
ಮಡಿಕೇರಿ: ಒಂದೇ ಸೂರಿನಡಿ 450ಕ್ಕೂ ಅಧಿಕ ಮಹಿಳೆಯರು ಅಲ್ಲಿದ್ದರು. ಕೊಡಗು ಜಿಲ್ಲೆಯ ಎಲ್ಲೆಡೆಯಿಂದ ಬಂದಿದ್ದ 80 ಸಂಜೀವಿನಿ ಸ್ವಸಹಾಯ ಸಂಘಗಳ ಸದಸ್ಯರು 60 ಮಳಿಗೆಗಳಲ್ಲಿ ತಾವೇ ತಯಾರಿಸಿದ, ತಾವೇ ಬೆಳೆದ ಉತ್ಪನ್ನಗಳನ್ನು ಮಾರಾಟಕ್ಕೆ ಇರಿಸಿದ್ದರು.
ಈ ದೃಶ್ಯಗಳು ಇಲ್ಲಿನ ಗಾಂಧಿ ಮೈದಾನದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಸಂಜೀವಿನಿ– ಕರ್ನಾಟಕ ರಾಜ್ಯ ಗ್ರಾಮೀಣ ಜೀವನೋಪಾಯ ಸಂವರ್ಧನಾ ಸಂಸ್ಥೆ, ಕೊಡಗು ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ವತಿಯಿಂದ ನಡೆಯುತ್ತಿರುವ ಜಿಲ್ಲಾಮಟ್ಟದ ವಸ್ತು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಮಂಗಳವಾರ ಕಂಡು ಬಂತು.
ಇಲ್ಲಿ ಬಾಯಲ್ಲಿ ನೀರೂರಿಸುವಂತಹ ತಿನಿಸುಗಳು ಇದ್ದವು. ಅವೆಲ್ಲವೂ ಮಹಿಳೆಯರು ತಾವೇ ಮನೆಯಲ್ಲಿ ತಯಾರಿಸಿದವೇ ಆಗಿದ್ದವು. ಹಲವು ಬಗೆಯ ಕರಕುಶಲ ವಸ್ತುಗಳು, ಕಸೂತಿ ಮಾಡಿದ ಬಟ್ಟೆಗಳು, ಗೃಹ ಅಲಂಕಾರಿಕ ವಸ್ತುಗಳನ್ನು ಅವರು ಪ್ರದರ್ಶನಕ್ಕಿಟ್ಟಿದ್ದರು. ಮಾತ್ರವಲ್ಲ, ತಾವೇ ಮನೆಯಂಗಳದಲ್ಲಿ ಬೆಳೆದ ತಾಜಾ ತರಕಾರಿ, ವಿವಿಧ ಬಗೆಯ ಸೊಪ್ಪುಗಳು, ಹಣ್ಣುಗಳು, ಕಾಯಿಗಳನ್ನೂ ಮಾರಾಟಕ್ಕಿರಿಸಿದ್ದರು.
ಮಾರಾಟಕ್ಕೆ ಇರಿಸಿದ್ದ ವಸ್ತುಗಳು ಕಡಿಮೆ ಎನಿಸಿದರೂ ಅವುಗಳ ಗುಣಮಟ್ಟ ಕಡಿಮೆ ಇರಲಿಲ್ಲ. ದರವೂ ತುಂಬಾ ಹೆಚ್ಚಿರಲಿಲ್ಲ. ಎಲ್ಲರೂ ತಮ್ಮ ಮನೆಗಳಿಂದ ತಾವೇ ಸ್ವತಃ ಬಸ್‌ನಲ್ಲಿ ತರಬೇಕಿದ್ದರಿಂದ ಸಂಘದ ಸದಸ್ಯರು ತಮ್ಮಿಂದ ಎಷ್ಟು ಸಾಧ್ಯವೋ ಅಷ್ಟು ವಸ್ತುಗಳನ್ನು ಮಾತ್ರವೇ ತಂದಿದ್ದರು. ಇದರಿಂದ ಬಹುತೇಕ ಮಳಿಗೆಗಳಲ್ಲಿ ಮಧ್ಯಾಹ್ನದ ಹೊತ್ತಿಗೆ ಬಹುತೇಕ ಉತ್ಪನ್ನಗಳು ಮಾರಾಟವಾಗಿದ್ದವು.
ಬಸ್‌ಗಳ ಕೊರತೆಯ ಕಾರಣಕ್ಕೆ ಸಂಜೆಯ ಹೊತ್ತಿಗೆ ಬಹುತೇಕ ಮಳಿಗೆಗಳ ಮಹಿಳೆಯರು ತಮ್ಮ ತಮ್ಮ ಊರುಗಳಿಗೆ ವಾಪಸ್ ತೆರಳಿದ್ದರು.
