ಮಡಿಕೇರಿ: ಇಲ್ಲಿನ ಗಾಂಧಿ ಮೈದಾನದಲ್ಲಿ ಸೋಮವಾರ ಬರೋಬರಿ 40ಕ್ಕೂ ಅಧಿಕ ಕಲಾತಂಡಗಳು ವೈವಿಧ್ಯಮಯವಾದ ಜಾನಪದ ಕಲೆಗಳನ್ನು ಪ್ರದರ್ಶಿಸಿ ಜನಮಾನಸವನ್ನು ಸೂರೆಗೊಂಡವು.
ಆದಿವಾಸಿ ನೃತ್ಯ, ಬೊಳಕಾಟ್, ಉಮ್ಮತ್ತಾಟ್‌ನಂತಹ ಕೊಡಗಿನ ಜನಪದ ನೃತ್ಯಗಳೊಂದಿಗೆ ಚಂಡೆ, ಡೊಳ್ಳು ಕುಣಿತ, ವೀರಗಾಸೆಯಂತಹ ಜನಪದ ಕಲೆಗಳೂ ಪ್ರದರ್ಶನಗೊಂಡವು. ಜನಪದ ಗೀತ ಗಾಯನಗಳು ಮಂತ್ರಮುಗ್ದಗೊಳಿಸಿದವು. ಈ ಎಲ್ಲ ಕಾರ್ಯಕ್ರಮಗಳಿಗೆ ಸಾಕ್ಷಿಯಾಗಿದ್ದು, ಇಲ್ಲಿ ಸೋಮವಾರ ನಡೆದ ಜಾನಪದ ದಸರೆ.
ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ಹಾಗೂ ಕೊಡಗು ಜಾನಪದ ಪರಿಷತ್ ವತಿಯಿಂದ ಇಲ್ಲಿ ನಡೆದ 5ನೇ ವರ್ಷದ ಜಾನಪದ ದಸರೆಯು ನೂರಾರು ಕಲಾವಿದರಿಗೆ ವೇದಿಕೆಯಾಯಿತು. ದೂರದ ಮೈಸೂರಿನಿಂದ, ರಾಮನಗರದಿಂದ ಕಲಾವಿದರು ಬಂದು ತಮ್ಮ ತಮ್ಮ ಕಲೆಗಳನ್ನು ಪ್ರದರ್ಶಿಸಿ ಸೈ ಎನಿಸಿಕೊಂಡರು.
ರಾಮನಗರದ ಪಾರ್ಥಸಾರಥಿ ಮತ್ತು ತಂಡ ಡೊಳ್ಳು ಕುಣಿತ ಮತ್ತು ವೀರಗಾಸೆ ಕುಣಿತಗಳು, ವಿರಾಜಪೇಟೆ ಜಾನಪದ ಘಟಕದಿಂದ ಚಂಡೆ ವಾದ್ಯಗಳು ಬಹುವಾಗಿ ಆಕರ್ಷಿಸಿದವು. ಜೊತೆಗೆ, ಕೊಡಗು ಜಿಲ್ಲೆಯ ಸಮರ್ಥ ಕನ್ನಡಿಗರು ಸಂಸ್ಥೆಯ ಜಯಲಕ್ಷ್ಮಿ ಮತ್ತು ತಂಡದವರು ಹಾಡಿದ ‘ಕೋಲು ಕೋಲು ಕುಣಿದವೇ’ ಜನಪದ ಹಾಡು ಸೇರಿದಂತೆ ಅನೇಕ ಕಲಾವಿದರ ಜನಪದ ಹಾಡುಗಳು ಹಾಗೂ ಸಮೂಹ ಗಾನಗಳು ಪ್ರೇಕ್ಷಕರು ಗಾನದ ಅಲೆಯಲ್ಲಿ ತೇಲುವಂತೆ ಮಾಡಿತು. ಮೈಸೂರು ಕೊಡವ ಸಮಾಜದವರೂ ಇಲ್ಲಿ ವಿವಿಧ ಬಗೆಯ ಜನಪದ ಕಲೆಗಳನ್ನು ಪ್ರದರ್ಶಿಸಿದರು.
ಇದಕ್ಕೂ ಮುನ್ನ, ಜನರಲ್ ತಿಮ್ಮಯ್ಯ ವೖತ್ತದ ಬಳಿಯ ಸರ್ಕಾರಿ ಅತಿಥಿಗೃಹದ ಆವರಣದಿಂದ ಮೈದಾನದವರೆಗೂ ಕಲಾ ಜಾಥಾ ನಡೆಯಿತು. ಮೈದಾನದಲ್ಲಿ ಪೊನ್ನಚ್ಚನ ಮಧೂಸೂದನ್ ಅವರ ಸಂಗ್ರಹದಲ್ಲಿನ ಜಾನಪದ ವಸ್ತುಗಳ ಪ್ರದರ್ಶನ ನೋಡುಗರನ್ನು ಅಚ್ಚರಿಗೆ ತಳ್ಳಿತು.
