
ಮೆಹತ್ ಫಾತಿಮಾ ಅವರ ಹಾಡು ಗಮನ ಸೆಳೆಯಿತು
ಮಡಿಕೇರಿ: ಸೂರ್ಯ ಅಸ್ತಮಿಸುತ್ತಿದ್ದಂತೆ ಪಡುವಣದಲ್ಲಿ ಕೆಂಬಣ್ಣ ಚೆಲ್ಲಿ ಕತ್ತಲು ಜಾರಿದರೆ, ಇತ್ತ ಹೋಟೆಲ್ ರೆಡ್ ಬ್ರಿಕ್ಸ್‌ನ ಸತ್ಕಾರ್ ಸಭಾಂಗಣದಲ್ಲಿ ‘ಗಾನಬೆಳಕು’ ಮೂಡಿತು.
33 ತಂಡಗಳ 53 ಕಲಾವಿದರು ಒಂದೇ ವೇದಿಕೆಯಲ್ಲಿ ಹರಿಸಿದ ಗಾನಸುಧೆಯನ್ನು ಸವಿಯಲು ಅಪಾರ ಸಂಖ್ಯೆಯಲ್ಲಿ ಜನರು ಸೇರಿದ್ದರು. ಕನ್ನಡದ ಗೀತೆಗಳು, ಭಾವಗೀತೆಗಳು, ತತ್ವಪದಗಳು, ಜನಪದಗೀತೆಗಳು, ಸಿನಿಮಾ ಹಾಡುಗಳು ಸೇರಿದಂತೆ ಅನೇಕ ಹಾಡುಗಳು ಒಂದರ ಮೇಲೊಂದರಂತೆ ಕಿವಿಗಳಿಗೆ ತಲುಪಿತು.
ಕೊಹಿನೂರ್ ರಸ್ತೆಯುದ್ದಕ್ಕೂ ಈ ಗಾನಾಮೃತ ಕೇಳಿ ಬಂದ ಪರಿಣಾಮ ರಸ್ತೆಯಲ್ಲಿ ಹೋಗುತ್ತಿದ್ದವರೂ ಸಭಾಂಗಣಕ್ಕೆ ಬಂದರು. ಪರಿಣಾಮ ಇಡೀ ಸಭಾಂಗಣ ಜನರಿಂದ ತುಂಬಿ ಹೋಗಿತ್ತು.
ಮಡಿಕೇರಿಯಲ್ಲಿ ಇಂತಹ ದ್ದೊಂದು ಅಪರೂಪದ ದೃಶ್ಯಗಳಿಗೆ ಕಾರಣವಾಗಿದ್ದು, ಸಾಹಿತಿ ಹುಯಿಲ ಗೋಳ ನಾರಾಯಣರಾವ್ ಅವರ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು’ ಹಾಡಿಗೆ ನೂರು ವರ್ಷಗಳು ತುಂಬಿದ ಪ್ರಯುಕ್ತ ಕೊಡಗು ಪತ್ರಕರ್ತರ ಸಂಘ ಹಾಗೂ ಮುಳಿಯ ಚಿನ್ನಾಭರಣ ಸಂಸ್ಥೆ ಏರ್ಪಡಿಸಿದ್ದ ‘ಉದಯವಾಗಲಿ ನಮ್ಮ ಚೆಲುವ ಕನ್ನಡ ನಾಡು - ಗೀತಗಾಯನ ಕಾರ್ಯಕ್ರಮ.
ಇದರಲ್ಲಿ ಈ ಹಾಡಿನ ಜೊತೆಗೆ ಕೇಳಿ ಬಂದ ಬಗೆಬಗೆಯ ಹಾಡುಗಳು ತನ್ಮಯತೆ ಮೂಡಿಸಿದವು.
ಹೀಗಾಗಿಯೇ, ಕಾರ್ಯಕ್ರಮ ಸುಮಾರು 3 ಗಂಟೆಗಳಿಗೂ ಅಧಿಕ ಹೊತ್ತು ನಡೆದರೂ ಕುರ್ಚಿಗಳು ಖಾಲಿ ಇರಲಿಲ್ಲ. ಕಲಾವಿದ ಬಿ.ಆರ್.ಸತೀಶ್ ಅವರು ಚಿತ್ರ ಬಿಡಿಸುವ ಮೂಲಕ ಚಾಲನೆಗೊಂಡ ಈ ಕಾರ್ಯಕ್ರಮದಲ್ಲಿ ವೇದಿಕೆ ಕಾರ್ಯಕ್ರಮ, ಭಾಷಣ ಇರದೇ ಇದ್ದದ್ದು ವಿಶೇಷ ಎನಿಸಿತ್ತು.
