ADVERTISEMENT

ಮಡಿಕೇರಿಯಲ್ಲಿ ಸಾಂಸ್ಕೃತಿಕ ದಿಬ್ಬಣ ಆರಂಭ

ಮೊದಲ ದಿನವೇ ಗಾನ, ನೃತ್ಯಗಳಿಂದ ರಂಜಿಸಿದ ಕಲಾವಿದರು

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2025, 5:05 IST
Last Updated 24 ಸೆಪ್ಟೆಂಬರ್ 2025, 5:05 IST
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಶಾಲನಗರ ನೃತ್ಯ ಲಹರಿ ತಂಡದವರು ಮಹಿಷಮರ್ಧನಿ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಶಾಲನಗರ ನೃತ್ಯ ಲಹರಿ ತಂಡದವರು ಮಹಿಷಮರ್ಧನಿ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು   

ಮಡಿಕೇರಿ: ಈ ವರ್ಷ ದಸರಾ ಕಾರ್ಯಕ್ರಮಗಳಲ್ಲಿ ನಿತ್ಯವೂ ವೇದಿಕೆ ಕಾರ್ಯಕ್ರಮ ಬೇಡ. ಶಾಲು, ಹಾರ, ತುರಾಯಿಗಾಗಿ ಹಣ ವ್ಯಯಿಸುವುದು ಬೇಡ ಎಂದು ಶಾಸಕ ಡಾ.ಮಂತರ್‌ಗೌಡ ಕಿವಿಮಾತು ಹೇಳಿದರು.

ಇಲ್ಲಿನ ಗಾಂಧಿ ಮೈದಾನದಲ್ಲಿ ಮಂಗಳವಾರ ಅವರು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉದ್ಘಾಟಿಸಿ ಮಾತನಾಡಿದರು.

ಪ್ರತಿ ವರ್ಷ ಅದ್ದೂರಿಯಾಗಿ ದಸರೆ ಆಗಬೇಕು ಎನ್ನುವುದು ಎಲ್ಲರ ಆಸೆ. ಎಲ್ಲಿ ಖರ್ಚು ಕಡಿಮೆಯಾಗಬಹುದೊ ಅಷ್ಟು ಕಡಿಮೆ ಮಾಡಿ ಎಂದು ಸಲಹೆ ನೀಡಿದರು.

ADVERTISEMENT

ವೇದಿಕೆ ಕಾರ್ಯಕ್ರಮ ಕಡಿಮೆ ಮಾಡಿ. ಜನರು ಬರುವುದು ಸಾಂಸ್ಕೃತಿಕ ಕಾರ್ಯಕ್ರಮ ನೋಡುವುದಕ್ಕೆ. ಮಂಟಪಗಳ ಶೋಭಾಯಾತ್ರೆಯಲ್ಲಿ ಅಪಘಾತವಾಗದಂತೆ ನಿಗಾ ವಹಿಸಿ, ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದರು.

ಮಾಜಿ ಶಾಸಕ ಎಂ.ಪಿ.ಅಪ್ಪಚ್ಚುರಂಜನ್ ಮಾತನಾಡಿ, ‘ಬಿ.ಎಸ್.ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದಾಗ ಮೊದಲು ಮಡಿಕೇರಿ ದಸರೆಗೆ ₹ 10 ಲಕ್ಷ ಕೊಟ್ಟರು. ಮುಂದಿನ ದಿನಗಳಲ್ಲಿ ಸರ್ಕಾರ ಇನ್ನಷ್ಟು ಹಣ ನೀಡಬೇಕು’ ಎಂದು ಒತ್ತಾಯಿಸಿದರು.

ಕಾಫಿ ದಸರೆ ಇರುವುದು ಸಂತಸವಾಯಿತು. ಕಾಫಿ ಬೆಳೆಗಾರರಿಗೆ ಪ್ರೋತ್ಸಾಹ ಕೊಟ್ಟಂತಾಗಿದೆ. ಎಲ್ಲರಿಗೂ ಅವಕಾಶ ನೀಡುವಂತಹ ಕಾರ್ಯಕ್ರಮಗಳು ನಡೆಯಲಿ ಎಂದರು.

