ಮಡಿಕೇರಿ: ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ದಿನಗಣನೆ ಆರಂಭವಾಗಿದ್ದರೂ ಮಡಿಕೇರಿ – ತಲಕಾವೇರಿ ರಸ್ತೆಗೆ ದುರಸ್ತಿ ಭಾಗ್ಯ ಒದಗಿಸಿಲ್ಲ ಎಂಬ ಅಸಮಾಧಾನ ಜನಸಾಮಾನ್ಯರಲ್ಲಿದೆ.
ಆಕಾಶದಲ್ಲಿರುವ ನಕ್ಷತ್ರಗಳನ್ನು ಎಣಿಸಲು ಹೇಗೆ ಸಾಧ್ಯವಿಲ್ಲವೋ ಹಾಗೆಯೇ ಈ ರಸ್ತೆಯಲ್ಲಿರುವ ಗುಂಡಿಗಳನ್ನೂ ಎಣಿಸಲು ಅಸಾಧ್ಯ ಎಂಬ ಭಾವನೆ ಈ ರಸ್ತೆಯಲ್ಲಿ ಒಮ್ಮೆ ಸಂಚರಿಸಿದವರಿಗೆ ಬಂದೇ ಬರುತ್ತದೆ. ಸಹಜವಾಗಿಯೇ ಈ ವಿಷಯ ಕಾಂಗ್ರೆಸ್ ಮತ್ತು ಬಿಜೆಪಿ ನಡುವಣ ವಾಕ್ಸ್‌ಮರಕ್ಕೂ ಕಾರಣವಾಗಿದೆ.
ಕೊಡಗಿನಲ್ಲಿ ಅಭಿವೃದ್ಧಿ ಹೇಗಿದೆ ಎಂಬುದನ್ನು ತಿಳಿಯಬೇಕಾದರೆ ಮಡಿಕೇರಿ– ತಲಕಾವೇರಿ ರಸ್ತೆಯ ಸ್ಥಿತಿ ನೋಡಿದರೆ ಸಾಕು ಎಂದು ಬಿಜೆಪಿ ಟೀಕಿಸಿದರೆ, ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಈಚೆಗೆ ಸುದ್ದಿಗೋಷ್ಠಿ ನಡೆಸಿ, ಈ ಮೊದಲು ಇಲ್ಲಿ ದಶಕಗಳ ಕಾಲ ಶಾಸಕರಾಗಿದ್ದವರು ಈ ರಸ್ತೆ ಇಷ್ಟು ಬೇಗ ಹಾಳಾಗಲು ಕಾರಣ ಏನು ಎಂಬುದಕ್ಕೆ ಉತ್ತರಿಸಬೇಕು ಎಂದು ಸವಾಲೆಸಿದಿದ್ದರು.
ಈ ಎರಡೂ ರಾಜಕೀಯ ಪಕ್ಷಗಳ ಆರೋಪ ಮತ್ತು ಪ್ರತ್ಯಾರೋಪಗಳ ಮಧ್ಯೆ ಈ ರಸ್ತೆಯಲ್ಲಿ ಸಂಚರಿಸುವವರ ಸಾರ್ವಜನಿಕರ ಪಾಡು ಹೇಳತೀರದಾಗಿದೆ. ಇನ್ನು ಕಾವೇರಿ ಪವಿತ್ರ ತೀರ್ಥೋದ್ಭವಕ್ಕೆ ಕೇವಲ ಮೂರು ದಿನಗಳಷ್ಟೇ ಉಳಿದಿದ್ದರೂ ಒಂದೇ ಒಂದು ಗುಂಡಿಗೆ ಕನಿಷ್ಠ ಪಕ್ಷ ವೆಟ್‌ಮಿಕ್ಸ್ ಹಾಕಿ ಮುಚ್ಚದಿರುವುದು ಸಾರ್ವಜನಿಕರ ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿದೆ.
ಮಡಿಕೇರಿ ದಸರೆಗೂ ಹಿಂದಿನ ದಿನ ವೆಟ್‌ಮಿಕ್ಸ್ ಹಾಕಿ ಗುಂಡಿಗಳನ್ನು ತಿಪ್ಪೆ ಸಾರಿಸಿದಂತೆ ತರಾತುರಿಯಲ್ಲಿ ಮುಚ್ಚಲಾಯಿತು. ದಸರೆ ಕಳೆಯುತ್ತಿದ್ದಂತೆ ಹಲವೆಡೆ ಗುಂಡಿಗಳು ಕಣ್ಣಿಗೆ ಬೀಳುತ್ತಿವೆ. ಕರಗ ಹೊರಡುವ ಮುಖ್ಯರಸ್ತೆಯಾದ ಮಹದೇವಪೇಟೆಯಲ್ಲೂ ಗುಂಡಿಗಳು ಈಗಾಗಲೇ ಮೂಡಿವೆ. ಇದೇ ಬಗೆಯ ಕಾಮಗಾರಿ ತೀರ್ಥೋದ್ಭವದ ವೇಳೆ ನಡೆಯಲಿದೆಯೇ ಎಂಬ ಅನುಮಾನವೂ ಮೂಡಿದೆ.
