ಮಡಿಕೇರಿ: ಮಡಿಕೇರಿ ಮತ್ತು ಗೋಣಿಕೊಪ್ಪಲಿನ ದಸರೆಯಲ್ಲಿ ಅಬ್ಬರದ ಸಂಗೀತದ ಡಿ.ಜೆ ಬಳಸುವುದರಿಂದ ಆಸ್ಪತ್ರೆಗಳಿಂದ ರೋಗಿಗಳನ್ನು ಸ್ಥಳಾಂತರ ಮಾಡಬೇಕಾಗುತ್ತದೆ, ವೃದ್ಧರು ಊರು ತೊರೆದು ಹೋಗಬೇಕಾಗುತ್ತದೆ, ನವಜಾತ ಶಿಶುಗಳು ಮತ್ತು ತಾಯಂದಿರು ಇನ್ನಿಲ್ಲದ ಪಡಿಪಾಟೀಲು ಅನುಭವಿಸುತ್ತಾರೆ. ಇಂತಹ ಡಿ.ಜೆಯನ್ನು ಬಳಕೆ ಮಾಡಬಾರದು ಎಂದು ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ರಾಮರಾಜನ್ ಇಲ್ಲಿ ಶನಿವಾರ ನಡೆದ ಪೂರ್ವಸಿದ್ಧತಾ ಸಭೆಯಲ್ಲಿ ಮನವಿ ಮಾಡಿದರು.
ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಎನ್.ಎಸ್.ಭೋಸರಾಜು ಅವರು ಪಾಲ್ಗೊಂಡಿದ್ದ ಸಭೆಯಲ್ಲಿ ಅವರು ಸುದೀರ್ಘವಾಗಿ ಈ ವಿಚಾರ ಕುರಿತೇ ಮಾತನಾಡಿ ಗಮನ ಸೆಳೆದರು.
ಶುಕ್ರವಾರ ರಾತ್ರಿಯಷ್ಟೇ ಮೂರ್ನಾಡು ಗ್ರಾಮದಲ್ಲಿ ಗಣಪತಿ ವಿಸರ್ಜನೆ ಸಂದರ್ಭದಲ್ಲಿ ಹಾಕಲಾಗಿದ್ದ ಡಿ.ಜೆಯಿಂದ ನವಜಾತ ಶಿಶುವಿಗೆ ಹಾಗೂ ಆಕೆಯ ತಾಯಿಗೆ ತೊಂದರೆಯಾಗಿತ್ತು. ಇಂತಹ ಭಯಂಕರ ಶಬ್ದದ ಡಿ.ಜೆ. ಬೇಕಾಗಿದೆಯೇ ಎಂದೂ ಪ್ರಶ್ನಿಸಿದರು.
ಮಡಿಕೇರಿ ಮತ್ತು ಗೋಣಿಕೊಪ್ಪಲಿನ ದಸರೆಯಲ್ಲಿ ಕೊಡಗಿನ ಸ್ಥಳೀಯ ಹಾಗೂ ಗತ ಕಾಲದ ಸಂಸ್ಕೃತಿಯನ್ನು ಬಿಂಬಿಸುವ ವಾದ್ಯಗಳು, ಕಲಾತಂಡಗಳು ಇರಲಿ. ಅದನ್ನು ಬಿಟ್ಟು ಪಾಶ್ಚಾತ್ಯ ಸಂಸ್ಕೃತಿಯನ್ನು ಬಿಂಬಿಸುವ ಡಿ.ಜೆ ಬೇಡ ಎಂದು ಕಿವಿಮಾತು ಹೇಳಿದರು.
ಅವೈಜ್ಞಾನಿಕವಾದ ಮಂಟಪಗಳ ರಚನೆಯಿಂದ ಇದುವರೆಗೂ ಯಾವುದೇ ಅನಾಹುತ ಆಗಿಲ್ಲ ಎಂದರೆ ಅದು ಅದೃಷ್ಟ ಎಂದೇ ಭಾವಿಸಬೇಕು. ತೀರಾ ಕಡಿದಾದ, ಎತ್ತರ ತಗ್ಗಿನ ರಸ್ತೆಯಲ್ಲಿ ಸಾಗುವ ಮಂಟಪಗಳ ಗಾತ್ರಕ್ಕೆ ಮಿತಿ ಇರಬೇಕು. ಯಾವುದೇ ಕಾರಣಕ್ಕೂ ಸುರಕ್ಷತೆ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂದು ಸ್ಪಷ್ಟಪಡಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.