ಮೆಹೆಕ್ ಫಾತಿಮಾ ಅವರು ‘ಇನ್ನೂ ಯಾಕ ಬರಲಿಲ್ಲವಾ ಹುಬ್ಬಳ್ಳಿಯಂವ’ ಎಂಬ ಹಾಡನ್ನು ಯಾವುದೇ ಹಿನ್ನೆಲೆ ಸಂಗೀತ ಇಲ್ಲದೇ ಹಾಡಿದ್ದು, ಹಾಡಿನುದ್ದಕ್ಕೂ ಪ್ರೇಕ್ಷಕರು ಲಯಬದ್ಧವಾಗಿ ಚಪ್ಪಾಳೆ ತಟ್ಟುವ ಮೂಲಕ ಗಮನ ಸೆಳೆಯಿತು.
ಇದಕ್ಕೂ ಮುನ್ನ ಸಬ್ ಇನ್‌ಸ್ಪೆಕ್ಟರ್ ಎಸ್.ವಿ.ಚಂದ್ರಶೇಖರ್ ಅವರು ‘ಎಲ್ಲಾದರೂ ಇರು ಎಂತಾದರೂ ಇರು’ ಎಂಬ ಹಾಡಿನ ಮೂಲಕ ಗಾನವೈವಿಧ್ಯ ಆರಂಭಿಸಿದರು. ನಂತರ ಮಾತನಾಡಿದ ಅವರು, ‘ಪದೇ ಪದೇ ಹಾಡುಗಳನ್ನು ಆಲಿಸುವುದರಿಂದ ಸತತ ಪ್ರಯತ್ನ ಮಾಡುವುದರಿಂದ ಹಾಡನ್ನು ಕರಗತ ಮಾಡಿಕೊಳ್ಳಬಹುದು.
ಕೃಷ್ಣವೇಣಿ ಅವರ ‘ಇನ್ನಷ್ಟು ಬೇಕೆನ್ನ ಹೃದಯಕ್ಕೆ ರಾಮ’ ಹಾಡಿಗೆ ಪ್ರೇಕ್ಷಕರು ಭಕ್ತಿಪರವಶರಾದರು. ನಂತರ, ಮಾತನಾಡಿದ ಅವರು ‘ಇಂತಹ ಕಾರ್ಯಕ್ರಮಗಳಿಂದ ಮಡಿಕೇರಿ ಮಾದರಿಯಾಗಬೇಕು’ ಎಂದು ಹೇಳಿದರು.
53 ಗಾಯಕರು...
ಒಬ್ಬ ಕಲಾವಿದರೇ ಅನೇಕ ಹಾಡುಗಳನ್ನು ಹಾಡದೇ ಒಬ್ಬೊಬ್ಬ ಕಲಾವಿದರಿಂದ ಒಂದೊಂದೇ ಹಾಡುಗಳನ್ನು ಹಾಡಿಸುವ ಮೂಲಕ ಈ ಕಾರ್ಯಕ್ರಮ 53 ಕಲಾವಿದರಿಗೆ ವೇದಿಕೆ ಒದಗಿಸಿತು.
ಈ ಕಲಾವಿದರಲ್ಲಿ ವೃತ್ತಿಪರ ಕಲಾವಿದರು, ಹವ್ಯಾಸಿ ಹಾಡುಗಾರರು ಮಾತ್ರವಲ್ಲ ಪೊಲೀಸರು, ವಿದ್ಯಾರ್ಥಿಗಳು, ಮಹಿಳೆಯರು, ವಿವಿಧ ಕ್ಷೇತ್ರಗಳಲ್ಲಿ ಕೆಲಸ ಮಾಡುವವರೂ ಇದ್ದದ್ದು ವಿಶೇಷ ಎನಿಸಿತ್ತು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.