ADVERTISEMENT

ಮಡಿಕೇರಿ | ಹಸಿರಿನ ನಡುವೆ ಬಣ್ಣದ ಲೋಕ: ಚೈತ್ರಕಾಲಕ್ಕೆ ಭೂರಮೆಗೆ ಶೃಂಗಾರ

​ಪ್ರಜಾವಾಣಿ ವಾರ್ತೆ
Published 1 ಜೂನ್ 2020, 16:41 IST
Last Updated 1 ಜೂನ್ 2020, 16:41 IST
ನಾಪೋಕ್ಲುವಿನ ಪ್ರವಾಸಿ ಬಂಗಲೆಯ ಬಳಿ ಸೊಬಗಿನಿಂದ ಕಂಗೊಳಿಸುವ ಮೇ ಫ್ಲವರ್
ನಾಪೋಕ್ಲುವಿನ ಪ್ರವಾಸಿ ಬಂಗಲೆಯ ಬಳಿ ಸೊಬಗಿನಿಂದ ಕಂಗೊಳಿಸುವ ಮೇ ಫ್ಲವರ್   

ನಾಪೋಕ್ಲು: ಚೈತ್ರಕಾಲದ ಆರಂಭದಲ್ಲಿ ಬೇಸಿಗೆಯನ್ನು ಸ್ವಾಗತಿಸಲು ಮಲೆನಾಡಿನಲ್ಲಿ ಮರಗಳು ಚಿಗುರಿ ಮನಸೆಳೆದರೆ ಇದೀಗ ವಿವಿಧೆಡೆ ಕಾಡಿನ ಮರಗಳಲ್ಲಿ ಬಣ್ಣಬಣ್ಣದ ಹೂಗಳು ಅರಳಿವೆ. ತೋಟಗಳಲ್ಲಿ, ರಸ್ತೆಯ ಬದಿಗಳಲ್ಲಿ ವಿವಿಧ ವರ್ಣಗಳಿಂದ ಮನಸೆಳೆಯುತ್ತಿವೆ. ಕಂದು, ಕೆಂಪು, ಹಳದಿ ಮತ್ತಿತರ ಬಣ್ಣಗಳ ಹೂಗಳು ಮನಸೆಳೆಯುತ್ತಿವೆ. ಸೌಂದರ್ಯಾಸಕ್ತರ ಮನಸೂರೆಗೊಳ್ಳುತ್ತಿವೆ. ಬಣ್ಣದ ಲೋಕ ತೆರೆದಿಟ್ಟಿದೆ.

ವಸಂತಕಾಲದಲ್ಲಿ ಪುಷ್ಪರಾಶಿ ಎಲ್ಲೆಡೆ ಅರಳಿದ್ದು ಸೌಂದರ್ಯಾಸಕ್ತರ ಮನಸೆಳೆಯುತ್ತಿವೆ. ಕಾಡಿನ ನಡುವೆ, ಕಾಫಿಯ ತೋಟಗಳಲ್ಲಿ ಇರುವ ವೃಕ್ಷಗಳು ಮರದ ತುಂಬಾ ಹೂವರಳಿಸಿ ನಗುತ್ತಿವೆ. ಬಣ್ಣಬಣ್ಣದ ಹೂಗಳ ಸೌಂದರ್ಯಕ್ಕೆ ಎಂತವರೂ ತಲೆದೂಗಬೇಕು. ಪೂರ್ಣ ವೃಕ್ಷಗಳೇ ಹೂಗಳಿಂದ ಅಲಂಕೃತವಾಗಿ ಎಲೆಗಳೆಲ್ಲಾ ಮರೆಯಾಗಿರುವ ದೃಶ್ಯ ಈ ಅವಧಿಯಲ್ಲಿ ಸಾಮಾನ್ಯ. ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಮಳೆ ಮೋಡದ ನಡುವೆ ಹೂಗಳ ಸೌಂದರ್ಯ ನಿಧಾನವಾಗಿ ಮುದುಡುತ್ತದೆ.

