
ಮಡಿಕೇರಿ: ಇಲ್ಲಿನ ನಗರಸಭೆಯಲ್ಲಿ ಗುರುವಾರ ನಡೆದ ಕೌನ್ಸಿಲ್ ಸಭೆಯಲ್ಲಿ ಮತ್ತದೇ ಹಳೆಯ ವಿಚಾರಗಳು ಪ್ರಸ್ತಾಪವಾಗಿ ಗದ್ದಲ ಪರಿಸ್ಥಿತಿ ಏರ್ಪಟ್ಟಿತು. ಕೆಎಸ್‌ಆರ್‌ಟಿಸಿ ಡಿಪೊ ಸಮೀಪ ಹೆದ್ದಾರಿ ಬದಿಯಲ್ಲಿ ನಿರ್ಮಾಣವಾಗಿರುವ ತಾತ್ಕಾಲಿಕ ಅಂಗಡಿಗಳ ವಿಚಾರದ ಚರ್ಚೆಯೇ ಕಲಾಪದ ಬಹು ಸಮಯವನ್ನು ಆವರಿಸಿತು. ಕೊನೆಗೆ, ನ್ಯಾಯಾಲಯ ನೀಡಿರುವ ಆದೇಶವನ್ನು ಅಧ್ಯಯನ ಮಾಡಿ ಖಚಿತ ತೀರ್ಮಾನ ಕೈಗೊಳ್ಳುವವರೆಗೆ ತಾತ್ಕಾಲಿಕವಾಗಿ ಮಳಿಗೆಗಳನ್ನು ಮುಚ್ಚಿಸಲು ಸಭೆ ನಿರ್ಣಯಿಸಿತು.
ಸಭೆಯ ಆರಂಭದಲ್ಲೇ ವಿಷಯ ಪ್ರಸ್ತಾಪಿಸಿದ ಕಾಂಗ್ರೆಸ್ ಸದಸ್ಯ ಬಿ.ವೈ.ರಾಜೇಶ್, ‘ವ್ಯಾಪಾರದ ಪರವಾನಗಿ ಪಡೆಯದೇ ವ್ಯವಹಾರ ಮಾಡುತ್ತಿದ್ದಾರೆ. ಅಧಿಕಾರಿಗಳು ನ್ಯಾಯಯುತವಾಗಿ ವರ್ತಿಸಿ, ನಿಮಗೆ ಯಾರಾದರೂ ಬೆದರಿಕೆ ಒಡ್ಡಿದ್ದಾರಾ?’ ಎಂದು ಪ್ರಶ್ನಿಸುವ ಮೂಲಕ ಚರ್ಚೆ ಆರಂಭಿಸಿದರು.
ಬಿಜೆಪಿ ಸದಸ್ಯೆ ಅನಿತಾ ಪೂವಯ್ಯ ಮಾತನಾಡಿ, ‘ಹಾಗಾದರೆ ಎಲ್ಲರಿಗೂ ಒಂದೇ ನ್ಯಾಯ ಕೊಡಿ. ಪರವಾನಗಿ ಪಡೆಯದೇ ವ್ಯಾಪಾರ ಮಾಡುತ್ತಿರುವ ಎಲ್ಲರ ವಿರುದ್ಧ ಕ್ರಮ ಕೈಗೊಳ್ಳಿ’ ಎಂದರು.
ಎಸ್‌ಡಿಪಿಐನ ಮನ್ಸೂರ್ ಮಾತನಾಡಿ, ‘ಪ್ರತಿ ಸಭೆಯಲ್ಲಿ ಇದೊಂದೇ ವಿಷಯ ಚರ್ಚೆಯಾಗುತ್ತಿದೆ. ನಾಗರಿಕರ ಸಮಸ್ಯೆಗಳನ್ನು ಚರ್ಚೆ ನಡೆಸುವುದಕ್ಕೆ ಸಾಧ್ಯವೇ ಆಗುತ್ತಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.
ಬಿಜೆಪಿ ಸದಸ್ಯ ಉಮೇಶ್ ಸುಬ್ರಮಣಿ, ‘ಎಲ್ಲರಿಗೂ ಒಂದೇ ಕಾನೂನು ತನ್ನಿ. ವೈಯಕ್ತಿಕವಾಗಿರಿಸಿಕೊಂಡು ಒಬ್ಬರನ್ನು ಮಾತ್ರವೇ ಗುರಿಯಾಗಿಸಿಕೊಳ್ಳದಿರಿ’ ಎಂದರು.
ಬಿಜೆಪಿ ಸದಸ್ಯ ಅರುಣ್ ಶೆಟ್ಟಿ, ‘ಬೇರೆ ವಿಚಾರ ಚರ್ಚೆಗೆ ಬರುತ್ತಲೇ ಇದೆ. ಕಳೆದ ಸಭೆಯಿಂದ ಇದೇ ನಡೆಯುತ್ತಿದೆ. ನಾವೆಲ್ಲರೂ ಸಭಾತ್ಯಾಗ ಮಾಡುತ್ತೇವೆ’ ಎಂದರು.