ರಾಜಕೀಯ ನಾಯಕರು, ಅಧಿಕಾರಿಗಳು ಮಡಿಕೇರಿ–ತಲಕಾವೇರಿ ರಸ್ತೆಯ ದುರಾವಸ್ಥೆಗೆ ಮಳೆಯೇ ಕಾರಣ ಎಂದು ದೂರುತ್ತಾರೆ. ಮಳೆಯ ಮೇಲೆಯೆ ಎಲ್ಲ ಹೊಣೆ ಹೊರಿಸಿ ತಾವುಗಳು ನುಣುಚಿಕೊಳ್ಳಲು ಯತ್ನಿಸುತ್ತಿದ್ದಾರೆ. ಆದರೆ, ಇದು ಎಷ್ಟರಮಟ್ಟಿಗೆ ಸರಿ ಎಂದು ನಾಗರಿಕರು ಪ್ರಶ್ನಿಸುತ್ತಿದ್ದಾರೆ.
ಮಳೆ ಆರಂಭವಾಗಿದ್ದು ಮೇ ಅಂತ್ಯದಲ್ಲಿ. ಜನವರಿಯಿಂದ ಮೇ ಮಧ್ಯ ಭಾಗದವರೆಗೂ ಈ ರಸ್ತೆಯಲ್ಲಿ ಸರ್ವಋತು ರಸ್ತೆಯನ್ನಾಗಿಸುವ ಎಲ್ಲ ಅವಕಾಶಗಳನ್ನೂ ಮಳೆ ನೀಡಿತ್ತು. ಆದರೆ, ಈ ಸಮಯದಲ್ಲಿ ಯೋಜನೆ ರೂಪಿಸದೇ, ಟೆಂಡರ್ ಕರೆಯದೇ ರಾಜಕೀಯ ನಾಯಕರು, ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಸುಮ್ಮನಿದ್ದರು. ಈಗ ತೀರ್ಥೋದ್ಭವ ಸಮೀಪಿಸುತ್ತಿದ್ದಂತೆ ನಿದ್ದೆಯಿಂದ ಎದ್ದವರಂತೆ ಟೆಂಡರ್ ಕರೆದು ಎಲ್ಲ ಪ್ರಕ್ರಿಯೆಗಳೂ ಮುಗಿದಿದ್ದು, ಮಳೆ ನಿಂತ ಬಳಿಕ ಕಾಮಗಾರಿ ಆರಂಭಿಸುತ್ತೇವೆ ಎನ್ನುತ್ತಿದ್ದಾರೆ. ಹಾಗಿದ್ದರೆ, ಬೇಸಿಗೆಯಲ್ಲಿ ಸಮರೋಪಾದಿಯಾಗಿ ಸರ್ವಋತು ರಸ್ತೆಯನ್ನೇಕೆ ನಿರ್ಮಿಸಲಿಲ್ಲ ಎಂದು ಸಾರ್ವಜನಿಕರು ಪ್ರಶ್ನಿಸುತ್ತಾರೆ.
ಶನಿವಾರಷ್ಟೇ ಕಾರೊಂದು ಗುಂಡಿ ತಪ್ಪಿಸಲು ಹೋಗಿ ಮಗುಚಿ ಬಿತ್ತು. ಅದೃಷ್ಟವಶಾತ್ ಕಾರಿನಲ್ಲಿದ್ದವರಿಗೆ ಹೆಚ್ಚಿನ ಗಾಯಗಳಾಗಲಿಲ್ಲ. ಇದೇ ರೀತಿ ರಸ್ತೆ ಗುಂಡಿಗಳಿಂದ ಅನೇಕ ಮಂದಿ ದ್ವಿಚಕ್ರ ವಾಹನ ಸವಾರರು ಬಿದ್ದು ಗಾಯಗೊಂಡರೂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗದೇ ಇರುವುದರಿಂದ ಗುಂಡಿಯಿಂದಾಗುವ ಅಪಘಾತಗಳ ಸಂಖ್ಯೆ ಲೆಕ್ಕಕ್ಕೆ ಸಿಕ್ಕುವುದಿಲ್ಲ.