ಕೊಡಗು ಜಿಲ್ಲಾ ಪಂಚಾಯಿತಿಯ ಮುಖ್ಯ ಯೋಜನಾಧಿಕಾರಿ ಅಬ್ದುಲ್ ನಬಿ, ಯೋಜನಾ ನಿರ್ದೇಶಕ ಜೀವನ್‌ಕುಮಾರ್, ಜಿಲ್ಲಾ ವ್ಯವಸ್ಥಾಪಕಿ ಚಾಂದಿನಿ ಮಂಗಳವಾರ ಮಳಿಗೆಗಳಿಗೆ ಭೇಟಿ ನೀಡಿ ವೀಕ್ಷಿಸಿದರು.
ಇಂದೇ ಕೊನೆಯ ದಿನ ಬೆಳಿಗ್ಗೆ 10ರಿಂದ ಆರಂಭ ನೂರಾರು ಮಹಿಳೆಯರು ಭಾಗಿ
ಕೈಯಲ್ಲೇ ತಯಾರಿಸಿದ ಟವಲ್ ಬೆಡ್‌ಶೀಟ್ ಸೀರೆ ಮೊದಲಾದ ಜವಳಿ ಉತ್ಪನ್ನಗಳನ್ನು ಮಾರಾಟಕ್ಕೆ ತಂದಿದ್ದೇವೆ. ಬುಧವಾರವೂ ಮಾರಾಟ ಇರಲಿದೆ
-ಕೆ.ಆರ್.ಸವಿತಾ ಸುರೇಶ್ ಶಿರಂಗಾಲ.
19 ಮಂದಿಯಿಂದ ಅಂಗಾಂಗ ದಾನಕ್ಕೆ ನೋಂದಣಿ ಮಾರಾಟ ಮೇಳದಲ್ಲಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆ ಮತ್ತು ಬೋಧಕ ಆಸ್ಪತ್ರೆ ರಾಷ್ಟ್ರೀಯ ಆರೋಗ್ಯ ಅಭಿಯಾನದಡಿ ಜಿಲ್ಲಾ ಮಾಹಿತಿ ಶಿಕ್ಷಣ ಸಂವಹನ ವಿಭಾಗದ ವತಿಯಿಂದ ಅಂಗಾಂಗ ದಾನ ನೋಂದಣಿ ಕಾರ್ಯಕ್ರಮವೂ ನಡೆಯಿತು. ಇದರಲ್ಲಿ 19 ಮಂದಿ ಅಂಗಾಂಗ ದಾನಕ್ಕೆ ನೋಂದಣಿ ಮಾಡಿಕೊಂಡರು. 57 ಮಂದಿ ಅಸಂಕ್ರಾಮಿಕ ರೋಗಗಳ ತಪಾಸಣೆಗೆ ಹಾಗೂ 300ಕ್ಕೂ ಅಧಿಕ ಮಂದಿ ಸಾಮಾನ್ಯ ತಪಾಸಣೆಗೆ ಒಳಗಾದರು. ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಭಾಗವಹಿಸಿದ್ದರು.
ಗಮನ ಸೆಳೆದ ಮೀನಿನ ಉಪ್ಪಿನಕಾಯಿ ಮಾರಾಟ ಮೇಳದಲ್ಲಿ ಅಪರೂಪ ಎನಿಸುವಂತಹ ವಸ್ತುಗಳೂ ಇದ್ದವು. ಮೀನಿನ ಉಪ್ಪಿನಕಾಯಿ ಹೆಚ್ಚಿನ ಜನರ ಗಮನ ಸೆಳೆಯಿತು. ಇದರೊಂದಿಗೆ ಹಲಸಿನ ಕಾಯಿಯ ಉಪ್ಪಿನಕಾಯಿ ಕಣಿಲೆಯ ಉಪ್ಪಿನಕಾಯಿಯಂತಹ ಅಪರೂಪ ಎನಿಸುವಂತಹ ವಸ್ತುಗಳಿದ್ದವು. ಇವೆಲ್ಲವೂ ಬಹುಬೇಗ ಮಾರಾಟವಾದವು. ತಾವೇ ಸ್ವತಃ ನೇಯ್ಗೆ ಮಾಡಿ ತಂದಂತಹ ಖಾದಿ ಬಟ್ಟೆಯೂ ಮಾರಾಟ ಮೇಳದಲ್ಲಿ ಸೂಜಿಗಲ್ಲಿನಂತೆ ಸೆಳೆಯಿತು. ಶಿರಂಗಾಲದ ಕೈಮಗ್ಗ ನೇಕಾರರ ಹಾಗೂ ಸಿದ್ದ ಉಡುಪು ಉತ್ಪಾದನೆ ಮತ್ತು ಮಾರಾಟ ಸಹಕಾರ ಸಂಘದ ಉತ್ಪನ್ನಗಳು ಗಮನ ಸೆಳೆದವು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.