ADVERTISEMENT

ಮಡಿಕೇರಿ | ಜಾತಿ, ಧರ್ಮದ ತಾರತಮ್ಯ ಮಾಡುವುದಿಲ್ಲ: ಮಂತರ್‌ಗೌಡ

ಮಡಿಕೇರಿ ನೂತನ ಶಾಸಕ ಡಾ.ಮಂತರ್‌ಗೌಡ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 14 ಮೇ 2023, 14:03 IST
Last Updated 14 ಮೇ 2023, 14:03 IST
ಡಾ.ಮಂತರ್‌ಗೌಡ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ
ಡಾ.ಮಂತರ್‌ಗೌಡ, ಮಡಿಕೇರಿ ವಿಧಾನಸಭಾ ಕ್ಷೇತ್ರದ ಶಾಸಕ   

ಮಡಿಕೇರಿ: ‘ಮತ ಹಾಕಿದವರು, ಮತ ಹಾಕದವರು ಎಂಬ ಬೇಧಭಾವ ಮಾಡುವುದಿಲ್ಲ. ಜಾತಿ, ಧರ್ಮದ ಆಧಾರದ ಮೇಲೂ ತಾರತಮ್ಯ ಮಾಡುವುದಿಲ್ಲ. ಎಲ್ಲ ಜನರ ಕೆಲಸ ಮಾಡಿಕೊಡುವೆ’ ಎಂದು ಮಡಿಕೇರಿಯ ನೂತನ ಶಾಸಕ ಡಾ.ಮಂತರ್‌ಗೌಡ ಭರವಸೆ ನೀಡಿದರು.

‘ನನಗೆ ಮತ ಹಾಕಿರುವುದು, ಹಾಕದೇ ಇರುವುದು ಮುಖ್ಯ ಅಲ್ಲ. ಯಾವುದೇ ಜಾತಿ, ಧರ್ಮ ಮುಖ್ಯ ಅಲ್ಲ. ಇಲ್ಲಿ ಎಲ್ಲರೂ ಒಂದೇ’ ಎಂದು ಅವರು ಇಲ್ಲಿ ಭಾನುವಾರ ಸುದ್ದಿಗೋಷ್ಠಿಯಲ್ಲಿ ಪ್ರತಿಪಾದಿಸಿದರು.

‘ಜಿಲ್ಲೆಯಲ್ಲಿ ದೊರೆಯುತ್ತಿರುವ ಆರೋಗ್ಯ ಸೇವೆಗಳ ಉನ್ನತೀಕರಣ, ತ್ಯಾಜ್ಯದ ವೈಜ್ಞಾನಿಕ ವಿಲೇವಾರಿ, ಕಂದಾಯ ಇಲಾಖೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಿಸಿ, ಭ್ರಷ್ಟಾಚಾರ ರಹಿತ ಆಡಳಿತ ನೀಡುವುದು ನನ್ನ ಗುರಿ’ ಎಂದು ಅವರು ಇಲ್ಲಿ ತಮ್ಮ ಕನಸುಗಳನ್ನು ಹಂಚಿಕೊಂಡರು.

ADVERTISEMENT

ಮಡಿಕೇರಿಯಲ್ಲಿ ಆಸ್ಪತ್ರೆ ಕಾಮಗಾರಿ ಪೂರ್ಣಗೊಂಡಿಲ್ಲ. ಸೋಮವಾರಪೇಟೆಯಲ್ಲೂ ಶತಮಾನೋತ್ಸವ ಭವನದ ಕಾಮಗಾರಿ ಏಳೆಂಟು ವರ್ಷಗಳಿಂದ ನಡೆಯುತ್ತಲೇ ಇದೆ. ಸುಸಜ್ಜಿತವಾದ ಕ್ರೀಡಾಂಗಣಗಳನ್ನು ನಿರ್ಮಾಣ ಮಾಡಬೇಕು, ಎಲ್ಲ ‌ಕಾರ್ಮಿಕರಿಗೆ ವಾಸಯೋಗ್ಯವಾದ ಮನೆ ನೀಡಬೇಕು ಎಂದು ಅವರು ಹೇಳಿದರು.

ಪಕ್ಷದ ಕಾರ್ಯಕರ್ತರು, ಮುಖಂಡರು ಗೆಲುವಿಗಾಗಿ ಬಹಳ ಶ್ರಮಪಟ್ಟಿದ್ದಾರೆ. ಯಾರೂ ನಕರಾತ್ಮಕವಾದ ಪ್ರಚಾರ ಮಾಡದೇ, ಎಲ್ಲರೂ ಸಕರಾತ್ಮಕವಾಗಿಯೆ ಪ್ರಚಾರ ಮಾಡಿದರು. ಅದರ ಫಲ ಈಗ ಸಿಕ್ಕಿದೆ. ಮತದಾರರಿಗೆ, ಕಾರ್ಯಕರ್ತರಿಗೆ, ಹಿರಿಯರಿಗೆ ಧನ್ಯವಾದಗಳನ್ನು ಅರ್ಪಿಸಿದರು.