ಜಾನಪದ ದಸರೆಯನ್ನು ಶಾಸಕ ಎ.ಎಸ್.ಪೊನ್ನಣ್ಣ ಉದ್ಘಾಟಿಸಿದರು. ನಗರಸಭೆ ಅಧ್ಯಕ್ಷೆ ಪಿ.ಕಲಾವತಿ, ಉಪಾಧ್ಯಕ್ಷ ಮಹೇಶ್ ಜೈನಿ, ನಗರ ದಸರಾ ಸಮಿತಿ ಕಾರ್ಯಾಧ್ಯಕ್ಷ ಬಿ.ಕೆ.ಅರುಣ್ ಕುಮಾರ್, ದಸರಾ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್, ಜಾನಪದ ಪರಿಷತ್ತಿನ ತಾಲ್ಲೂಕು ಘಟಕದ ಅಧ್ಯಕ್ಷರಾದ ಚಂದ್ರಮೋಹನ್, ಪ್ರಕಾಶ್, ಟೋನಿ ಥಾಮಸ್, ಸುಜಲಾದೇವಿ, ಪ್ರಶಾಂತ್, ಸರ್ವೋದಯ ಸಮಿತಿ ಅಧ್ಯಕ್ಷ ಅಂಬೆಕಲ್ ಕುಶಾಲಪ್ಪ, ಕನ್ನಡ ಜಾಗೃತಿ ಸಮಿತಿ ಸದಸ್ಯ ಲೋಕೇಶ್ ಸಾಗರ್, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್, ಖಜಾಂಜಿ ಸಂಪತ್ ಕುಮಾರ್ ಭಾಗವಹಿಸಿದ್ದರು.
ಮಳೆಯ ನಡುವೆಯೂ ದಸರೆಗೆ ಉತ್ತಮ ಪ್ರತಿಕ್ರಿಯೆ ದೊರೆತಿದೆ. ಇದಕ್ಕೆ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡಿರುವುದೇ ಸಾಕ್ಷಿಯಾಗಿದೆ. ದಸರೆ ಜಾನಪದವನ್ನು ಉಳಿಸಿ ಬೆಳೆಸಿಕೊಂಡು ಹೋಗಬೇಕಿದೆಎ.ಎಸ್.ಪೊನ್ನಣ್ಣ ಮುಖ್ಯಮಂತ್ರಿಯ ಕಾನೂನು ಸಲಹೆಗಾರ
ಮಡಿಕೇರಿ ದಸರಾ ವರ್ಷದಿಂದ ವರ್ಷಕ್ಕೆ ವಿಜೃಂಭಣೆಯಿಂದ ನಡೆಯುತ್ತಿರುವುದು ವಿಶೇಷವಾಗಿದೆ. ಮಡಿಕೇರಿ ದಸರಾದಲ್ಲಿ ಜಾನಪದಕ್ಕೂ ಒತ್ತು ನೀಡಿರುವುದು ಶ್ಲಾಘನೀಯಸದಾನಂದ ಮಾವಜಿ ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಇಂದಿಗೂ ದುಷ್ಟ ಶಕ್ತಿಗಳಿವೆ. ಅವುಗಳು ನಾಶವಾದಾಗ ಮಾತ್ರ ಸ್ವಾಸ್ಥ್ಯ ಸಮಾಜ ಕಾಣಲು ಸಾಧ್ಯ. ಆ ಕಾರ್ಯ ಬೇಗ ಆಗಲಿಅಜ್ಜಿನಿಕಂಡ ಮಹೇಶ್ ನಾಚಯ್ಯ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ.
ಕೊಡಗು ಜಿಲ್ಲೆಯಲ್ಲಿ ‘ಜಾನಪದ ವಸ್ತು ಸಂಗ್ರಹಾಲಯಕ್ಕೆ’ ಜಾಗ ಒದಗಿಸಬೇಕು. ಇದರಿಂದ ಪ್ರವಾಸೋದ್ಯಮ ಅಭಿವೃದ್ಧಿಗೆ ಸಹಕಾರಿಯಾಗಲಿದೆಎಚ್.ಟಿ.ಅನಿಲ್ ಜಾನಪದ ದಸರಾ ಸಂಚಾಲಕ.
‘ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಜನಪದ ಸೃಷ್ಟಿ’
ಕೃಷಿಕ ಮಹಿಳೆ ಭಾಗೀರಥಿ ಹುಲಿತಾಳ ಮಾತನಾಡಿ ‘ಯಾವುದೇ ತಂತ್ರಜ್ಞಾನ ಇಲ್ಲದ ಕಾಲದಲ್ಲಿ ಜನಪದ ಸೃಷ್ಟಿಯಾಯಿತು ಉಳಿಯಿತು ಬೆಳೆಯಿತು’ ಎಂದರು. ರಾಗಿ ಬೀಸುವಾಗ ಕಳೆ ಕೀಳುವಾಗ ಜನರು ಹಾಡಿಕೊಳ್ಳುತ್ತಾ ಕಥೆ ಹೇಳುತ್ತಾ ಜನಪದವನ್ನು ಉಳಿಸಿ ಬೆಳೆಸಿದರು ಎಂದು ಹೇಳಿದರು. ಸಂಸ್ಕೃತದಲ್ಲಿ ‘ಪ್ರಸೀದ ಮಮಭಾಸ್ಕರ...’ ಎಂದು ಹೇಳಿದರೆ ಜನಪದರು ‘ಬೆಳಗಾಗ ನಾನೆದ್ದು ಯಾರಾರ ನೆನೆಯಲಿ...ಮುಂಗೋಳಿ ಕೂಗ್ಯಾವ... ಎಂದು ಹಾಡಿದರು. ತಾಯಿಗೆ ಜನಪದದಲ್ಲಿ ಪ್ರಾಧಾನ್ಯತೆ ನೀಡಿದರು ಎಂದು ಹಲವು ಜನಪದ ಗೀತೆಗಳನ್ನು ಉಲ್ಲೇಖಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.