
ಮಡಿಕೇರಿ: ಕೊಡಗು ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂಖ್ಯೆ ಮಿತಿ ಮೀರಿದ್ದು, ಈಚೆಗಷ್ಟೇ ಪೊನ್ನಂಪೇಟೆಯಲ್ಲಿ ಮನುಷ್ಯರ ಮೇಲೆ ದಾಳಿ ಮಾಡುವ ಮೂಲಕ ಆತಂಕ ಸೃಷ್ಟಿಸಿವೆ. ಜೊತೆಗೆ, ಕಳೆದ ಒಂದೂವರೆ ತಿಂಗಳಿನಿಂದ ಈಚೆಗೆ ನಾಯಿ ಕಡಿತದಿಂದ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯಲು ಬರುತ್ತಿರುವವರ ಸಂಖ್ಯೆಯಲ್ಲೂ ಗಣನೀಯ ಏರಿಕೆಯಾಗಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಮೂಲಗಳು ತಿಳಿಸಿವೆ.
ಮಡಿಕೇರಿ ನಗರದ ಮಹದೇವಪೇಟೆಯ ಮಾರುಕಟ್ಟೆಯ ಹಿಂಬದಿಯ ಮಟನ್ ಮಾರುಕಟ್ಟೆಯ ಬಳಿ ನಿಂತರೆ ಒಮ್ಮೆಗೆ 25ಕ್ಕೂ ಹೆಚ್ಚು ನಾಯಿಗಳು ಕಣ್ಣಿಗೆ ಬೀಳುತ್ತವೆ. ಅಲ್ಲಿ ಮಾತ್ರವಲ್ಲ, ಈಗಂತೂ ಎಲ್ಲೆಂದರಲ್ಲಿ ನಾಯಿಗಳೇ ಕಾಣಿಸುತ್ತಿವೆ. ಪರಿಸ್ಥಿತಿ ಹೀಗೆಯೇ ಮುಂದುವರಿದರೆ ನಗರದ ತುಂಬೆಲ್ಲ ಕುರಿ ಮಂದೆಯಂತೆ ನಾಯಿಗಳ ಮಂದೆಯೇ ಸೃಷ್ಟಿಯಾಗಿ, ಜನರು ಓಡಾಡುವುದೇ ಕಷ್ಟಕರವಾಗಿ ಪರಿಣಮಿಸಬಹುದು.
ಇಷ್ಟೊಂದು ಸಂಖ್ಯೆಯಲ್ಲಿ ನಾಯಿಗಳು ಹೆಚ್ಚಳವಾಗುವುದಕ್ಕೆ ಕಾರಣವಾದರೂ ಏನು ಎಂಬುದನ್ನು ಹುಡುಕುತ್ತಾ ಹೋದಾಗ ತಿಳಿದಿದ್ದು, ಇಲ್ಲಿನ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಆಗದೇ ಇರುವುದು. ಕಳೆದ ಕೆಲವಾರು ವರ್ಷಗಳಿಂದಲೂ ಈ ಪ್ರಕ್ರಿಯೆ ನಡೆದಿಲ್ಲ. ಹೀಗಾಗಿ, ನಾಯಿಗಳ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇವೆ.
ನಗರಸಭೆಯೂ ಕೈಕಟ್ಟಿ ಕುಳಿತಿಲ್ಲ. ಮೇಲಿಂದ ಮೇಲೆ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಕುರಿತು ಟೆಂಡರ್ ಪ್ರಕಟಣೆಯನ್ನು ಹೊರಡಿಸುತ್ತಲೆ ಇದೆ. ಅರ್ಹರು ಅರ್ಜಿ ಹಾಕಿಲ್ಲ. ಪರಿಸ್ಥಿತಿ ಹೇಗಿದೆ ಎಂದರೆ, ಅರ್ಹ ಸಂಘ, ಸಂಸ್ಥೆಗಳು ಮುಂದೆ ಬಂದಲ್ಲಿ ತಕ್ಷಣವೇ ಟೆಂಡರ್ ಕರೆದು ಅವರಿಗೆ ಕೊಡಲಾಗುವುದು ಎಂದು ಸ್ವತಃ ನಗರಸಭೆಯ ಪೌರಾಯುಕ್ತ ಎಚ್.ಆರ್.ರಮೇಶ್ ಹೇಳುತ್ತಾರೆ.