ಅನುದಾನ ಕಡಿಮೆ; ಬೇಸರ

ಇದಕ್ಕೂ ಮುನ್ನ ಮಾತನಾಡಿದ ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ‘ಅನುದಾನ ತೀರಾ ಕಡಿಮೆ ಸಿಕ್ಕಿದೆ. ಅನುದಾನದ ಮಿತಿಯೊಳಗೆ ಕಾರ್ಯಕ್ರಮ ಮಾಡುವಂತಹ ಇಕ್ಕಟ್ಟಿನ ಸ್ಥಿತಿ ನಿರ್ಮಾಣವಾಗಿದೆ. ಇದರಿಂದಾಗಿ ದೊಡ್ಡ ದೊಡ್ಡ ಕಲಾವಿದರನ್ನು ಕೈಬಿಡುವ ಸ್ಥಿತಿ ಎದುರಾಗಿದೆ’ ಎಂದು ಅಸಹಾಯಕತೆ ವ್ಯಕ್ತಪಡಿಸಿದರು.

ಮಡಿಕೇರಿ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್‌ಕುಮಾರ್ ಸಹ ಇದಕ್ಕೆ ದನಿಗೂಡಿಸಿದರು. ‘₹1.5 ಕೋಟಿ ಕೊಟ್ಟರೂ ಸಾಲದಾಗಿದೆ. ಮೈಸೂರು ದಸರೆಗೆ ಹೆಚ್ಚು ಹಣ ಕೊಡಲಾಗುತ್ತಿದೆ. ನಮಗೆ ಕೊಡುವ ಹಣ ಯಾವುದಕ್ಕೂ ಸಾಲದು. ಕನಿಷ್ಠ ₹ 2 ಕೋಟಿ ಅನುದಾನ ಬೇಕು’ ಎಂದು ಒತ್ತಾಯಿಸಿದರು.

ಜಿಲ್ಲಾಧಿಕಾರಿ ವೆಂಕಟ್ ರಾಜಾ ಮಾತನಾಡಿ, ‘ಮಡಿಕೇರಿ ದಸರೆಗೆ ಅಕ್ಕಪಕ್ಕದ ಜಿಲ್ಲೆಗಳಿಂದ ಜನರು ಬರುತ್ತಾರೆ. ಪ್ರತಿ ವರ್ಷ ಇನ್ನೂ ಅರ್ಥಪೂರ್ಣವಾಗಿ ಕಾರ್ಯಕ್ರಮ ಮಾಡಬೇಕು. ನಮ್ಮ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಕೊಡಬೇಕು’ ಎಂದರು.

ಮಡಿಕೇರಿ ನಗರಸಭೆ ಅಧ್ಯಕ್ಷೆ ಕಲಾವತಿ ಶುಭ ಹಾರೈಸಿದರು.

ಆರಂಭದಲ್ಲಿ ವೇದಿಕೆಯಲ್ಲಿ ವಿಜಯ ವಿನಾಯಕ ದೇಗುಲದ ಪ್ರಧಾನ ಅರ್ಚಕ ಕೃಷ್ಣಭಟ್ ಅವರು ಪೂಜೆ ನೆರವೇರಿಸಿದರು.

ಉಪವಿಭಾಗಾಧಿಕಾರಿ ನಿತಿನ್ ಚಕ್ಕಿ, ಮಡಿಕೇರಿ ನಗರ ದಸರಾ ಸಮಿತಿಯ ಗೌರವ ಸಲಹೆಗಾರ ಚಿದ್ವಿಲಾಸ್, ಉಪಾಧ್ಯಕ್ಷ ಮಹೇಶ್ ಜೈನಿ, ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ,  ದಶಮಂಟಪ ಸಮತಿ ಅಧ್ಯಕ್ಷ ಬಿ.ಎಂ.ಹರೀಶ್, ನಗರಸಭೆ ಸದಸ್ಯೆ ಸಬಿತಾ, ವಾರ್ತಾ ಮತ್ತು ಪ್ರಚಾರ ಇಲಾಖೆಯ ಸಹಾಯಕ ನಿರ್ದೇಶಕ ಚಿನ್ನಸ್ವಾಮಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ  ಕುಮಾರ್ ಭಾಗವಹಿಸಿದ್ದರು.

ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕುಶಾಲನಗರದ ನೃತ್ಯ ಲಹರಿ ತಂಡದವರು ‘ಮಹಿಷಮರ್ಧನಿ’ ನೃತ್ಯರೂಪಕವನ್ನು ಪ್ರಸ್ತುತಪಡಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಶಾಸಕ ಡಾ.ಮಂತರ್‌ಗೌಡ ಉದ್ಘಾಟಿಸಿದರು
ಮಡಿಕೇರಿಯ ಗಾಂಧಿ ಮೈದಾನದಲ್ಲಿ ಮಂಗಳವಾರ ನಡೆದ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಅನ್ವಿತ್ ಮತ್ತು ಪ್ರಜ್ಞಾ ಮರಾಠೆ ತಂಡದವರು ಹಾಡುಗಳನ್ನು ಹಾಡಿ ರಂಜಿಸಿದರು

Highlights - ಮೊದಲ ದಿನವೇ ತಡವಾದ ಕಾರ್ಯಕ್ರಮ ಪ್ರೇಕ್ಷಕರಿಗೆ ನೀರಸ ಪ್ರತಿಕ್ರಿಯೆ ಕುರ್ಚಿಗಳೆಲ್ಲವೂ ಖಾಲಿ ಖಾಲಿ

Cut-off box - ಮೊದಲ ದಿನವೇ ಮನ ಸೆಳೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಮೈಸೂರಿನ ನೃತ್ಯ ನಿರಂತರ ಟ್ರಸ್ಟ್‌ ವತಿಯಿಂದ ವಿಶೇಷ ಚೇತನ ಮಕ್ಕಳು ನೃತ್ಯ ವೈವಿಧ್ಯ ಪ್ರದರ್ಶಿಸಿ ಜನಮನ ಸೂರೆಗೊಂಡರು. ಈ ಮೂಲಕ ಮೊದಲ ದಿನವೇ ಸಾಂಸ್ಕೃತಿಕ ಕಾರ್ಯಕ್ರಮಗಳ ರಸದೌತಣವನ್ನು ಪ್ರೇಕ್ಷಕರಿಗೆ ಕಲಾವಿದರು ಒದಗಿಸಿತು. ಕುಶಾಲನಗರದ ‘ನೃತ್ಯ ಲಹರಿ’ ತಂಡದವರು ಪ್ರಸ್ತುತಪಡಿಸಿದ ಮಹಿಷಮರ್ಧಿನಿಯ ನ್ಯತ್ಯ ರೂಪಕ ಗಮನ ಸೆಳೆಯಿತು. ನಂತರ ಅನ್ವಿತ್ ಮತ್ತು ಪ್ರಜ್ಞಾ ಮರಾಠೆ ಅವರು ‘ಗಜವದನ ಹೇರಂಬಾ’ ಹಾಡಿನೊಂದಿಗೆ ಗಾಯನ ಕಾರ್ಯಕ್ರಮ ಆರಂಭಿಸಿದರು. ಅವರು ಹಾಡಿದ ‘ಸಿಂಗಾರ ಸಿರಿಯೇ...’ ಹಾಡಿಗೆ ಪ್ರೇಕ್ಷಕರು ತಲೆದೂಗಿದರು. ಇದಕ್ಕೂ ಮುನ್ನ ‘ಹೇರಂಬಾ ನಿನಗೆ ವಂದನೆ ಆರಂಭದಲ್ಲಿ ನಿನ್ನ ಆರಾಧನೆ’ ಎಂದು ವಿದ್ಯಾರ್ಥಿನಿ ಪ್ರಗತಿ ವೇದಿಕೆಯ ಮೇಲೆ ಪ್ರಾರ್ಥಿಸುವ ಮೂಲಕ ಇಡೀ ಕಾರ್ಯಕ್ರಮ ಆರಂಭಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.