ಶಾಶ್ವತ ರಸ್ತೆ ನಿರ್ಮಾಣಕ್ಕೆ ನಿರ್ವಹಣೆಗೆ ಟೆಂಡರ್
ಈಗಾಗಲೆ ಮಡಿಕೇರಿ–ತಲಕಾವೇರಿ ರಸ್ತೆ ನಿರ್ವಹಣೆಗೆ ಹಾಗೂ ಶಾಶ್ವತ ರಸ್ತೆ ನಿರ್ಮಾಣಕ್ಕೆ ಟೆಂಡರ್ ಆಗಿದ್ದು ಕೆಲಸ ಆರಂಭಿಸಬೇಕಿದೆ. ಮಳೆ ಮುಂದುವರಿದಿರುವುದರಿಂದ ಕೆಲಸ ಆರಂಭವಾಗಿಲ್ಲ. ಈ ಕುರಿತು ‘ಪ್ರಜಾವಾಣಿ’ಗೆ ಪ್ರತಿಕ್ರಿಯಿಸಿದ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್ ಗಿರೀಶ್ ‘ಶಾಶ್ವತ ರಸ್ತೆ ನಿರ್ಮಾಣಕ್ಕಾಗಿ ಅಪ್ಪಂಗಳದಿಂದ ಬೆಟ್ಟಗೇರಿಯವರೆಗೆ ₹ 4 ಕೋಟಿ ಚೇರಾಂಬಾಣೆಯವರಗೆ ₹ 1.5 ಕೋಟಿ ಭಾಗಮಂಡಲದಿಂದ ಚೆಟ್ಟಿಮಾನಿಯವರಗೆ ₹ 3 ಕೋಟಿ ತಲಕಾವೇರಿ ಸಮೀಪ ₹ 1 ಕೋಟಿ ಹೀಗೆ ಒಟ್ಟು ₹ 11.50 ಕೋಟಿ ಮೊತ್ತಕ್ಕೆ ಟೆಂಡರ್ ಆಗಿದೆ. ಮಳೆ ನಿಂತು ಭೂಮಿ ಒಣಗಿದ ಕೂಡಲೇ ಕಾಮಗಾರಿ ಆರಂಭವಾಗಲಿದೆ’ ಎಂದು ಹೇಳುತ್ತಾರೆ. ಇನ್ನು ರಸ್ತೆಯಲ್ಲಿರುವ ಗುಂಡಿಗಳನ್ನು ತಾತ್ಕಾಲಿಕವಾಗಿ ಪವಿತ್ರ ತೀರ್ಥೋದ್ಭವಕ್ಕೆ ಮುಚ್ಚಲೂ ಸಹ ಟೆಂಡರ್ ಆಗಿದೆ. ಮಡಿಕೇರಿ–ತಲಕಾವೇರಿ ರಸ್ತೆಗೆ ₹ 50 ಲಕ್ಷ ಕಡಂಗದಿಂದ ತಲಕಾವೇರಿಗೆ ₹ 60 ಲಕ್ಷ ಟೆಂಡರ್ ಆಗಿದೆ. ಮಳೆ ನಿಂತು ಗುಂಡಿಗಳಲ್ಲಿರುವ ನೀರು ಒಣಗಿದ ಬಳಿಕ ವೆಟ್‌ಮಿಕ್ಸ್ ಹಾಕಿ ಮುಚ್ಚಲಾಗುತ್ತದೆ. ನಂತರ ನಿರಂತರವಾಗಿ ಜಾತ್ರೆ ಮುಗಿಯುವವರೆಗೂ ಗಸ್ತು ತಿರುಗಿ ಎಲ್ಲೆಲ್ಲಿ ಗುಂಡಿ ಕಾಣಿಸುತ್ತದೋ ಅಲ್ಲಿ ವೆಟ್‌ಮಿಕ್ಸ್ ಹಾಕಲಾಗುತ್ತದೆ ಎಂದು ಅವರು ತಿಳಿಸುತ್ತಾರೆ. ಈಗಾಗಲೇ ಸುಮಾರು 50ಕ್ಕೂ ಅಧಿಕ ಮಂದಿ ರಸ್ತೆಬದಿಯಲ್ಲಿರುವ ಗಿಡಗಂಟಿಗಳನ್ನು ತೆರವುಗೊಳಿಸುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.