ADVERTISEMENT

ಮಡಿಕೇರಿ ದಸರೆ: ₹ 5 ಲಕ್ಷ ಅನುದಾನಕ್ಕೆ ಒತ್ತಾಯ

ಗರಿಗೆದರಿದ ಮಡಿಕೇರಿ ದಸರೆ ಚಟುವಟಿಕೆಗಳು, ದಸರಾ ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ

​ಪ್ರಜಾವಾಣಿ ವಾರ್ತೆ
Published 13 ಜುಲೈ 2025, 3:08 IST
Last Updated 13 ಜುಲೈ 2025, 3:08 IST
ಮಡಿಕೇರಿಯ ಕೋಟೆಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಕೋಟೆ ಮಹಾಗಣಪತಿ ದೇವಾಲಯ ಸಮಿತಿಯ ಹರೀಶ್ ಅಣ್ವೇಕರ್ ಅವರಿಗೆ ಹಸ್ತಾಂತರ ಮಾಡಲಾಯಿತು
ಮಡಿಕೇರಿಯ ಕೋಟೆಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ಶನಿವಾರ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಕೋಟೆ ಮಹಾಗಣಪತಿ ದೇವಾಲಯ ಸಮಿತಿಯ ಹರೀಶ್ ಅಣ್ವೇಕರ್ ಅವರಿಗೆ ಹಸ್ತಾಂತರ ಮಾಡಲಾಯಿತು   

ಮಡಿಕೇರಿ: ದಸರಾ ದಶಮಂಟಪಗಳಿಗೆ ಹಾಗೂ ಕರಗ ಸಮಿತಿಗಳಿಗೆ ಸರ್ಕಾರ ನೀಡುವ ಅನುದಾನವನ್ನು ಹೆಚ್ಚಿಸಬೇಕು ಎಂಬ ಒತ್ತಾಯ ಇಲ್ಲಿ ಶನಿವಾರ ನಡೆದ ದಸರಾ ದಶಮಂಟಪ ಸಮಿತಿ ಅಧಿಕಾರ ಹಸ್ತಾಂತರ ಕಾರ್ಯಕ್ರಮದಲ್ಲಿ ವ್ಯಕ್ತವಾಯಿತು.

ಇಲ್ಲಿನ ಕೋಟೆಮಾರಿಯಮ್ಮ ದೇವಾಲಯದ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ 2025-26ನೇ ಸಾಲಿಗೆ ದಸರಾ ದಶಮಂಟಪ ಸಮಿತಿಯ ಅಧಿಕಾರವನ್ನು ಸ್ವೀಕರಿಸಿದ ಕೋಟೆ ಮಹಾಗಣಪತಿ ದೇವಾಲಯ ಸಮಿತಿಯ ಹರೀಶ್ ಅಣ್ವೇಕರ್ ಈ ಮನವಿ ಮಾಡಿದರು.

‘ಒಂದು ಮಂಟಪ ನಿರ್ಮಾಣಕ್ಕೆ ಕನಿಷ್ಠ ಎಂದರೂ ₹ 30 ಲಕ್ಷಕ್ಕೂ ಹೆಚ್ಚು ಹಣ ಖರ್ಚಾಗುತ್ತದೆ. ಸರ್ಕಾರದಿಂದ ಬರುವ ಅನುದಾನದಲ್ಲಿ ನಮಗೆ ದಸರಾ ನಡೆಸುವುದು ತುಂಬಾ ಕಷ್ಟ. ಹೀಗಾಗಿ, ಸರ್ಕಾರ ಮಂಟಪಗಳಿಗೆ ಕನಿಷ್ಠ ಎಂದರೂ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು. ಈ ಅನುದಾನ ತರುವ ಪಯತ್ನದಲ್ಲಿ ಇತರೆ ಎಲ್ಲಾ ಸಮಿತಿಗಳು ಸಹಕಾರ ನೀಡಬೇಕು’ ಎಂದು ಕೋರಿದರು.

ADVERTISEMENT

‘ಹಿಂದೆ ಇದ್ದ ಹಲವು ಅಧ್ಯಕ್ಷರು ಹಾಗೂ ಸಮಿತಿಗಳು ದಸರಾವನ್ನು ಬಹಳ ಅಚ್ಚುಕಟ್ಟಾಗಿ ನಡೆಸಿಕೊಂಡು ಬಂದಿದ್ದಾರೆ. ಈ ಬಾರಿ ನಮ್ಮ ಮೇಲೆ ನಂಬಿಕೆ ಇಟ್ಟು ದೊಡ್ಡ ಸ್ಥಾನವನ್ನು ನೀಡಿದ್ದಾರೆ. ಅದನ್ನು ಜವಾಬ್ದಾರಿಯುತವಾಗಿ ಮಾಡುವುದು ನಮ್ಮ ಕರ್ತವ್ಯ‌’ ಎಂದರು.

ಕೋಟೆಮಾರಿಯಮ್ಮ ದೇವಾಲಯದ ಯುವಕ ಮಿತ್ರ ಮಂಡಳಿ ನೂತನ ಅಧ್ಯಕ್ಷ ಬಿ.ಕೆ.ಜಗದೀಶ್ ಅವರೂ ಈ ಬೇಡಿಕೆಗೆ ದನಿಗೂಡಿಸಿದರು.