ನಾಯಿಗಳ ಸಂತಾನಶಕ್ತಿ ಹರಣಕ್ಕೆ ಸರ್ಕಾರ ನಿಗದಿ ಮಾಡಿರುವ ಹಣ ತೀರಾ ಕಡಿಮೆ ಎಂಬ ಕಾರಣಕ್ಕೆ ಸಂಘ, ಸಂಸ್ಥೆಗಳು ಟೆಂಡರ್ ಪಡೆಯಲು ಮುಂದಾಗಿಲ್ಲ ಎಂಬ ಮಾತೂ ಇದೆ. ಇದಕ್ಕೆ ಪ್ರತಿಕ್ರಿಯಿಸಿರುವ ಪೌರಾಯುಕ್ತ ರಮೇಶ್ ಅವರು, ‘ಸರ್ಕಾರ ನೀಡುವ ಹಣದ ಜೊತೆಗೆ ನಗರಸಭೆಯಿಂದಲೇ ಹೆಚ್ಚುವರಿ ಹಣ ನೀಡುತ್ತೇವೆ’ ಎಂದು ಹೇಳುತ್ತಾರೆ. ಇಷ್ಟಾದರೂ, ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವಂತಹ ಸಂಘ, ಸಂಸ್ಥೆಗಳೇ ನಗರಸಭೆಗೆ ಸಿಗುತ್ತಿಲ್ಲ.
ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಿಯಮಗಳು ಕಠಿಣವಾಗಿರುವುದರಿಂದ ಸಂಘ, ಸಂಸ್ಥೆಗಳು ಇದರತ್ತ ಆಸಕ್ತಿ ತೋರುತ್ತಿಲ್ಲ. ನಾಯಿಗಳನ್ನು ಹಿಡಿದು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಿ, ಚೇತರಿಸಿಕೊಂಡ ನಂತರ ಎಲ್ಲಿ ಹಿಡಿದಿದ್ದಾರೋ ಅದೇ ಜಾಗಕ್ಕೆ ಬಿಡಬೇಕಾದ ನಿಯಮ ಇದೆ. ಇದರೊಂದಿಗೆ ಕೊಡಗು ಗುಡ್ಡಗಾಡು ಪ್ರದೇಶವಾಗಿರುವುದರಿಂದ ಇಲ್ಲಿ ಬೇರೆ ಜಿಲ್ಲೆಗೆ ಹೋಲಿಸಿದರೆ ಹೆಚ್ಚಿನ ಖರ್ಚು ತಗುಲುತ್ತದೆ. ಹಾಗಾಗಿ, ಹೆಚ್ಚಿನ ಸಂಘ, ಸಂಸ್ಥೆಗಳು ಟೆಂಡರ್ ಪಡೆಯುವುದಕ್ಕೆ ನಿರಾಸಕ್ತಿ ತೋರಿವೆ.
ಇವುಗಳನ್ನೆಲ್ಲ ಮನಗಂಡು ಸರ್ಕಾರ ನಿಗದಿ ಮಾಡಿದ ಹಣಕ್ಕಿಂತ ಹೆಚ್ಚಿನ ಹಣ ಕೊಡುವುದಾಗಿ ನಗರಸಭೆ ಹೇಳಿದರೂ ಸಂಘ, ಸಂಸ್ಥೆಗಳು ಟೆಂಡರ್ ಪಡೆಯಲು ಮುಂದಾಗುತ್ತಿಲ್ಲ. ಇದರಿಂದ ನಗರದ ನಾಯಿಗಳ ಸಂತಾನಕ್ಕೆ ಮಿತಿಯೇ ಇಲ್ಲದಾಗಿದ್ದು, ನಾಯಿಗಳ ಸಂಖ್ಯೆ ನಿರಂತರ ಏರಿಕೆ ಕಾಣುತ್ತಿದೆ.
