ADVERTISEMENT

ಮಡಿಕೇರಿ| ಸುರಕ್ಷಿತ ಹೆದ್ದಾರಿ ಪಯಣಕ್ಕೆ ₹ 94 ಕೋಟಿ ಬಿಡುಗಡೆ: ಸಂಸದ ಯದುವೀರ್

​ಪ್ರಜಾವಾಣಿ ವಾರ್ತೆ
Published 13 ಜನವರಿ 2026, 5:52 IST
Last Updated 13 ಜನವರಿ 2026, 5:52 IST
ಕೃಷ್ಣದತ್ತ ಚಾಮರಾಜ ಒಡೆಯರ್
ಕೃಷ್ಣದತ್ತ ಚಾಮರಾಜ ಒಡೆಯರ್   

ಮಡಿಕೇರಿ: ಬಂಟ್ವಾಳ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 275 ರಲ್ಲಿ ಸಂಪಾಜೆಯಿಂದ ಕುಶಾಲನಗರವರೆಗೆ ಹೆದ್ದಾರಿ ಸುರಕ್ಷತೆ ಕಾಮಗಾರಿಗಳಿಗಾಗಿ ₹ 94.08 ಕೋಟಿ ಮೊತ್ತವನ್ನು ಕೇಂದ್ರ ಸರ್ಕಾರ ಬಿಡುಗಡೆ ಮಾಡಿದೆ. ಈಗಾಗಲೇ ಟೆಂಡರ್ ಪ್ರಕ್ರಿಯೆ ಸಹ ಮುಗಿದಿದೆ. ಮಾಸಾಂತ್ಯದಲ್ಲಿ ಕಾಮಗಾರಿ ಆರಂಭವಾಗಲಿದೆ. 18 ತಿಂಗಳುಗಳಲ್ಲಿ ಈ ಕಾಮಗಾರಿ ಪೂರ್ಣಗೊಳ್ಳಲಿದೆ.

ಕುಶಾಲನಗರದಿಂದ ಸಂಪಾಜೆಯವರೆಗೆ ಮಳೆಗಾಲದಲ್ಲಿ ಪದೇ ಪದೇ ರಸ್ತೆಗೆ ಮಣ್ಣು ಕುಸಿಯುತ್ತಿತ್ತು. ವಾಹನ ಸವಾರರು, ಪ್ರಯಾಣಿಕರು ಪ್ರತಿ ಮಳೆಗಾಲದಲ್ಲೂ ಈ ರಸ್ತೆಯಲ್ಲಿ ಆತಂಕದಲ್ಲೇ ಸಂಚರಿಸಬೇಕಿತ್ತು. ಈ ವಿಷಯವನ್ನು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ಕೇಂದ್ರ ಸರ್ಕಾರದ ಗಮನಕ್ಕೆ ತಂದಿದ್ದರು. ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯವು ಈಗ ಯೋಜನೆಗೆ ತಾಂತ್ರಿಕ ಅನುಮೋದನೆ ನೀಡಿ ಹಣ ಬಿಡುಗಡೆ ಮಾಡಿದೆ.

ಈ ಹೆದ್ದಾರಿಯ ಆಯ್ದ ಭಾಗಗಳಲ್ಲಿ ರಕ್ಷಣಾತ್ಮಕ ಗೋಡೆಗಳ ನಿರ್ಮಾಣ ಮತ್ತು ಸುರಕ್ಷತಾ ಕಾಮಗಾರಿಗಳಿಗಾಗಿ ಯೋಜನೆ ರೂಪಿಸಲಾಗಿದೆ. ಈ ಯೋಜನೆಯನ್ನು ಇಪಿಸಿ (ಎಂಜಿನಿಯರಿಂಗ್, ಪ್ರಕ್ಯೂರ್‌ಮೆಂಟ್, ಕನ್‌ಸ್ಟ್ರಕ್ಸನ್‌) ಮಾದರಿಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ADVERTISEMENT