‘ಈ ಬಾರಿ ಮಡಿಕೇರಿ ದಸರೆಗೆ ₹ 2 ಕೋಟಿಗೂ ಹೆಚ್ಚು ಅನುದಾನ ತರುವ ಪ್ರಯತ್ನ ಮಾಡಲೇಬೇಕು. ಅದರಲ್ಲಿ ದಶಮಂಟಪ ಸಮಿತಿಗಳಿಗೆ ₹ 5 ಲಕ್ಷ ಹಾಗೂ ಕರಗ ಸಮಿತಿಗಳಿಗೆ ₹ 3 ಲಕ್ಷ ಅನುದಾನ ನೀಡಬೇಕು’ ಎಂದು ಒತ್ತಾಯಿಸಿದರು.

ಮೈಸೂರು ದಸರಾ ಹೊರತುಪಡಿಸಿದರೆ ಕೊಡಗಿನ ದಸರೆಯೇ ದೇಶದಲ್ಲಿ ಪ್ರಾಮುಖ್ಯತೆ ಪಡೆದಿದೆ. ಮಡಿಕೇರಿ ದಸರೆಗೆ ದೇಶ, ವಿದೇಶ, ರಾಜ್ಯ, ಹೊರ ರಾಜ್ಯಗಳಿಂದ ಲಕ್ಷಾಂತರ ಜನರು ಬಂದು ಐತಿಹಾಸಿಕ ದಸರೆಯನ್ನು ವೀಕ್ಷಿಸುತ್ತಾರೆ. ಇಂತಹ ಮಹತ್ವದ ದಸರೆಗೆ ಹೆಚ್ಚಿನ ಅನುದಾನ ನೀಡಬೇಕು ಎಂದು ಪ್ರತಿಪಾದಿಸಿದರು.

ಕೋಟೆಮಾರಿಯಮ್ಮ ದಶಮಂಟಪ ಸಮಿತಿ ಮಾಜಿ ಅಧ್ಯಕ್ಷ ಜಿ.ಸಿ.ಜಗದೀಶ್ ಮಾತನಾಡಿ, ‘ಈ ಬಾರಿ ಕೋಟೆ ಮಾರಿಯಮ್ಮ ದೇವಾಲಯದ ಮಂಟಪ ಸಮಿತಿಯು 50 ವರ್ಷದ ಸಂಭ್ರಮದಲ್ಲಿ ಇದ್ದು, ಈ ಬಾರಿಯೂ ಬಹಳ ವಿಜೃಂಭಣೆಯಿಂದ ದಸರಾ ನಡೆಸಲು ತಿರ್ಮಾನಿಸಿದ್ದೇವೆ’ ಎಂದರು.

‘ನಮ್ಮ ಅಧಿಕಾರದ ಸಮಯದಲ್ಲಿ ಎದುರಾಗಿದ್ದ ಸಾಕಷ್ಟು ಗೊಂದಲಗಳು, ಸವಾಲುಗಳನ್ನು ಬಗೆಹರಿಸಿ ದಸರಾ ನಡೆಸಿದ್ದೇವೆ. ಮಡಿಕೇರಿ ದಸರೆ ಕಳೆಗುಂದದಂತೆ ನೋಡಿಕೊಂಡು, ಗತಕಾಲದ ವೈಭವ ಮತ್ತೆ ಮರುಕಳಿಸುವಂತೆ ಮಾಡಬೇಕು. ಕಳೆದ ಬಾರಿ ನಮಗೆ ಇದರ ಜವಾಬ್ದಾರಿ ಇದ್ದು ಸುಸೂತ್ರವಾಗಿ ನಡೆಸಿದ್ದೇವೆ. ಈ ಬಾರಿ ಕೋಟೆ ಮಹಾಗಣಪತಿ ದೇವಾಲಯ ಸಮಿತಿಗೆ ಜವಾಬ್ದಾರಿ ಸಿಕ್ಕಿದೆ’ ಎಂದು ಹೇಳಿದರು.

‘ಕಳೆದ ಬಾರಿ ಶಾಸಕ ಡಾ.ಮಂತರ್‌ಗೌಡ ಅವರ ಸಹಕಾರದಿಂದ ಉತ್ತಮ ಅನುದಾನ ತರಲು ಸಾಧ್ಯವಾಯಿತು. ದಸರೆಯ ಯಶಸ್ಸಿಗೆ ಎಲ್ಲರೂ ಶ್ರಮ ಹಾಕೋಣ’ ಎಂದು ಕಾರ್ಯಾಧ್ಯಕ್ಷ ಪ್ರಕಾಶ್ ಆಚಾರ್ಯ ಹೇಳಿದರು.

ಮುಖಂಡರಾದ ಸುಕುಮಾರ್, ಡಿಶು, ಸದಾಮುದ್ದಪ್ಪ, ಮಂಜುನಾಥ್, ಪ್ರಭು ರೈ ದಶಮಂಟಪ ಸಮಿತಿಗಳ ಅಧ್ಯಕ್ಷರು, ಪದಾಧಿಕಾರಿಗಳು ಹಾಗೂ ಸಮಿತಿ ಪ್ರಮುಖರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.