ADVERTISEMENT

ಮಡಿಕೇರಿ: ಬಾಲಕಿಗೆ ಲೈಂಗಿಕ ದೌರ್ಜನ್ಯ, ಅಪರಾಧಿಗೆ 3 ವರ್ಷ ಸಜೆ

ನೀರು ಕೇಳಿ ಕುಡಿದು ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ

​ಪ್ರಜಾವಾಣಿ ವಾರ್ತೆ
Published 10 ಜುಲೈ 2025, 2:59 IST
Last Updated 10 ಜುಲೈ 2025, 2:59 IST
<div class="paragraphs"><p>ಬಂಧನ </p></div>

ಬಂಧನ

   

ಮಡಿಕೇರಿ: ತಾಲ್ಲೂಕಿನ ಲೈನ್‌ಮನೆಯೊಂದರಲ್ಲಿದ್ದ 13 ವರ್ಷದ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ ಅಪರಾಧಿ ಡಿ.ನಂದಕುಮಾರ್ (30) ಎಂಬಾತನಿಗೆ ಇಲ್ಲಿನ ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯವು 3 ವರ್ಷ ಜೈಲು ಶಿಕ್ಷೆ ವಿಧಿಸಿದೆ.

ಬಾಲಕಿಯು ತನ್ನ ಮನೆಯಲ್ಲಿ 2021ರ ಆಗಸ್ಟ್ 13ರಂದು ಒಬ್ಬಳೇ ಇದ್ದಾಗ ಅಪರಾಧಿಯು ನೀರು ಕೇಳಿ ಕುಡಿದು, ಆಕೆಯ ಅಪ್ಪನ ಮೊಬೈಲ್ ನಂಬರ್ ಇದೆಯಾ ಎಂದು ಕೇಳಿದ್ದ. ಬಾಲಕಿಯು ತನ್ನ ಮೊಬೈಲ್‌ನಲ್ಲಿ ಅಪ್ಪನ ಮೊಬೈಲ್ ನಂಬರ್ ಅನ್ನು ಹುಡುಕುತ್ತಿದ್ದಾಗ ಅಪರಾಧಿಯು ಮನೆಯೊಳಗೆ ನುಗ್ಗಿ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದ. ಆತನಿಂದ ತಪ್ಪಿಸಿಕೊಂಡು ಬಾಲಕಿ ಓಡಿ ಹೋಗುವಾಗ ಬಿದ್ದು ಬಲ ಕೈನ ಮೊಣಕೈಗೆ ಗಾಯವಾಗಿತ್ತು. ಬಾಲಕಿಯ ತಂದೆ ಈ ಕುರಿತು ಪ್ರಕರಣ ದಾಖಲಿಸಿದ್ದರು. 

ADVERTISEMENT

ಸಬ್‌ಇನ್‌ಸ್ಪೆಕ್ಟರ್‌ ಕೆ.ಬಿ.ಅಚ್ಚಮ್ಮ ಅವರು ತನಿಖೆ ನಡೆಸಿ ಅಪರಾಧಿಯನ್ನು ಬಂಧಿಸಿ, ಪೋಕ್ಸೋ ಕಾಯ್ದೆ ಅಡಿ ದೋಷಾರೋಪ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ಪ್ರಧಾನ ಜಿಲ್ಲಾ ಮತ್ತು ಸೆಷೆನ್ಸ್ ನ್ಯಾಯಾಧೀಶರಾದ ಹೊಸಮನಿ ಪುಂಡಲೀಕ ಅವರು ಅಪರಾಧಿ ನಂದಕುಮಾರ್‌ಗೆ 3 ವರ್ಷ ಜೈಲು ಶಿಕ್ಷೆ ಹಾಗೂ ₹ 3 ಸಾವಿರ ದಂಡ ವಿಧಿಸಿದರು. ನೊಂದ ಬಾಲಕಿಗೆ ₹ 1 ಲಕ್ಷ ಪರಿಹಾರ ನೀಡಬೇಕು ಎಂದು ಆದೇಶಿಸಿದರು.

ಸರ್ಕಾರದ ಪರವಾಗಿ ವಿಶೇಷ ಪಬ್ಲಿಕ್ ಪ್ರಾಸಿಕ್ಯೂಟರ್ ಬಿ.ಎಸ್‌.ರುದ್ರಪ್ರಸನ್ನ ವಾದ ಮಂಡಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.