ಪ್ರಮುಖ ಕಾಮಗಾರಿಗಳು: ಸಚಿವಾಲಯದ ತಾಂತ್ರಿಕ ವರದಿಯ ಪ್ರಕಾರ, 1,650 ಮೀಟರ್ ಉದ್ದದ ಆರ್‌ಸಿಸಿ ಕ್ಯಾಂಟಿಲಿವರ್ ರಿಟೈನಿಂಗ್ ವಾಲ್ ಮತ್ತು ಕಣಿವೆಯ ಬದಿಯಲ್ಲಿ ವಿಶೇಷವಾಗಿ 110 ಮೀಟರ್ ಉದ್ದದ ಪ್ರೆಶರ್ ರಿಲೀಫ್ ಗೋಡೆಗಳನ್ನು ನಿರ್ಮಿಸಲಾಗುತ್ತದೆ.

ಗುಡ್ಡದ ಬದಿಯಲ್ಲಿ ಮಣ್ಣು ಕುಸಿಯದಂತೆ 1,910 ಮೀಟರ್ ಉದ್ದದ ಬ್ರೆಸ್ಟ್ ವಾಲ್ ಮತ್ತು ನೀರು ಸರಾಗವಾಗಿ ಹರಿಯಲು 2,720 ಮೀಟರ್ ಉದ್ದದ ಚೂಟ್ ಡ್ರೈನ್‍ಗಳನ್ನು ನಿರ್ಮಿಸಲಾಗುತ್ತಿದೆ. ರಸ್ತೆ ಸುರಕ್ಷತೆಯನ್ನು ಹೆಚ್ಚಿಸಲು 17 ಆಯ್ದ ಸ್ಥಳಗಳಲ್ಲಿ ಒಟ್ಟು 1,690 ಮೀಟರ್ ಉದ್ದದ ರಸ್ತೆಯನ್ನು ವಿಸ್ತರಿಸಲಾಗುತ್ತಿದೆ.

ಕಿಮೀ 77.750 ಮತ್ತು 89.670 ರಲ್ಲಿ ಹಳೆಯದಾದ ಎರಡು ಬಾಕ್ಸ್ ಮೋರಿಗಳನ್ನು ಮರುನಿರ್ಮಾಣ ಮಾಡಲಾಗುತ್ತದೆ. ರಕ್ಷಣಾತ್ಮಕ ಕ್ರಾಶ್ ಬ್ಯಾರಿಯರ್‌ಗಳು ಮತ್ತು ಆಧುನಿಕ ಸಂಚಾರ ಸೂಚನಾ ಫಲಕಗಳನ್ನು ಅಳವಡಿಸಲಾಗುತ್ತದೆ.

ರೂ. 94.08 ಕೋಟಿ (ಜಿಎಸ್‍ಟಿ ಮತ್ತು ನಿರ್ವಹಣಾ ವೆಚ್ಚಗಳು ಸೇರಿ). ವೆಚ್ಚದ ಯೋಜನೆಯು ಮಳೆಗಾಲವನ್ನೂ ಒಳಗೊಂಡಂತೆ 18 ತಿಂಗಳುಗಳಲ್ಲಿ ಪೂರ್ಣಗೊಳ್ಳಲಿದೆ. 

ಗುತ್ತಿಗೆದಾರರು ಕಾಮಗಾರಿ ಮುಗಿದ ನಂತರ ಮುಂದಿನ 10 ವರ್ಷಗಳ ಕಾಲ ರಸ್ತೆಯ ದೋಷ ಹೊಣೆಗಾರಿಕೆ ಮತ್ತು ನಿರ್ವಹಣೆಯನ್ನು ನೋಡಿಕೊಳ್ಳಬೇಕಾಗಿದೆ.

ಯೋಜನೆಯ ಗುಣಮಟ್ಟ ಕಾಪಾಡಲು ಸಚಿವಾಲಯವು ಹಲವು ಷರತ್ತುಗಳನ್ನು ವಿಧಿಸಿದೆ. ಕಾಮಗಾರಿ ಆರಂಭಿಸುವ ಮುನ್ನ ಮತ್ತು ನಂತರ ನೆಟ್‍ವರ್ಕ್ ಸರ್ವೆ ವೆಹಿಕಲ್(ಎನ್‍ಎಸ್‍ವಿ) ಮೂಲಕ ರಸ್ತೆಯ ಗುಣಮಟ್ಟವನ್ನು ದಾಖಲಿಸುವುದು ಕಡ್ಡಾಯಗೊಳಿಸಿದೆ.

ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ ಏಕಕಾಲಕ್ಕೆ 3 ಕಿಮೀ ಗಿಂತ ಹೆಚ್ಚು ಉದ್ದದ ಕಾಮಗಾರಿ ನಡೆಸದಂತೆಯೂ ಸೂಚಿಸಲಾಗಿದೆ.

ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಮದೆನಾಡು ಸಮೀಪದ ಕತ್ರೋಜಿ ಎಂಬಲ್ಲಿ ಮಳೆಗಾಲದಲ್ಲಿ ಮಣ್ಣು ಜಾರುತ್ತಿದ್ದ ಗುಡ್ಡಕ್ಕೆ ತಡೆಗೋಡೆ ನಿರ್ಮಿಸಲು ಜಾಗವನ್ನು ಸಿದ್ಧ ಮಾಡಿರುವ ದೃಶ್ಯ ಸೋಮವಾರ ಕಂಡು ಬಂತು

ಗಿರೀಶ್

ಹೆಚ್ಚು ಸುರಕ್ಷಿತ ಮತ್ತು ಸುಗಮ

ಈ ಯೋಜನೆಯು ಪೂರ್ಣಗೊಂಡ ನಂತರ ಬೆಂಗಳೂರು ಮತ್ತು ಕರಾವಳಿ ಭಾಗದ ನಡುವಿನ ಸಂಚಾರವು ಹವಾಮಾನ ವೈಪರೀತ್ಯಗಳ ಸಂದರ್ಭದಲ್ಲೂ ಹೆಚ್ಚು ಸುರಕ್ಷಿತ ಮತ್ತು ಸುಗಮವಾಗಲಿದೆ. ಕಾಮಗಾರಿಗೆ ಮಡಿಕೇರಿ ಸಮೀಪದಲ್ಲಿ ಜನವರಿ ಕೊನೆಯ ವಾರದಲ್ಲಿ ಚಾಲನೆ ನೀಡಲಾಗುವುದು ಎಂದು ಸಂಸದ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಿಸಿದ್ದಾರೆ.

ನಿವಾರಣೆಯಾಗಲಿದೆ ಕತ್ರೋಜಿ ಗುಡ್ಡದ ಭೀತಿ

ಪ್ರತಿ ಮಳೆಗಾಲದಲ್ಲೂ ಮಡಿಕೇರಿ ತಾಲ್ಲೂಕಿನ ಮದೆನಾಡು ಸಮೀಪದ ಕತ್ರೋಜಿ ಎಂಬಲ್ಲಿ ಗುಡ್ಡದ ಮಣ್ಣು ರಸ್ತೆ ಜಾರುತ್ತಿರುತ್ತದೆ. ಮಳೆಗಾಲದುದ್ದಕ್ಕೂ ಇಲ್ಲಿ ಜೆಸಿಬಿಯಿಂದ ರಸ್ತೆಗೆ ಸುರಿದ ಮಣ್ಣನ್ನು ತೆರವು ಮಾಡುತ್ತಲೆ ಇರಲಾಗುತ್ತದೆ. ಇಲ್ಲಿ ಮಳೆಗಾಲದಲ್ಲಿ ಜನರು ಆತಂಕದಲ್ಲೇ ಸಂಚರಿಸಬೇಕಿದೆ. ಸದ್ಯ ‘ಈ ಯೋಜನೆಯಲ್ಲಿ ಈ ಪ್ರದೇಶದಲ್ಲಿ ಶಾಶ್ವತವಾದ ಕಾಂಕ್ರೀಟ್ ತಡೆಗೋಡೆಯೊಂದನ್ನು ನಿರ್ಮಿಸಲಾಗುತ್ತದೆ’ ಎಂದು ರಾಷ್ಟ್ರೀಯ ಹೆದ್ದಾರಿ ಉಪವಿಭಾಗದ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಜಿ.ಎಚ್.ಗಿರೀಶ್ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.