ಕೊಡಗಿನ ಕೆಲವೆಡೆ ಬೀದಿನಾಯಿಗಳಿಗಿಂತ ಹೆಚ್ಚಾಗಿ ಸಾಕುನಾಯಿಗಳೇ ಜನರಿಗೆ ಉಪಟಳ ನೀಡುತ್ತಿವೆ. ಮಡಿಕೇರಿಯ ಮುತ್ತಪ್ಪ ದೇವಸ್ಥಾನ ರಸ್ತೆಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಬಡಾವಣೆಯಲ್ಲಿರುವ ಬೀದಿ ನಾಯಿಗಳು ಯಾರಿಗೂ ಕಚ್ಚದೇ ಸುಮ್ಮನಿವೆ. ಆದರೆ, ಅಲ್ಲಿನ ಮನೆಯೊಂದರ ಸಾಕು ನಾಯಿ ಮಾತ್ರ ಸಾಕಷ್ಟು ಶಾಲಾ ವಿದ್ಯಾರ್ಥಿಗಳಿಗೆ ಕಚ್ಚಿದೆ. ಸಾಕು ನಾಯಿಯೊಂದರ ಈ ಉಪಟಳ ನೀಗಿಸಿ ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಈಚೆಗೆ ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಸಮುದಾಯ ವೈದ್ಯಶಾಸ್ತ್ರ ವಿಭಾಗ ಏರ್ಪಡಿಸಿದ್ದ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ಎಲ್ಲ ತಜ್ಞರೂ ಎಲ್ಲ ಇಲಾಖೆಯ ಸಹಭಾಗಿತ್ವದಿಂದ ಮಾತ್ರ ರೇಬಿಸ್ ನಿಯಂತ್ರಿಸಲು ಸಾಧ್ಯ ಎಂದು ಪ್ರತಿಪಾದಿಸಿದರು.
ಸಮುದಾಯ ವೈದ್ಯಶಾಸ್ತ್ರ ವಿಭಾಗ ಮಾತ್ರವಲ್ಲ, ಪಶುವೈದ್ಯಕೀಯ ಇಲಾಖೆ, ನಗರಸಭೆ ಸೇರಿದಂತೆ ಇತರೆ ಎಲ್ಲ ಇಲಾಖೆಗಳ ಸಹಭಾಗಿತ್ವದಿಂದ ಮಾನವರನ್ನು ರೇಬಿಸ್ ಮುಕ್ತರನ್ನಾಗಿ ಮಾಡಬಹುದು ಎಂದು ಹೇಳಲಾಯಿತು.
