ADVERTISEMENT

ಕ್ಷಮೆ ಕೋರಿದ ಮಡಿಕೇರಿ ದಸರಾ ದಶಮಂಟಪ ಸಮಿತಿ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2025, 5:32 IST
Last Updated 7 ಅಕ್ಟೋಬರ್ 2025, 5:32 IST
   

ಮಡಿಕೇರಿ: ಮಡಿಕೇರಿ ದಸರಾ ಜನೋತ್ಸವದಲ್ಲಿ ದಶಮಂಟಪಗಳಿಗೆ ಬಹುಮಾನ ವಿತರಿಸುವ ವೇಳೆ ಈಚೆಗೆ ಉಂಟಾದ ಕಹಿ ಘಟನೆಗೆ ವಿಷಾದ ವ್ಯಕ್ತಪಡಿಸುವುದು ಮಾತ್ರವಲ್ಲ, ಎಲ್ಲರಲ್ಲೂ ಕ್ಷಮೆ ಯಾಚಿಸುವುದಾಗಿ ಮಡಿಕೇರಿ ದಸರಾ ದಶಮಂಟಪ ಸಮಿತಿ ಅಧ್ಯಕ್ಷ ಬಿ.ಎಂ.ಹರೀಶ್ ಅಣ್ವೇಕರ್ ತಿಳಿಸಿದ್ದಾರೆ.

ಸಾರ್ವಜನಿಕರು, ಜನಪ್ರತಿನಿಧಿಗಳು, ದೇವಾಲಯ ಸಮಿತಿಗಳು ಹಾಗೂ ಸರ್ವ ಅಧಿಕಾರಿ ವರ್ಗದ ಸಹಕಾರದಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವವನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ಆದರೆ ಕೊನೆಯ ದಿನ ವಿಜಯದಶಮಿಯಂದು ಬಹುಮಾನ ಘೋಷಿಸುವ ವೇಳೆ ಉಂಟಾದ ಘಟನೆ ಕುರಿತು ಸಮಿತಿಯ ಪದಾಧಿಕಾರಿಗಳು ಹಾಗೂ ಸದಸ್ಯರುಗಳಿಗೆ ಬೇಸರವಿದ್ದು, ದಶಮಂಟಪ ಸಮಿತಿಯ ಪರವಾಗಿ ಸರ್ವರಲ್ಲಿ ಕ್ಷಮೆ ಕೋರುವುದಾಗಿ ಅವರು ತಿಳಿಸಿದ್ದಾರೆ.

ಜಿಲ್ಲಾಡಳಿತ, ಪೊಲೀಸ್ ಇಲಾಖೆ, ನಗರ ದಸರಾ ಸಮಿತಿ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಲ್ಲಿ ಕ್ಷಮೆಯಾಚಿಸುತ್ತೇವೆ. ಪೊಲೀಸ್ ಇಲಾಖೆ ಅತ್ಯಂತ ಜವಾಬ್ದಾರಿಯುತವಾಗಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲರ ಸುರಕ್ಷತೆಗೆ ಆದ್ಯತೆ ನೀಡಿದ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಕೃತಜ್ಞತೆ ಸಲ್ಲಿಸುತ್ತೇವೆ. ದಶಮಂಟಪ ಸಮಿತಿಯಿಂದ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ತೊಂದರೆಯಾಗಿದ್ದಲ್ಲಿ ಅದಕ್ಕೆ ವಿಷಾದ ವ್ಯಕ್ತಪಡಿಸುತ್ತೇವೆ. ಮುಂದಿನ ವರ್ಷಗಳಲ್ಲಿ ಈ ರೀತಿಯ ಘಟನೆಗಳು ನಡೆಯದಂತೆ ಅಗತ್ಯ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಳ್ಳಲಾಗುವುದು ಎಂದೂ ಅವರು ಹೇಳಿದ್ದಾರೆ.

ADVERTISEMENT

ನಾಡಹಬ್ಬ ದಸರಾವನ್ನು ಯಾವುದೇ ಗೊಂದಲವಿಲ್ಲದೆ ಅತ್ಯಂತ ಶಾಂತಿಯುತವಾಗಿ ನಡೆಸಲು ಸರ್ವರು ಒಗ್ಗಟ್ಟಾಗಿ ಸೇರಿ ಸಮಗ್ರ ಚಿಂತನೆ ನಡೆಸಲಾಗುವುದು. ಬಹುಮಾನದ ಆಯ್ಕೆ ವಿಚಾರವಾಗಿ ನೂತನ ಮಾರ್ಗೋಪಾಯಗಳನ್ನು ಕಂಡುಕೊಳ್ಳಲಾಗುವುದು. ಈ ಕ್ರಮಕ್ಕೆ ದಶಮಂಟಪ ಸಮಿತಿಗಳ ಒಪ್ಪಿಗೆಯನ್ನು ಪಡೆಯಲಾಗುವುದು ಎಂದು ಅವರು ಪ್ರಕಟಣೆಯಲ್ಲಿ ಹೇಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.