ADVERTISEMENT

ಬೆಳಕಿನ ಹೊಳೆಯಲ್ಲಿ ತೇಲಿದ ಮಂಟಪಗಳು: ನಾಡಿನ ದಸರೆಗೆ ಮಡಿಕೇರಿಯಲ್ಲಿ ತೆರೆ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2025, 16:46 IST
Last Updated 2 ಅಕ್ಟೋಬರ್ 2025, 16:46 IST
   

ಮಡಿಕೇರಿ: ‘ಬೆಳಕಿನ ದಸರೆ’ ಎಂದೇ ಹೆಸರಾದ ಇಲ್ಲಿನ ದಸರಾ ದಶಮಂಟಪಗಳ ಶೋಭಾಯಾತ್ರೆಯು ನಾಡಿನ ದಸರೆಗೆ ಸಂಭ್ರಮದ ತೆರೆ ಎಳೆಯಿತು.

‘ದಸರೆಯ ಆರಂಭ ಮೈಸೂರಿನಲ್ಲಾದರೆ ಅದರ ಸಮಾರೋಪ ಮಡಿಕೇರಿಯಲ್ಲಿ’ ಎಂಬ ಮಾತಿನಂತೆ ಮೈಸೂರಿನ ಜಂಬೂಸವಾರಿ ಮುಗಿಯುತ್ತಿದ್ದಂತೆ ತಂಡೋಪತಂಡವಾಗಿ ಜನರು ‘ಮಂಜಿನ ನಗರಿ’ಗೆ ಆಗಮಿಸಿದರು. ಇಲ್ಲಿ ಬೀಳುತ್ತಿದ್ದ ತುಂತುರು ಮಳೆ ಹನಿ, ಬೀಸುತ್ತಿದ್ದ ಶೀತಗಾಳಿ, ಆವರಿಸಿದ್ದ ಚಳಿಯ ನಡುವೆ ಸಾಗಿದ ಮಂಟಪಗಳನ್ನು ಕಣ್ತುಂಬಿಕೊಂಡರು.

ಮೊದಲಿಗೆ ಪೇಟೆ ಶ್ರೀರಾಮಮಂದಿರವು ‘ಕೃಷ್ಣನಿಂದ ಗೀತೋಪದೇಶ’ ಎಂಬ ಕಥಾಹಂದರವನ್ನಿಟ್ಟುಕೊಂಡು ರೂಪಿಸಲಾದ ಮಂಟಪದೊಂದಿಗೆ ಶೋಭಾಯಾತ್ರೆಗೆ ಮೊದಲಾಯಿತು. ಈ ಮಂಟಪದ ಕಲಾಕೃತಿ ಹಾಗೂ ಬೆಳಕಿನ ವಿನ್ಯಾಸ ಕಂಡ ಜನರು ನಿಂತಲ್ಲೇ ಕೈ ಮುಗಿದರು.

ADVERTISEMENT

ಒಟ್ಟು ಹತ್ತು ಮಂಟಪಗಳು ಒಂದೊಂದು ಪೌರಾಣಿಕ ಕಥಾವಸ್ತುವನ್ನು ಪ್ರದರ್ಶಿಸಿದವು. ಕಲಾಕೃತಿಗಳ ಚಲನವಲನ, ಬೆಳಕಿನ ವಿನ್ಯಾಸ, ಕಥಾಹಂದರಗಳನ್ನು ಜನರು ನೋಡಿ ಸಂಭ್ರಮಿಸಿದರು. ರಾತ್ರಿ ಇಡೀ ಬೆಳಕು ತುಂಬಿದ ರಸ್ತೆಗಳಲ್ಲಿ ಮನಬಂದಂತೆ ಓಡಾಡುತ್ತಾ ಖುಷಿಪಟ್ಟರು.

‘ಇರುಳನ್ನೇ ಹಗಲಾಗಿಸುವ’ ತೆರದಿ ರಾತ್ರಿ ಇಡೀ ದಸರಾ ಮಂಟಪಗಳಲ್ಲಿ ನಡೆದ ವಿವಿಧ ಪೌರಾಣಿಕ ಕಥೆಗಳ ಪ್ರದರ್ಶನವನ್ನು ಲಕ್ಷಾಂತರ ಮಂದಿ ಕಣ್ತುಂಬಿಕೊಂಡರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.