40 ದಿನಗಳಲ್ಲಿ 15 ಸಾವಿರ ನಾಯಿಗಳಿಗೆ ರೇಬಿಸ್ ನಿರೋಧಕ ಲಸಿಕೆ: ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯು ಕಳೆದ 40 ದಿನಗಳಲ್ಲಿ ಸಾಕು ನಾಯಿಗಳೂ ಸೇರಿದಂತೆ ಒಟ್ಟು 15 ಸಾವಿರ ನಾಯಿಗಳಿಗೆ ರೇಬಿಸ್ ಲಸಿಕೆ ನೀಡಿದೆ. ವಿಶ್ವ ರೇಬಿಸ್ ದಿನದಂದು ಆರಂಭವಾಗಿರುವ ಈ ಅಭಿಯಾನವು ನಿರಂತರವಾಗಿ ಮುಂದುವರಿಯಲಿದೆ. ಒಟ್ಟು ಕೊಡಗು ಜಿಲ್ಲೆಯಲ್ಲಿ 42 ಸಾವಿರ ನಾಯಿಗಳಿವೆ. ಇಷ್ಟೂ ನಾಯಿಗಳಿಗೂ ರೇಬಿಸ್ ನಿರೋಧಕ ಲಸಿಕೆ ಹಾಕುವ ಗುರಿ ಹೊಂದಿದ್ದೇವೆ. ಈ ಲಸಿಕೆಯನ್ನು ಪ್ರತಿ ವರ್ಷ ಹಾಕಿಸಬೇಕು. ಇನ್ನು ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಇಲಾಖೆ ವತಿಯಿಂದ ವೈದ್ಯರ ನಿಯೋಜನೆ ರೇಬಿಸ್ ನಿರೋಧಕ ಲಸಿಕೆ ನೀಡಿದೆ ಸೇರಿದಂತೆ ಅಗತ್ಯ ಸಹಕಾರ ನೀಡುತ್ತೇವೆ.ಡಾ.ಲಿಂಗರಾಜ ದೊಡ್ಡಮನಿ ಉಪನಿರ್ದೇಶಕರು ಪಶುಪಾಲನಾ ಪಶು ವೈದ್ಯಕೀಯ ಸೇವಾ ಇಲಾಖೆ.
ಒಂದೂವರೆ ತಿಂಗಳಿಂದ ನಾಯಿಕಡಿತ: ಹೆಚ್ಚಳ ಕಳೆದ ಒಂದೂವರೆ ತಿಂಗಳಿನಿಂದ ನಾಯಿ ಕಡಿತ ಪ್ರಕರಣಗಳ ಸಂಖ್ಯೆ ಏರಿಕೆಯಾಗಿದೆ. ಮುಂಚೆ ದಿನಕ್ಕೆ 8–10 ಮಂದಿ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯಲು ಬರುತ್ತಿದ್ದರು. ಒಂದೂವರೆ ತಿಂಗಳಿನಿಂದ ಈಚೆಗೆ ದಿನಕ್ಕೆ 12ರಿಂದ 14 ಮಂದಿ ರೇಬಿಸ್ ರೋಗ ನಿರೋಧಕ ಲಸಿಕೆ ಪಡೆಯುತ್ತಿದ್ದಾರೆ. ಕೆಲವೊಂದು ದಿನಗಳಲ್ಲಿ ಇವರ ಸಂಖ್ಯೆ ದಿನಕ್ಕೆ 16ನ್ನೂ ಮುಟ್ಟಿದೆ. ಬಂದ ಎಲ್ಲರಿಗೂ ಉಚಿತವಾಗಿ ಲಸಿಕೆ ನೀಡುತ್ತಿದ್ದೇವೆ.ಡಾ.ಕೆ.ಕೃತಿಕಾ ರೇಬಿಸ್ ನೋಡಲ್ ಅಧಿಕಾರಿ.
ಟೆಂಡರ್ ಕರೆದರೂ ಯಾರೂ ಬಂದಿಲ್ಲ; ಬೀದಿನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಸಲು ಸಾಕಷ್ಟು ಬಾರಿ ಟೆಂಡರ್ ಕರೆದಿದ್ದೇವೆ. ಆದರೂ ಯಾವುದೇ ಅರ್ಹ ಸಂಸ್ಥೆ ಟೆಂಡರ್ ಪಡೆಯಲಿಲ್ಲ. ಕೊಡಗು ಜಿಲ್ಲೆಯಲ್ಲಿ ಬೀದಿ ನಾಯಿಗಳ ಸಂತಾನಶಕ್ತಿ ಹರಣ ಶಸ್ತ್ರಚಿಕಿತ್ಸೆಯಲ್ಲಿ ಭಾಗವಹಿಸಲು ಈ ಕ್ಷೇತ್ರದಲ್ಲಿ ಕೆಲಸ ಮಾಡುವವರು ಆಸಕ್ತಿ ತೋರುತ್ತಿಲ್ಲ. ಸರ್ಕಾರ ಒಂದು ನಾಯಿಗೆ ಕೊಡುವ ₹ 1650ಕ್ಕೆ ಇನ್ನಷ್ಟು ಹಣ ಸೇರಿಸಿ ಕೊಡುತ್ತೇವೆ.ಎಚ್.ಆರ್.ರಮೇಶ್ ಮಡಿಕೇರಿ ನಗರಸಭೆಯ ಪೌರಾಯುಕ್ತ.