ಬಿಜೆಪಿ ಅಪ್ಪಣ್ಣ ಸಹ ‘ರಸ್ತೆ ಗುಂಡಿ ಮುಚ್ಚಲು ಸಾಧ್ಯವಾಗುತ್ತಿಲ್ಲ. ಅನೇಕ ಸಮಸ್ಯೆಗಳು ನಗರದಲ್ಲಿವೆ’ ಎಂದರೆ ಎಸ್‌ಡಿಪಿಐನ ಬಷೀರ್ ‘ಈ ವಿಷಯ ಕುರಿತು ಶೀಘ್ರ ತೀರ್ಮಾನ ಕೊಡಿ’ ಎಂದರು. ಸತೀಶ್ ಸಹ ನಿರ್ಣಯ ಕೈಗೊಂಡು ಸಭೆ ಮುಂದುವರಿಸಿ ಎಂದರು.ಹ
ಹಿರಿಯ ಸದಸ್ಯ ಬಿಜೆಪಿಯ ಕೆ.ಎಸ್.ರಮೇಶ್ ಮಾತನಾಡಿ, ‘ಪ್ರತಿ ಬಾರಿಯೂ ಇದೇ ವಿಷಯ ಚರ್ಚೆಯಾಗುತ್ತಿದೆ. ಯಾರೂ ಹಠ ಹಿಡಿಯುವುದು ಬೇಡ. ನ್ಯಾಯಾಲಯದ ಆದೇಶ ನೋಡಿ ನಂತರ ತೀರ್ಮಾನ ಕೈಗೊಳ್ಳೋಣ. ಅಲ್ಲಿಯವರೆಗೆ ತಾತ್ಕಾಲಿಕವಾಗಿ ಮಳಿಗೆ ಮುಚ್ಚಿಸಿ’ ಎಂದು ಸಲಹೆ ನೀಡಿದರು. ಈ ಸಲಹೆಗೆ ಪೌರಾಯುಕ್ತ ರಮೇಶ್, ಎಸ್‌ಡಿಪಿಐನ ಅಮಿನ್ ಮೊಹಿಸಿನ್ ಹಾಗೂ ಇತರರು ಸಮ್ಮತಿ ವ್ಯಕ್ತಪಡಿಸಿದರು.
ಕಾಂಗ್ರೆಸ್‌ನ ಬಿ.ವೈ.ರಾಜೇಶ್ ಪಟ್ಟು ಬಿಡದೇ ನಿರ್ಣಯ ಓದುವಂತೆ ಪದೇ ಪದೇ ಕೇಳಿದರು.
ಅಂತೂ ಇಂತೂ ರಚನೆಯಾಯಿತು ಸ್ಥಾಯಿ ಸಮಿತಿ
ಕಲಾವತಿ ಅವರು ಅಧ್ಯಕ್ಷರಾದ ಬಳಿಕ ನಗರಸಭೆಯ 4 ಸ್ಥಾಯಿ ಸಮಿತಿಗಳು ರಚನೆಯಾದವು. ತೆರಿಗೆ ನಿರ್ಧರಣೆ ಹಣಕಾಸು ಮತ್ತು ಅಪೀಲುಗಳ ಸಮಿತಿ ಸಾರ್ವಜನಿಕ ಆರೋಗ್ಯ ಶಿಕ್ಷಣ ಮತ್ತು ಸಾಮಾಜಿಕ ನ್ಯಾಯ ಸಮಿತಿ ಪಟ್ಟಣ ಯೋಜನೆ ಮತ್ತು ಪುರೋಭಿವೃದ್ಧಿ ಸಮಿತಿ ಹಾಗೂ ಲೆಕ್ಕಪತ್ರಗಳ ಸಮಿತಿಗೆ ತಲಾ 11 ಮಂದಿ ಸದಸ್ಯರನ್ನು ಆಯ್ಕೆ ಮಾಡಲಾಯಿತು.
ಪ್ರತಿಧ್ವನಿಸಿದ ಬೀದಿ ದೀಪದ ಸಮಸ್ಯೆ
ಅನಿತಾ ಪೂವಯ್ಯ ಮಾತನಾಡಿ ‘ಬೀದಿ ದೀಪಗಳಿಗೆಂದೆ ಮೀಸಲಿರಿಸಿದ್ದ ಹಣವನ್ನು ಅನ್ಯ ಉದ್ದೇಶಕ್ಕೆ ಬಳಸಿದ್ದು ಏಕೆ’ ಎಂದು ಪ್ರಶ್ನಿಸಿದರೆ ಶ್ವೇತಾ ಪ್ರಶಾಂತ್ ಸಹ ದನಿಗೂಡಿಸಿ ‘ಜನರು ಕತ್ತಲಿನಲ್ಲೆ ಕೂರಬೇಕಾ?’ ಎಂದು ಪ್ರಶ್ನಿಸಿದರು. ಪ್ರತಿಕ್ರಿಯಿಸಿದ ಉಪಾಧ್ಯಕ್ಷ ಮಹೇಶ್ ಜೈನಿ ‘ಕೂಡಲೇ ₹ 7.5 ಲಕ್ಷದಲ್ಲಿ ಬೀದಿ ದೀಪಗಳ ದುರಸ್ತಿ ಮಾಡಲಾಗುವುದು’ ಎಂದು ಹೇಳಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.