
ಮಡಿಕೇರಿ: ಒಂದೇ ದಿನ ಭಾನುವಾರ ಇಲ್ಲಿನ ರಾಜಾಸೀಟ್ ಉದ್ಯಾನಕ್ಕೆ ಭೇಟಿ ನೀಡಿದವರು 13,821 ಮಂದಿ. ಶನಿವಾರ 11 ಸಾವಿರಕ್ಕೂ ಅಧಿಕ ಮಂದಿ ಭೇಟಿ ನೀಡಿದ್ದರು. ಎರಡು ದಿನಗಳಲ್ಲಿ ಫಲಪುಷ್ಪ ಪ್ರದರ್ಶನ ವೀಕ್ಷಿಸಿದವರು 24 ಸಾವಿರಕ್ಕೂ ಅಧಿಕ.
ಭಾನುವಾರವಂತೂ ಜನಜಂಗುಳಿ ಅಪಾರವಾಗಿತ್ತು. ಪುಟ್ಟದಾದ ಉದ್ಯಾನದೊಳಗೆ ಒಮ್ಮೆಗೆ ಸಾವಿರಾರು ಮಂದಿ ಪ್ರವೇಶಿಸಿದರು. ಒಳಗೆ ಬಿಡಲು ಸಾಲುಗಟ್ಟಿ ನಿಲ್ಲಿಸಿ ನಿಧಾನವಾಗಿ ಒಳಬಿಡಲಾಗುತ್ತಿತ್ತು.
ಸಂಗೀತ ಕಾರಂಜಿ ಆರಂಭಿಸಿದ ಬಳಿಕವಂತೂ ಕಾರಂಜಿಯ ಸುತ್ತಲೂ ಅಪಾರ ಸಂಖ್ಯೆಯ ಜನರು ಸೇರಿದರು. ಇದರಿಂದ ತಾತ್ಕಾಲಿಕವಾಗಿ ಸ್ವಲ್ಪ ಹೊತ್ತು ನಿಲ್ಲಿಸಲಾಯಿತು.
ಸೂರ್ಯಾಸ್ತ ವೀಕ್ಷಣೆಗಂತೂ ಬೆಟ್ಟದ ತುದಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರು. ಸೂಯಾಸ್ತದ ಕೌತುಕದ ಕ್ಷಣಗಳನ್ನು ತಮ್ಮ ಮೊಬೈಲ್‌ನಲ್ಲಿ ಸೆರೆ ಹಿಡಿಯಲು ಸಾವಿರಾರು ಮಂದಿ ಸೇರಿದ್ದರು. ಆಗಾಗ್ಗೆ ಕವಿಯುತ್ತಿದ್ದ ಮೋಡಗಳು ಇವರ ಸಂಭ್ರಮಕ್ಕೆ ತಣ್ಣೀರೆರಚಿದರೂ, ಸೂರ್ಯಾಸ್ತದ ದೃಶ್ಯ ಅಂತಿಮ ಕ್ಷಣದಲ್ಲಿ ಕಾಣ ಸಿಕ್ಕಿತು. ಸೂರ್ಯಾಸ್ತದ ನಂತರ ದೂರದ ಬೆಟ್ಟದಲ್ಲಿ ಕವಿಯುತ್ತಿದ್ದ ಕತ್ತಲು, ಅದರಲ್ಲಿ ಹತ್ತಿಯ ಉಂಡೆಯಂತೆ ತೇಲಿ ಬರುತ್ತಿದ್ದ ಮೋಡಗಳನ್ನು ಪ್ರವಾಸಿಗರು ಮನಸಾರೆ ಕಂಡು ಪುಳಕಿತರಾದರು.
ರಾಜಾಸೀಟ್‌ಗೆ ಪ್ರವಾಹದಂತೆ ಹರಿದು ಬಂದ ಜನಸ್ತೋಮದಿಂದ ಅದರ ಸುತ್ತಮುತ್ತಲ ಪ್ರದೇಶದಲ್ಲಿ ಸಂಚಾರ ದಟ್ಟಣೆ ಉಂಟಾಯಿತು. ರಾಜಾಸೀಟ್ ಮುಂದಿದ್ದ ಅಂಗಡಿಗಳ ಮುಂದೆ ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಸಂಚಾರ ದಟ್ಟಣೆ ಹೆಚ್ಚಾಯಿತು. ಸಾಲುಗಟ್ಟಿ ವಾಹನಗಳು ನಿಂತಿದ್ದ ದೃಶ್ಯಗಳು ಕಂಡು ಬಂದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.