ಬೀದಿನಾಯಿಗಳನ್ನು ನಿಯಂತ್ರಿಸಲೇಬೇಕು: ಬೀದಿನಾಯಿಗಳ ನಿಯಂತ್ರಣ ಮಾಡಲೇಬೇಕು. ಈಗ ಹೆಚ್ಚುತ್ತಿರುವ ಅವುಗಳ ಸಂಖ್ಯೆ ನೋಡಿದರೆ ನಿಜಕ್ಕೂ ಆತಂಕ ಮೂಡುತ್ತದೆ. ಬೀದಿನಾಯಿಗಳಿಗೆಂದೇ ಶೆಡ್ ಮಾಡಿರಿ. ನಾವು ಅವುಗಳಿಗೆ ಆಹಾರ ಹಾಗೂ ಆರೋಗ್ಯ ಸೌಲಭ್ಯ ನೀಡುತ್ತೇವೆ ಎಂದು ಸಾಕಷ್ಟು ಸಂಘ ಸಂಸ್ಥೆಗಳು ಜನರು ಹೇಳುತ್ತಿದ್ದಾರೆ. ಈ ನಿಟ್ಟಿನಲ್ಲೂ ಕಾನೂನಿನ ಪ್ರಕಾರ ಈಗಷ್ಟೇ ಸುಪ್ರೀಂಕೋರ್ಟ್ ನೀಡಿರುವ ಆದೇಶವನ್ನು ಗಮನದಲ್ಲಿರಿಸಿಕೊಂಡು ಕ್ರಮ ಕೈಗೊಳ್ಳಬೇಕಿದೆ.ಕೆ.ಎಸ್.ರಮೇಶ್ ಮಡಿಕೇರಿ ನಗರಸಭೆಯ ಹಿರಿಯ ಸದಸ್ಯ.
ಅನಾಹುತ ಸಂಭವಿಸುವುದಕ್ಕೆ ಮುಂಚೆ ಎಚ್ಚೆತ್ತುಕೊಳ್ಳಿ: ನಾಯಿಗಳು ಈಗಿನಂತೆ ಹಿಂದೆಯೂ ಇದ್ದವು. ಅವುಗಳಿಗೆ ಜನರು ಹಿಂದೆ ಊಟ ಹಾಕುತ್ತಿದ್ದರು. ಜನರಿಗೆ ಸ್ವಲ್ಪವೂ ಸಹನೆಯೂ ಇಲ್ಲ. ಅಸಮತೋಲನ ಉಂಟಾಗಿದೆ. ನಗರಸಭೆಯು ನಾಯಿಗಳ ನಿಯಂತ್ರಣಕ್ಕೆ ಸಾಧ್ಯವಿರುವ ಎಲ್ಲ ರೀತಿಯ ಕ್ರಮಗಳನ್ನೂ ಕಾನೂನು ಪ್ರಕಾರವೇ ಕೈಗೊಳ್ಳಬೇಕು. ಇದು ನಗರಸಭೆಯ ಜವಾಬ್ದಾರಿ. ಅನಾಹುತ ಸಂಭವಿಸುವುದಕ್ಕೆ ಮುಂಚೆ ಇದಕ್ಕೆ ಸಂಬಂಧಿಸಿ ಎಲ್ಲ ಇಲಾಖೆಯವರೂ ಸೂಕ್ತ ಕ್ರಮಗಳನ್ನು ಕೈಗೊಳ್ಳಬೇಕಿತ್ತುಗೀತಾ ಗಿರೀಶ್ ಹಣಕಾಸು ಸಲಹೆಗಾರರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.