ADVERTISEMENT

ಮಡಿಕೇರಿ ಕ್ಷೇತ್ರದ ಕಟ್ಟಕಡೆಯ ಗ್ರಾಮದ ಅಭಿವೃದ್ಧಿಗೆ ಪಣ: ಶಾಸಕ ಡಾ. ಮಂತರ್‌ಗೌಡ

ಕಡಮಕಲ್ಲು ಗ್ರಾಮಸ್ಥರ ಕುಂದುಕೊರತೆ ಆಲಿಸಿದ ಶಾಸಕರಾದ ಡಾ.ಮಂತರ್ ಗೌಡ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2025, 5:50 IST
Last Updated 16 ನವೆಂಬರ್ 2025, 5:50 IST
ಕಡಮಕಲ್ಲು ಗ್ರಾಮದ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಮಂತರ್‌ಗೌಡ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು
ಕಡಮಕಲ್ಲು ಗ್ರಾಮದ ರಸ್ತೆ ಅಭಿವೃದ್ಧಿಗೆ ಶಾಸಕ ಡಾ.ಮಂತರ್‌ಗೌಡ ಅವರು ಶನಿವಾರ ಭೂಮಿಪೂಜೆ ನೆರವೇರಿಸಿದರು   

ಮಡಿಕೇರಿ: ಮಡಿಕೇರಿ ವಿಧಾನಸಭಾ ಕ್ಷೇತ್ರದ ಕಟ್ಟಕಡೆಯ ಗ್ರಾಮ ಗಾಳಿಬೀಡು ಪಂಚಾಯಿತಿ ವ್ಯಾಪ್ತಿಯ ಕಡಮಕಲ್ ಗ್ರಾಮದ ಮೂಲಸೌಕರ್ಯ ಅಭಿವೃದ್ಧಿಗಾಗಿ ಸಂಕ್ಷಿಪ್ತ ವರದಿಯನ್ನು ವಾರದ ಒಳಗೆ ಸಲ್ಲಿಸಬೇಕು ಎಂದು ಅಧಿಕಾರಿಗಳಿಗೆ ಶಾಸಕ ಡಾ. ಮಂತರ್‌ಗೌಡ ಶನಿವಾರ ಸೂಚನೆ ನೀಡಿದರು.

ಕಂದಾಯ, ಗ್ರಾಮೀಣಾಭಿವೃದ್ಧಿ, ಅರಣ್ಯ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳೊಂದಿಗೆ ಸೇರಿ ಕಡಮಕಲ್ ನಿವಾಸಿಗಳೊಂದಿಗೆ ಕುಂದುಕೊರತೆ ಸಭೆ ನಡೆಸಿ ಜನರಿಂದ ಅವರು ಮಾಹಿತಿ ಪಡೆದರು.

ಶಾಸಕರು ಮನೆ ಮತ್ತು ಜಮೀನಿನ ದಾಖಲೆಗಳು, ಕುಡಿಯುವ ನೀರು ಸರಬರಾಜು, ಟ್ಯಾಂಕ್ ನಿರ್ಮಾಣ, ವಿದ್ಯುತ್ ವ್ಯವಸ್ಥೆ ಉನ್ನತೀಕರಣ, ರಸ್ತೆ ನಿರ್ಮಾಣ, ಅರಣ್ಯ ಇಲಾಖೆ ಮತ್ತು ಗ್ರಾಮದ ಗಡಿ ಗೊಂದಲಗಳ ನಿವಾರಣೆ ಹಾಗೂ ಪಡಿತರ ವಿತರಣೆಯ ಬಗ್ಗೆ ಚರ್ಚೆ ಮಾಡಿ ನಿಯಮಾನುಸಾರ ಕ್ರಮ ಜರುಗಿಸುವಂತೆ ಅಧಿಕಾರಿಗಳಿಗೆ ಅವರು ನಿರ್ದೇಶನ ನೀಡಿದರು.

ADVERTISEMENT

ಕಡಮಕಲ್ ಗ್ರಾಮದಲ್ಲಿ 200 ಜನಸಂಖ್ಯೆ ಇದ್ದು, ಬಹುತೇಕ ಕೂಲಿ ಕಾರ್ಮಿಕರೆ ವಾಸಿಸುತ್ತಿದ್ದಾರೆ. ಸುಳ್ಯ ಮೂಲಕ 80 ಕಿ.ಮೀ ಕ್ರಮಿಸಿ ಜಿಲ್ಲಾ ಕೇಂದ್ರ ಮಡಿಕೇರಿಗೆ ಬಂದು ಕೆಲಸ ಮಾಡಿಕೊಂಡು ಹೋಗುವುದು ಅಸಾಧ್ಯದ ಕೆಲಸವಾಗಿರುವುದರಿಂದ ಇಲ್ಲಿಯವರೆಗೆ ಯಾವುದೇ ಮೂಲಭೂತ ವ್ಯವಸ್ಥೆ ಸಮರ್ಪಕವಾಗಿಲ್ಲ ಎಂದು ಬೇಸರ ವ್ಯಕ್ತಗಪಡಿಸಿದರು.

