
ಮಡಿಕೇರಿ: ಕೇಂದ್ರ ಸರ್ಕಾರ ಹೊಸದಾಗಿ ಜಾರಿಗೆ ತಂದಿರುವ ‘ವಿಕಸಿತ ಭಾರತ – ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್ ಗ್ರಾಮೀಣ’ (ವಿಬಿ– ಜಿ ರಾಮ್ ಜಿ) ಕಾಯ್ದೆಯಲ್ಲಿ ಸೋರಿಕೆಗೆ ಆಸ್ಪದ ಇಲ್ಲ. ಮಾತ್ರವಲ್ಲ, ಇದರಲ್ಲಿ ಮಾನವ ದಿನಗಳನ್ನು ಕದಿಯುವುಕ್ಕೆ ಅವಕಾಶವೇ ಇಲ್ಲ ಎಂದು ಬಿಜೆಪಿ ಮುಖಂಡ ಪ್ರತಾಪ್‌ಸಿಂಹ ಪ್ರತಿಪಾದಿಸಿದರು.
ಯುಪಿಎ ಸರ್ಕಾರ ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ’ (ನರೇಗಾ) ಕಾಯ್ದೆಯನ್ನು ರೂಪಿಸಿದ ಉದ್ದೇಶ ಒಳ್ಳೆಯದೇ ಇತ್ತು. ಆದರೆ, ಅದರ ಜಾರಿಯಲ್ಲಿ ತೊಡಕುಗಳು ಉಂಟಾದವು. ನಕಲಿ ಜಾಬ್ ಕಾರ್ಡ್ ಸೇರಿದಂತೆ ಅನೇಕ ಬಗೆಯ ಅಕ್ರಮಗಳಿಂದ ನಿಜವಾದ ಫಲಾನುಭವಿಗಳಿಗೆ ಯೋಜನೆ ಲಾಭ ದಕ್ಕದಂತಹ ಸ್ಥಿತಿ ಇತ್ತು. ಹಾಗಾಗಿ, ಕೇಂದ್ರ ಸರ್ಕಾರ ನಿಜವಾದ ಫಲಾನುಭವಿಗಳಿಗೆ ಈ ಯೋಜನೆಯ ಲಾಭ ದೊರಕಿಸಲು ಕಾಯ್ದೆಯನ್ನು ಬದಲಿಸಿದೆ ಎಂದು ಅವರು ಇಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಹೇಳಿದರು.
ಮುಖ್ಯವಾಗಿ, ಹಿಂದಿನ ಕಾಯ್ದೆಯ ಉದ್ದೇಶ ಉದ್ಯೋಗ ಸೃಜನೆಯಾಗಿತ್ತು. ಆದರೆ, ಈಗಿನ ಕಾಯ್ದೆಯಲ್ಲಿ ಉದ್ಯೋಗ ಸೃಜನೆಯ ಜೊತೆಗೆ ಸಂಪತ್ತಿನ ಸೃಷ್ಟಿಯನ್ನೂ ಪ್ರಧಾನ ಉದ್ದೇಶವಾಗಿ ಹೊಂದಿದೆ. ಇದರಿಂದ ಕೇವಲ ಕೆಲಸ ಮಾತ್ರ ದೊರಕದೇ ಸಮಾಜದಲ್ಲಿ ಸಂಪತ್ತೂ ಸೃಷ್ಟಿಯಾಗುತ್ತದೆ ಎಂದು ಅವರು ಯೋಜನೆಯ ಲಾಭಗಳನ್ನು ಕುರಿತು ಸವಿಸ್ತಾರವಾಗಿ ಮಾತನಾಡಿದರು.
ಹೊಸ ಕಾಯ್ದೆಯಲ್ಲಿ ಮಾನವ ದಿನಗಳನ್ನು ಹೆಚ್ಚಿಸಲಾಗಿದೆ. ಮಾತ್ರವಲ್ಲ, ಕೆಲಸಕ್ಕೆ ಬರುವಾಗ ಹೋಗುವಾಗ ಫೋಟೊ ತೆಗೆಯುವಂತಹ ಅಕ್ರಮಕ್ಕೆ ಅವಕಾಶ ಇಲ್ಲದಂತಹ ವ್ಯವಸ್ಥೆ ರೂಪಿಸಲಾಗಿದೆ. ಹಾಗಾಗಿ, ಈ ಯೋಜನೆ ಹಿಂದಿನ ಯೋಜನೆಗಿಂತ ಹೆಚ್ಚು ಸೋರಿಕೆಯನ್ನು ತಡೆಗಟ್ಟುತ್ತದೆ ಎಂದರು.
ರಾಜ್ಯಸರ್ಕಾರದ ಜವಾಬ್ದಾರಿ ಮತ್ತು ಉತ್ತರದಾಯಿತ್ವ ಹೆಚ್ಚಿಸಲು ರಾಜ್ಯಸರ್ಕಾರದ ಪಾಲನ್ನು ಹೆಚ್ಚಿಸಲಾಗಿದೆ. ಇದರೊಂದಿಗೆ ರಾಜ್ಯಸರ್ಕಾರಕ್ಕೆ ಆಯಾ ಪ್ರದೇಶಕ್ಕೆ ಅನುಗುಣವಾದ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದರು.
ಅಕ್ರಮಗಳನ್ನು ತಡೆಗಟ್ಟುವಂತಹ ಸದುದ್ದೇಶ ಹೊಂದಿರುವ ಈ ಕಾಯ್ದೆ ಕುರಿತು ದೇಶದ ಬೇರೆ ರಾಜ್ಯಗಳಿಂದ ಯಾವುದೇ ತಕರಾರರು ಕೇಳಿ ಬಂದಿಲ್ಲ. ಆದರೆ, ರಾಜ್ಯಸರ್ಕಾರ ಅನಗತ್ಯವಾಗಿ ದಾರಿ ತಪ್ಪಿಸುವ ಕೆಲಸ ಮಾಡುತ್ತಿದೆ ಎಂದು ಆರೋಪಿಸಿದರು.
ಮುಖಂಡರಾದ ಕೆ.ಜಿ.ಬೋಪಯ್ಯ, ಎಂ.ಪಿ.ಅಪ್ಪಚ್ಚು ರಂಜನ್, ಸುನಿಲ್ ಸುಬ್ರಮಣಿ, ರವಿ ಕುಶಾಲಪ್ಪ, ತಳೂರು ಕಿಶೋರ್ ಕುಮಾರ್ ಭಾಗವಹಿಸಿದ್ದರು.