ಪ್ರಾತಿನಿಧಿಕ ಚಿತ್ರ
ಮಡಿಕೇರಿ: ನಗರದಲ್ಲಿ ಸೋಮವಾರ ಮಳೆ ಕಡಿಮೆಯಾಗಿದ್ದು, ಜನರು ಕೊಂಚ ನಿರಾಳರಾಗಿದ್ದಾರೆ. ತೇವಾಂಶದ ಗೋಡೆಗಳ ಮಧ್ಯೆ ಬದುಕುತ್ತಿರುವ ಅನೇಕ ಬಡವರು ನಿಟ್ಟುಸಿರು ಬಿಟ್ಟಿದ್ದಾರೆ. ನದಿ ದಂಡೆಗಳ ನಿವಾಸಿಗಳ ಆತಂಕ ಸದ್ಯಕ್ಕೆ ತುಸು ದೂರವಾಗಿದೆ.
ಅಲ್ಲಲ್ಲಿ ಬಿಸಿಲೂ ತಿಂಗಳ ಬಳಿಕ ಕಾಣಿಸಿಕೊಂಡಿದ್ದು, ಜನರಲ್ಲಿ ಹೊಸ ಉಲ್ಲಾಸವನ್ನು ತಂದಿದೆ. ದಿನವಿಡೀ ಬಿಸಿಲು ಇಲ್ಲದೇ ಹೋದರೂ ಕೆಲವು ಹೊತ್ತಾದರೂ ಬಿಸಿಲು ಬಂದಿರುವುದು ತುಸು ನೆಮ್ಮದಿ ಮೂಡಿಸಿದೆ. ಕನಿಷ್ಠ ಒಂದು ವಾರ ಕಾಲವಾದರೂ ಬಿಸಿಲು ಬಂದರೆ ಬೆಳೆಗಳಿಗೆ ಔಷಧಗಳನ್ನು ಸಿಂಪಡಿಸಬಹುದು, ಗೊಬ್ಬರ ಹಾಕಬಹುದು ಎಂಬುದು ಬೆಳೆಗಾರರ ಮಾತು. ಹಾಗಾಗಿ, ಸೂರ್ಯನ ಬರುವಿಕೆಗಾಗಿಯೇ ಅವರು ಕಾಯುತ್ತಿದ್ದಾರೆ.
ಭಾನುವಾರ ಸಂಜೆಯ ನಂತರ ಸುರಿದ ಮಳೆ, ಬೀಸಿದ ಬಿರು ಗಾಳಿ ಕಂಡು ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಸೋಮವಾರ ಒಂದು ದಿನದ ಮಟ್ಟಿಗೆ ಜಿಲ್ಲೆಯ ಎಲ್ಲ ಅಂಗನವಾಡಿಗಳು, ಶಾಲಾ, ಕಾಲೇಜುಗಳಿಗೆ ರಜೆ ಘೋಷಿಸಿದ್ದರು. ಆದರೆ, ಸೋಮವಾರ ಮಳೆ ಬರಲಿಲ್ಲ.
ಜಿಲ್ಲೆಯಲ್ಲಿ ಸೋಮವಾರ ಬೆಳಿಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆ ಅವಧಿಯಲ್ಲಿ ಸರಾಸರಿ 2.7 ಸೆಂ.ಮೀನಷ್ಟು ಮಳೆಯಾಗಿದೆ. ಮಡಿಕೇರಿ ತಾಲ್ಲೂಕಿನಲ್ಲಿ ಸರಾಸರಿ 4.4 ಸೆಂ.ಮೀ., ವಿರಾಜಪೇಟೆ ತಾಲ್ಲೂಕಿನಲ್ಲಿ 1.5, ಪೊನ್ನಂಪೇಟೆ ತಾಲ್ಲೂಕಿನಲ್ಲಿ 2.7, ಸೋಮವಾರಪೇಟೆ ತಾಲ್ಲೂಕಿನಲ್ಲಿ 3.7, ಕುಶಾಲನಗರ ತಾಲ್ಲೂಕಿನಲ್ಲಿ 1 ಸೆಂ.ಮೀನಷ್ಟು ಮಳೆಯಾಗಿದೆ.
ಹೋಬಳಿವಾರು ಗಮನಿಸಿದರೆ, ಮಡಿಕೇರಿ ಕಸಬಾದಲ್ಲಿ 4.2, ನಾಪೋಕ್ಲು 1.9, ಸಂಪಾಜೆ 3.5, ಭಾಗಮಂಡಲ 8.3, ವಿರಾಜಪೇಟೆ 1.6, ಅಮ್ಮತ್ತಿ 1.4, ಹುದಿಕೇರಿ 4.3, ಶ್ರೀಮಂಗಲ 2.1, ಪೊನ್ನಂಪೇಟೆ 3.5, ಬಾಳೆಲೆ 1.2, ಸೋಮವಾರಪೇಟೆ 3.2, ಶನಿವಾರಸಂತೆ 2.9, ಶಾಂತಳ್ಳಿ 6.7, ಕೊಡ್ಲಿಪೇಟೆ 2.2, ಸುಂಟಿಕೊಪ್ಪ 1.8 ಸೆಂ.ಮೀ ಮಳೆಯಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.