‘ಮತದಾರರಿಗೂ, ಶಾಸಕರಿಗೂ ನಡುವೆ ಅಂತರ ಇತ್ತು. ನಾನು ನೇರ ಮತದಾರರನ್ನು ತಲುಪಿದೆ. ಬಿಜೆಪಿ, ಜೆಡಿಎಸ್‌ನ ಕೆಲವರಿಂದ ಸಹಾಯವೂ ಆಗಿದೆ. ಅದೇ ರೀತಿ ನಮ್ಮಿಂದಲೂ ಬಿಜೆಪಿಯವರಿಗೆ ಸಹಾಯ ಆಗಿದೆ. ಇವೆಲ್ಲವೂ ರಾಜಕೀಯದಲ್ಲಿ ಸಾಮಾನ್ಯ. ಆದರೆ, ನಾಪಂಡ ಮುತ್ತಪ್ಪ ಅವರು ತಟಸ್ಥರಾದ ವಿಷಯ ಗೊತ್ತಿಲ್ಲ’ ಎಂದು ಪ್ರಶ್ನೆಯೊಂದಕ್ಕೆ ಪ್ರತಿಕ್ರಿಯಿಸಿದರು.

‘ಐದು ವರ್ಷ ನೋಡಿ ನಾನು ಜನರಿಗೆ ಸಿಗಲಿಲ್ಲ ಅಂದರೆ ಜನರೇ ತೀರ್ಮಾನ ಮಾಡುತ್ತಾರೆ. ನನ್ನ ತಂದೆಗೂ ಒಳ್ಳೆಯದಾಗಲಿ, ನಾವಿಬ್ಬರೂ ಒಂದೇ ಮನೆಯಲ್ಲಿದ್ದರೂ ಎಷ್ಟೋ ಬಾರಿ ಭೇಟಿ ಆಗುವುದಿಲ್ಲ. ಅವರು ಒಂದು ದಾರಿಯಲ್ಲಿ, ನಾನು ಒಂದು ದಾರಿಯಲ್ಲಿ ಹೋಗುತ್ತಿದ್ದೇವೆ’ ಎಂದರು.

ಕಾಂಗ್ರೆಸ್ ಪಕ್ಷದ ಪ್ರಚಾರ ಸಮಿತಿ ಅಧ್ಯಕ್ಷ ಟಿ.ಪಿ.ರಮೇಶ್ ಮಾತನಾಡಿ, ‘ಜಿಲ್ಲೆಗೆ ಹೆಚ್ಚಾಗಿ ಸ್ಟಾರ್ ಪ್ರಚಾರಕರು ಬರಲಿಲ್ಲ. ಹೀಗಿದ್ದರೂ, ಗೆಲುವು ಸಾಧ್ಯವಾಗಿದ್ದು ಕಾರ್ಯಕರ್ತರಿಂದ. ನನ್ನ ರಾಜಕೀಯ ಜೀವನದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಈ ಪರಿ ಕೆಲಸ ಮಾಡಿದ್ದನ್ನು ನಾನು ನೋಡಿಯೇ ಇಲ್ಲ. ಕೊಡಗಿನಲ್ಲಿ ಕಾಂಗ್ರೆಸ್‌ನವರು ಕಾಂಗ್ರೆಸ್‌ನವರನ್ನೇ ಸೋಲಿಸುತ್ತಾರೆ ಎಂಬ ಮಾತು ಸುಳ್ಳಾಯಿತು’ ಎಂದರು.

ಹಿರಿಯ ಮುಖಂಡ ಚಂದ್ರಮೌಳಿ ಮಾತನಾಡಿ, ‘ನಿನ್ನೆ ಏನಾಯಿತು ಎಂಬುದು ಮುಖ್ಯ ಅಲ್ಲ. ಮುಂದೆ ಏನು ಮಾಡಬೇಕು ಎಂಬುದು ಮುಖ್ಯ. ನಾಳೆಯ ನೆಮ್ಮದಿಯನ್ನು ಕಾಣಬೇಕು’ ಎಂದರು.

ಕೆಪಿಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಪಿ.ಚಂದ್ರಕಲಾ, ನಗರಸಭೆ ಸದಸ್ಯ ರಾಜೇಶ್ ಯಲ್ಲಪ್ಪ, ಮುನಿರುದ್ದೀನ್ ಇದ್ದರು.

ಜಿಲ್ಲೆಗೆ ಹೆಚ್ಚಾಗಿ ಸ್ಟಾರ್ ಪ್ರಚಾರಕರು ಬರಲಿಲ್ಲ ಗೆಲುವಿಗಾಗಿ ಶ್ರಮಿಸಿದ ಕಾರ್ಯಕರ್ತರು, ಮುಖಂಡರು 

‘ಹಣ ಮಾಡಲು ಬಂದಿಲ್ಲ’ ‘ನನ್ನ ತಂದೆ ತಾಯಿ ತಾತ ಅಜ್ಜಿ ಊಟ ಮಾಡುವಷ್ಟು ಮಾಡಿಟ್ಟಿದ್ದಾರೆ. ನಾನು ಹಣ ಮಾಡುವ ಉದ್ದೇಶದಿಂದ ಖಂಡಿತವಾಗಿಯೂ ರಾಜಕೀಯಕ್ಕೆ ಬಂದಿಲ್ಲ’ ಎಂದು ನೂತನ ಶಾಸಕ ಡಾ.ಮಂತರ್‌ಗೌಡ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.