ಸರ್ಕಾರದ ಸೌಲಭ್ಯ ಪಡೆಯುವುದು ಪ್ರತಿಯೊಬ್ಬ ನಾಗರಿಕನ ಮೂಲಭೂತ ಹಕ್ಕಾಗಿದ್ದು, ಅದನ್ನು ಒಬ್ಬ ಜನಪ್ರತಿನಿಧಿಯಾಗಿ ತಾವು ಒದಗಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ ಎಂದು ಭರವಸೆ ನೀಡಿದರು.

ಮುಖಂಡರಾದ ಎಚ್.ಎ.ಹಂಸ, ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ತೆನ್ನಿರ ಮೈನಾ, ವಲಯ ಅಧ್ಯಕ್ಷರಾದ ಸುಭಾಷ್ ಆಳ್ವ, ಪುಷ್ಪ ಪೂಣಚ್ಚ, ವಿ.ಜಿ.ಮೋಹನ್, ಕೋಚನ ಹರಿಪ್ರಸಾದ್, ಹಂಚೆಟ್ಟಿರ ಮನು ಮುದ್ದಪ್ಪ, ಅಪ್ರು ರವೀಂದ್ರ, ಕಿರಣ್, ರೋಷನ್ ಗಣಪತಿ, ಪ್ರಭುರೈ, ರವಿಗೌಡ ಸೇರಿದಂತೆ ಅಧಿಕಾರಿಗಳು ಗ್ರಾಮಸ್ಥರು ಭಾಗವಹಿಸಿದ್ದರು.

ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ನಿರ್ಮಾಣಕ್ಕೆ ಭೂಮಿಪೂಜೆ ₹ 3.50 ಕೋಟಿ ವೆಚ್ಚದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಮಡಿಕೇರಿ-ಗಾಳಿಬೀಡು-ಕಡಮಕಲ್ಲು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕ ಡಾ.ಮಂತರ್ ಗೌಡ ಭೂಮಿಪೂಜೆ ನೆರವೇರಿಸಿದರು. ಪ್ರಾಥಮಿಕ ಹಂತದಲ್ಲಿ 3.45 ಕಿ.ಮೀ. ವಿಸ್ತೀರ್ಣದ ರಸ್ತೆ ಅಭಿವೃದ್ಧಿಪಡಿಸಲಾಗುವುದು. ಈ ರಸ್ತೆಯ ಅಭಿವೃದ್ಧಿಗೆ ಹಲವು ವರ್ಷಗಳ ಬೇಡಿಕೆ ಇದೆ. ಪ್ರತಿ ಬಾರಿ ಇಲ್ಲಿಗೆ ಆಗಮಿಸಿದ ಸಂದರ್ಭ ಸ್ಥಳೀಯರು ಪ್ರಶ್ನಿಸುತ್ತಿದ್ದರು. ರಸ್ತೆ ಸಮಸ್ಯೆ ಪರಿಹಾರಕ್ಕೆ ಸರ್ಕಾರ ಅಗತ್ಯ ಅನುದಾನ ನೀಡಿದೆ. ಮುಂದಿನ ಜನವರಿ-ಫೆಬ್ರುವರಿ ವೇಳೆಗೆ ಉಳಿದ 3 ಕೋಟಿ ಅನುದಾನ ನೀಡಿ ಕಾಮಗಾರಿ ಮುಕ್ತಾಯಗೊಳಿಸಲಾಗುವುದು ಎಂದು ಶಾಸಕರು ತಿಳಿಸಿದರು. ಕಡಮಕಲ್ಲು ರಸ್ತೆ ಅಭಿವೃದ್ಧಿ ವಿಚಾರದಲ್ಲಿ ಕಾನೂನು ತೊಡಕು ಇರುವ ಹಿನ್ನೆಲೆ ಕಾನೂನು ಅಡಿಯಲ್ಲಿಯೇ ಪರಿಹಾರ ಕಂಡುಕೊಳ್ಳುವ ಪ್ರಯತ್ನ ನಡೆಸಲಾಗುವುದು. ಇಲ್ಲಿರುವ ಸೇತುವೆಯನ್ನು ಮುಂದಿನ ದಿನದಲ್ಲಿ ಅಭಿವೃದ್ಧಿಗೊಳಿಸಲಾಗುವುದು. ಕ್ಷೇತ್ರದ ರಸ್ತೆಗಳ ಗುಂಡಿ ಮುಚ್ಚುವ ಕೆಲಸ ಲೋಕೋಪಯೋಗಿ ಇಲಾಖೆ ಮೂಲಕ ಆರಂಭಗೊಂಡಿದೆ. ಪ್ರತಿಕೂಲ ಹವಾಮಾನದಿಂದ ರಸ್ತೆ ದುರಸ್ತಿ ಸಾಧ್ಯವಾಗಿರಲಿಲ್ಲ. ತ್ವರಿತವಾಗಿ ಗುಂಡಿ ಮುಚ್ಚುವ ಕೆಲಸ ಹಾಗೂ ರಸ್ತೆ ಅಭಿವೃದ್ಧಿ ಕೆಲಸ ಮಾಡಲಾಗುವುದು. ಗುಣಮಟ್ಟದಲ್ಲಿ ರಸ್ತೆ ಮಾಡಲು ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.