ಕಕ್ಕೆಹೂವಿನ ಮರ ಇದಕ್ಕೆ ಒಂದು ಉದಾಹರಣೆ. ಮಾರ್ಚ್ ತಿಂಗಳಿನಿಂದ ಈ ಮರದ ತುಂಬಾ ಹೂಗೊಂಚಲುಗಳು ಇಳಿಬಿದ್ದು ಸೊಗಸಾಗಿ ಕಾಣುತ್ತವೆ. ಕೊಂದೆ, ಸ್ವರ್ಗಪುಷ್ಪ ಎಂಬ ಹೆಸರಿನ ಈ ಮರವು ಮಾರ್ಚ್ ತಿಂಗಳಿಂದ ಮೇ ತಿಂಗಳವರೆಗೆ ಪುಷ್ಪರಾಶಿಯಿಂದ ಕಂಗೊಳಿಸಿ ಭೂರಮೆಗೆ ಮೆರಗು ನೀಡುತ್ತವೆ.

ADVERTISEMENT

ಹಳದಿ ಬಣ್ಣದ ಹೂಗಳು ಗೊಂಚಲು ಗೊಂಚಲಾಗಿ ಮರದ ತುಂಬಾ ತುಂಬಿ ಮನಸೆಳೆಯುತ್ತವೆ.ಕಾಫಿಯ ತೋಟಗಳಿಗೂ ಮೆರುಗು ನೀಡುತ್ತವೆ.ಈ ವೃಕ್ಷಕ್ಕೆ ’ಗೋಲ್ಡನ್ ಷವರ್ ಟ್ರೀ‘ ಎಂಬ ಹೆಸರು ಜನಪ್ರಿಯ. ಥಾಯ್ಲೆಂಡ್‌ ದೇಶದ ರಾಷ್ಟ್ರೀಯ ಪುಷ್ಪವಾಗಿರುವ ಇದು ನೆರೆಯ ಕೇರಳದ ರಾಜ್ಯಪುಷ್ಪವೂ ಹೌದು.

ಇನ್ನು ಹೊಂಗೆ, ಹಾಲುವಾಣ, ಮುತ್ತುಗ ಮತ್ತಿತರ ವೃಕ್ಷಗಳು ಕೆಂಪುಬಣ್ಣದ ಹೂಗಳನ್ನು ಅರಳಿಸಿ ನಗುಸೂಸಿವೆ. ಮರದ ತುಂಬಾ ನಕ್ಷತ್ರದಂತಹ ಹೂಗಳು ಭೂರಮೆಯನ್ನು ಶೃಂಗರಿಸಿವೆ. ಅಲ್ಲಲ್ಲಿ, ಗುಲ್‌ಮೊಹರ್ ವೃಕ್ಷಗಳು ಹೂಗಳ ರಾಶಿಹೊತ್ತು ಕಂಗೊಳಿಸುತ್ತಿವೆ.

ಮೇ ತಿಂಗಳಿನಲ್ಲಿ ಎಲ್ಲೆಡೆ ಮೇಫ್ಲವರ್‌ಗಳದ್ದೇ ಕಾರುಬಾರು. ಒಂದೆಡೆ ಮಳೆ ಬಿದ್ದು ಭೂಮಿ ತಂಪಾದಾಗ ಕಾಫಿಯ ತಪ್ಪಲಿನಲ್ಲಿ ಶ್ವೇತವರ್ಣದ ಹೂಗಳು ಅರಳಿ ಬೆಳೆಗಾರರಿಗೆ ಆರ್ಥಿಕ ಚೈತನ್ಯ ನೀಡಿದರೆ ಕಾಫಿಯ ಗಿಡಗಳಿಗೆ ನೆರಳಿನ ಆಶ್ರಯ ನೀಡುವ ಹಲವು ವೃಕ್ಷಸಂಕುಲಗಳು ಹೂಗಳ ರಾಶಿಯಿಂದ ಕೊಡೆಹಿಡಿದಂತೆ ಕಾಣುತ್ತವೆ.

ಒಟ್ಟಿನಲ್ಲಿ ಕಾಫಿಯ ತೋಟಗಳಲ್ಲಿ ಎಲ್ಲೆಲ್ಲೂ ಸೌಂದರ್ಯವೇ. ನೋಡುವ ಕಣ್ಣಿರಲು ವರ್ಣರಂಜಿತ ಹೂಗಳು ಭೂರಮೆಯನ್ನು ಶೃಂಗರಿಸುವುದಲ್ಲದೇ ಜೀವಿಗಳಲ್ಲೂ ಜೀವನೋತ್ಸಾಹವನ್ನು ತುಂಬುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.