ಮಡಿಕೇರಿ: ತಾಲ್ಲೂಕಿನ ಕಗ್ಗೋಡ್ಲು ಗ್ರಾಮದಲ್ಲಿ ಭಾನುವಾರ ಸಂಭ್ರಮವೋ ಸಂಭ್ರಮ. 500ಕ್ಕೂ ಅಧಿಕ ಮಂದಿ ಕೆಸರುಗದ್ದೆಯಲ್ಲಿ ಆಡಿದ ಆಟವನ್ನು ಕಣ್ತುಂಬಿಕೊಂಡಿದ್ದು ಬರೋಬರಿ ಸಾವಿರಕ್ಕೂ ಅಧಿಕ ಮಂದಿ. ಇವರಿಗಾಗಿ ತಯಾರಾಗಿದ್ದು 90ಕ್ಕೂ ಅಧಿಕ ವೈವಿಧ್ಯಮಯ ತಿನಿಸುಗಳು. ಸಂತಸ, ಸಡಗರ, ಸಂಭ್ರಮಗಳಿಗೆ ಇಲ್ಲಿ ಪಾರವೇ ಇರಲಿಲ್ಲ.
ಇಂತಹದ್ದೊಂದು ಅಪರೂಪದ ದೃಶ್ಯಗಳು ಕೊಡಗು ಜಿಲ್ಲಾ ಬಂಟರ ಸಂಘ, ಕೊಡಗು ಯುವ ಬಂಟ್ಸ್ ಅಸೋಸಿಯೇಷನ್ ವತಿಯಿಂದ ಕಗ್ಗೋಡ್ಲು ಗ್ರಾಮದಲ್ಲಿ ಬಂಟ ಸಮುದಾಯದವರಿಗಾಗಿ ಏರ್ಪಡಿಸಿದ್ದ ‘ಆಟಿಡೊಂಜಿ ದಿನ ಕೆರ‍್ದ ಗೊಬ್ಬು’ ಕೆಸರುಗದ್ದೆ ಕ್ರೀಡಾಕೂಟದಲ್ಲಿ ಕಂಡು ಬಂತು.
ಮೊಣಕಾಲುದ್ದದ ಕೆಸರಿನಲ್ಲಿ ಸ್ಪರ್ಧಿಗಳು ವಿವಿಧ ಬಗೆಯ ಆಟಗಳನ್ನು ಆಡಿ ಸಂಭ್ರಮಿಸಿದರು. ಹಗ್ಗಜಗ್ಗಾಟ, ಕೆಸರು ಗದ್ದೆ ಓಟ, ಹ್ಯಾಂಡ್ ಬಾಲ್, ದಂಪತಿ ಓಟ, ಮಹಿಳೆಯರಿಗೆ 100 ಮೀ. ಓಟ, ನಿಂಬೆ ಚಮಚ ನಡಿಗೆ, ಪಾಸಿಂಗ್ ಬಾಲ್ ಸೇರಿದಂತೆ ಹಲವು ಬಗೆಯ ಕ್ರೀಡೆಗಳಲ್ಲಿ ನೂರಾರು ಮಂದಿ ಭಾಗವಹಿಸಿದರು. ಎಲ್ಲ ವಯೋಮಾನದವರೂ ಕೆಸರಿನ ಗದ್ದೆಗಿಳಿದು ಕ್ರೀಡಾಸ್ಪೂರ್ತಿ ಮೆರೆದರು.
ತುಳುನಾಡಿನ ಜಾನಪದ ಕಲೆ, ಆಟಿ ಕಳೆಂಜ ಸೂಜಿಗಲ್ಲಿನಂತೆ ಸೆಳೆಯಿತು. 90ಕ್ಕೂ ಅಧಿಕ ಬಗೆಯ ವಿಶೇಷ ತಿನಿಸುಗಳು ಆಕರ್ಷಣೆ ಎನಿಸಿತ್ತು.
ಆಟಿ ಕಳೆಂಜವನ್ನು ಸಂಪ್ರದಾಯಿಕವಾಗಿ ಬರ ಮಾಡಿಕೊಳ್ಳುವ ಮೂಲಕ ಕ್ರೀಡಾಕೂಟವನ್ನು ಉದ್ಘಾಟಿಸಲಾಯಿತು. ಮಾತನಾಡಿದ ಎಲ್ಲರೂ ಸಂಸ್ಕೃತಿ, ಆಚಾರ ವಿಚಾರದ ರಕ್ಷಣೆಗೆ ಕರೆ ನೀಡಿದರು.
ಮಡಿಕೇರಿ ನಗರ ಬಂಟರ ಮಹಿಳಾ ಘಟಕ, ಮಡಿಕೇರಿ ತಾಲ್ಲೂಕು ಬಂಟರ ಮಹಿಳಾ ಘಟಕ, ವಿರಾಜಪೇಟೆ ಮತ್ತು ಪೊನ್ನಂಪೇಟೆ ತಾಲ್ಲೂಕು ಮಹಿಳಾ ಬಂಟರ ಸಂಘ, ಕಗ್ಗೋಡ್ಲು ಹೋಬಳಿ ಬಂಟರ ಸಂಘಗಳು ಸಹಯೋಗ ನೀಡಿದ್ದವು.
ಯುವ ಬಂಟ್ಸ್ ಅಸೋಸಿಯೇಷನ್ ಅಧ್ಯಕ್ಷ ಸದಾನಂದ ರೈ, ಕಗ್ಗೋಡ್ಲು ಬಂಟರ ಹೋಬಳಿ ಘಟಕದ ಅಧ್ಯಕ್ಷೆ ಕಮಲಾಕ್ಷಿ ರೈ, ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಶಶಿಕಲಾ ಶೆಟ್ಟಿ, ತಾಲ್ಲೂಕು ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಜಯಂತಿ ಲವ ರೈ, ನಗರ ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಸುಜಾ ಗಣೇಶ್ ರೈ, ಖಜಾಂಜಿ ಮಾಲತಿ ರೈ, ವಿರಾಜಪೇಟೆ ತಾಲ್ಲೂಕು ಮಹಿಳಾ ಬಂಟರ ಸಂಘದ ಕಾರ್ಯದರ್ಶಿ ಕುಸುಮಾ ಎನ್. ಶೆಟ್ಟಿ, ಯುವ ಬಂಟ್ಸ್ ಅಸೋಸಿಯೇಷನ್ ಕಾರ್ಯದರ್ಶಿ ನಿತಿನ್ ರೈ, ನಿಕಟ ಪೂರ್ವ ಅಧ್ಯಕ್ಷ ಚಂದ್ರಶೇಖರ್ ರೈ ಭಾಗವಹಿಸಿದ್ದರು.
ಬೆಳಿಗ್ಗೆಯಿಂದ ಸಂಜೆಯವರೆಗೂ ನಡೆದ ಕ್ರೀಡಾಕೂಟ ಕೆಸರಿನಲ್ಲಿ ಮಿಂದೆದ್ದ ಮಕ್ಕಳು, ಯುವಕರು ನೂರಾರು ಮಂದಿ ಭಾಗಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.