗಿ ವಾಹನವನ್ನು ಬಾಡಿಗೆಗೆ ತಾಂತ್ರಿಕ ತೊಡಕು ಏರ್ಪಟ್ಟಿದೆ ಎಂದು ಹೆಸರು ಬಹಿರಂಗಪಡಿಸಲು ಬಯಸದ ಸಿಬ್ಬಂದಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.